ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ

ಕೋಲಾರ:- ಕೋವಿಡ್ ಸೋಂಕಿನ ಆತಂಕದಲ್ಲೂ ನ್ಯಾಯ ವಿಲೇವಾರಿ ವಿಳಂಬವಾಗದಂತೆ ವೀಡಿಯೋ ಕಾನ್ಫರೆನ್ಸ್ ಮೂಲಕ ಪ್ರಕರಣಗಳ ವಿಚಾರಣೆ ನಡೆಸುತ್ತಿದ್ದು, ಇದರ ಸದುಪಯೋಗ ಪಡೆದುಕೊಳ್ಳುವಂತೆ ಒಂದನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಡಿ.ಪವನೇಶ್ ಕರೆ ನೀಡಿದರು.
ಶುಕ್ರವಾರ ನಗರದ ಜಿಲ್ಲಾ ಕಾರಗೃಹದಲ್ಲಿ ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘ, ಕಾರಾಗೃಹ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ವಿಚಾರಣಾಧೀನ ಖೈದಿಗಳಿಗಾಗಿ ಹಮ್ಮಿಕೊಂಡಿದ್ದ ಕೋವಿಡ್ ಮಾರ್ಗಸೂಚಿಗಳಡಿ ಪಾಲಿಸಬೇಕಾದ ನಿಯಮಗಳ ಕುರಿತ ಕಾನೂನು ಅರಿವು-ನೆರವು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು.
ಕೋವಿಡ್ ಸಾಂಕ್ರಾಮಿಕ ರೋಗದಿಂದಾಗಿ ಜನಜೀವನ ಅಸ್ಥವ್ಯಸ್ತಗೊಂಡಿದೆ, ಆರ್ಥಿಕತೆಗೂ ಪೆಟ್ಟು ಬಿದ್ದಿದೆ, ನ್ಯಾಯಾಂಗ ವ್ಯವಸ್ಥೆಯ ಕಾರ್ಯಕಲಾಪಗಳಿಗೂ ಅಡ್ಡಿಯಾಗಿದೆ ಎಂದು ತಿಳಿಸಿದರು.
ಆದರೂ ವಿಚಾರಣಾಧೀನ ಖೈದಿಗಳಿಗೆ ನ್ಯಾಯ ವಿಲೇವಾರಿ ವಿಳಂಬವಾಗದಂತೆ ನ್ಯಾಯಾಲಯ ಕ್ರಮವಹಿಸಿದೆ, ಅನೇಕ ಪ್ರಕರಣಗಳನ್ನು ವೀಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆ ನಡೆಸಲಾಗಿದೆ ಮತ್ತು ಹಲವು ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ ಎಂದು ತಿಳಿಸಿದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರಿದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ಸಿ.ಹೆಚ್.ಗಂಗಾಧರ್ ಮಾತನಾಡಿ, ಕೋವಿಡ್ ಸೋಂಕು ಇಂದು ಸಮಾಜವನ್ನು ತತ್ತರಿಸುವಂತೆ ಮಾಡಿದೆ, ಇದರ ತಡೆಗೆ ಸರ್ಕಾರ ಸೂಚಿಸಿರುವ ಮಾರ್ಗಸೂಚಿ ನಿಯಮಗಳ ಪಾಲನೆ ಕಡ್ಡಾಯವಾಗಿದೆ ಎಂದು ತಿಳಿಸಿದರು.
ಖೈದಿಗಳು ಕಾರಗೃಹದಲ್ಲೂ ಸಾಮಾಜಿಕ ಅಂತರ ಕಾಪಾಡಿಕೊಳ್ಳಿ ಎಂದು ಸಲಹೆ ನೀಡಿದ ಅವರು ಸೋಂಕಿನ ಲಕ್ಷಣ ಕಂಡು ಬಂದರೆ ಜೈಲು ಸಿಬ್ಬಂದಿಯ ಗಮನಕ್ಕೆ ತಂದು ಚಿಕಿತ್ಸೆ ಪಡೆದುಕೊಳ್ಳಿ ಎಂದು ಸಲಹೆ ನೀಡಿದರು.
ಕಾನೂನು ಸೇವಾ ಪ್ರಾಧಿಕಾರ ಉಚಿತ ಕಾನೂನು ನೆರವು ನೀಡುತ್ತಿದೆ, ಮಹಿಳೆಯರು,ವಿಕಲಚೇತನರು, ಆರ್ಥಿಕವಾಗಿ ಹಿಂದುಳಿದ ಎಲ್ಲರಿಗೂ ಈ ಸೌಲಭ್ಯವಿದ್ದು, ವಿಚಾರಣಾಧೀನ ಖೈದಿಗಳು ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಕರೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ವಕೀಲರ ಸಂಘದ ಅಧ್ಯಕ್ಷ ಜಿ.ಶ್ರೀಧರ್, ಕಾನೂನು ಅರಿವು-ನೆರವು ಕಾರ್ಯಕ್ರಮಗಳಿಗೆ ವಕೀಲರ ಸಂಘ ಸಂಪೂರ್ಣ ಸಹಕಾರ ನೀಡಿದೆ, ಪ್ರಕರಣಗಳ ಶೀಘ್ರ ಇತ್ಯರ್ಥಕ್ಕೆ ಕಟಿಬದ್ದವಾಗಿದೆ ಎಂದು ತಿಳಿಸಿದರು.
ವಿಚಾರಣಾಧೀಕಣ ಖೈದಿಗಳು ಕಾನೂನಿನ ಅರಿವು ಪಡೆದುಕೊಳ್ಳಿ, ಇದರಿಂದ ಜೀವನದಲ್ಲಿ ತಪ್ಪು ಮಾಡದೇ ಎಚ್ಚರವಹಿಸಬಹುದು, ನಮ್ಮ ಸಂವಿಧಾನ, ಕಾನೂನುಗಳಿಗೆ ಗೌರವ ನೀಡುವ ಹೊಣೆ ಎಲ್ಲರದ್ದೂ ಆಗಿದೆ ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಕಾರಾಗೃಹ ಇಲಾಖೆ ಅಧೀಕ್ಷಕರಾದಕೆ.ಎನ್.ಮೋಹನ್ ಕುಮಾರ್, ವಿಚಾರಣಾ ಬಂಧಿಗಳ ಹಕ್ಕುಗಳ ಬಗ್ಗೆ ಮಾತನಾಡಿ, ಖೈದಿಗಳಿಗೂ ಕಾನೂನಿನಲ್ಲಿ ಹಕ್ಕುಗಳಿವೆ, ಅಂತಹ ಹಕ್ಕುಗಳನ್ನು ಪಡೆಯಲು ನೀವು ಪ್ರಾಧಿಕಾರದ ನೆರವು ಪಡೆಯಬಹುದು ಎಂದರು.
ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ರಘುಪತಿಗೌಡ, ಈ ದೇಶದಲ್ಲಿ ಹುಟ್ಟಿದ ಪ್ರತಿಯೊಬ್ಬರೂ ಕನಿಷ್ಟ ದೈನಂದಿನ ಬದುಕಿನಲ್ಲಿ ಅಗತ್ಯವಿರುವ ಕಾನೂನುಗಳ ಅರಿವು ಪಡೆದಿರಬೇಕು, ಕಾನೂನಿನ ಜತೆಗೆ ಮಾನವೀಯತೆಯನ್ನು ಬೆಳೆಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಹಿರಿಯ ವಕೀಲ ಕೆ.ಆರ್.ಧನರಾಜ್ ಖೈದಿಗಳಿಗೆ ಶಿಕ್ಷೆಯಲ್ಲಿ ವಿನಾಯತಿ ಕುರಿತು ಮಾತನಾಡಿ, ಅಪರಾಧಗಳಿಂದ ಮುಕ್ತ ಜೀವನ ನಡೆಸಿ, ಮಾಡಿದ ತಪ್ಪು ಒಪ್ಪಿಕೊಂಡರೆ ಶಿಕ್ಷೆಯ ಪ್ರಮಾಣವೂ ಕಡಿಮೆಯಾಗುತ್ತದೆ, ಮತ್ತೆ ನೀವು ಸಮಾಜದಲ್ಲಿ ಉತ್ತಮ ಜೀವನ ನಡೆಸಲು ಸಹಕಾರಿ ಎಂದರು.
ಕಾರ್ಯಕ್ರಮದಲ್ಲಿ ಕಾರಾಗೃಹದಲ್ಲಿನ ಖೈದಿಗಳು ಪಾಲ್ಗೊಂಡು ಅರಿವು ಪಡೆದುಕೊಂಡರು.
