ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ
ಶ್ರೀನಿವಾಸಪುರ: ಗಂಗಾ ಕಲ್ಯಾಣ ಯೋಜನೆಯಲ್ಲಿ ಅಕ್ರಮ ನಡೆಸಿರುವ ವ್ಯಕ್ತಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಗಂಗಾ ಕಲ್ಯಾಣ ಯೋಜನೆ ವಿಶೇಷ ಸದನ ಸಮಿತಿ ಅಧ್ಯಕ್ಷ ಹಾಗೂ ವಿಧಾನ ಪರಿಷತ್ ಸದಸ್ಯ ಡಾ. ವೈ.ಎ.ನಾರಾಯಣಸ್ವಾಮಿ ಹೇಳಿದರು.
ಪಟ್ಟಣದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಮಂಗಳವಾರ ಏರ್ಪಡಿಸಿದ್ದ ಗಂಗಾ ಕಲ್ಯಾಣ ಯೋಜನೆ ವಿಶೇಷ ಸದನ ಸಮಿತಿ ಸಭೆಯಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿ ಮಾತನಾಡಿದ ಅವರು, ಗಂಗಾ ಕಲ್ಯಾಣ ಯೋಜನೆ ಅಧಿಕಾರಿಗಳು ಮಾಡಿರುವ ಅಕ್ರಮಗಳ ಬಗ್ಗೆ ಬಹಳಷ್ಟು ದೂರುಗಳು ಬಂದಿವೆ ಎಂದು ಹೇಳಿದರು.
ಗಂಗಾ ಕಲ್ಯಾಣ ಯೋಜನೆಯಡಿ ಕೃಷಿ ಉಪಯೋಗಕ್ಕೆ ಕೊಳವೆ ಬಾವಿ ಕೊರೆದು ಹತ್ತು ವರ್ಷವಾಗಿದ್ದರೂ ಪಂಪ್‍ಸೆಟ್ ಅಳವಡಿಸಿಲ್ಲ. ಪಂಪ್‍ಸೆಟ್ ಅಳವಡಿಸಿದರುವ ಕೊಳವೆ ಬಾವಿಗಳಿಗೆ ವಿದ್ಯುತ್ ಸಂಪರ್ಕ ನೀಡಿಲ್ಲ. ಫಲಾನುಭವಿಗಳಿಗೆ ಕೊಳವೆ ಬಾವಿ ಮಂಜೂರಾಗಿ ಐದು ವರ್ಷ ಕಳೆದಿದ್ದರೂ, ಕೊಳವೆ ಬಾವಿ ನಿರ್ಮಿಸಿಲ್ಲ. ಈ ಎಲ್ಲಾ ಅವಾಂತರಗಳ ಬಗ್ಗೆ ತನಿಖೆ ನಡೆಸಿ ವರದಿ ನೀಡುವಂತೆ ಇಲಾಖೆ ಕಾರ್ಯನಿರ್ವಾಹಕ ನಿರ್ದೇಕರಿಗೆ ಆದೇಶಿಸಲಾಗಿದೆ ಎಂದು ಹೇಳಿದರು.
ಸರ್ಕಾರ ನೀರಿಲ್ಲದೆ ಹಣವಿಲ್ಲ ಎಂಬ ಷರತ್ತು ಹಾಕಿರುವುದರಿಂದ, ಗಂಗಾ ಕಲ್ಯಾಣ ಯೋಜನೆಯಲ್ಲಿ ಕೊರೆಯಲಾಗಿರುವ ಎಲ್ಲ ಕೊಳವೆ ಬಾವಿಗಳಲ್ಲೂ ನೀರಿದೆ ಎಂದು ವರದಿ ಮಾಡಲಾಗಿದೆ. ಆದರೆ ಈ ಪ್ರದೇಶದಲ್ಲಿ 10 ಕೊಳವೆ ಬಾವಿ ನಿರ್ಮಿಸಿದರೂ, ಒಂದು ಕೊಳವೆ ಬಾವಿಯಲ್ಲಿ ನೀರು ಸಿಗುವುದು ಅಪರೂಪವಾಗಿದೆ. ವರದಿ ಸುಳ್ಳೆಂಬುದುದಕ್ಕೆ ಇಷ್ಟು ಸಾಕು ಎಂದು ಅಭಿಪ್ರಾಯಪಟ್ಟರು.
ವಿಧಾನ ಪರಿಷತ್ ಸದಸ್ಯರಾದ ಇಂಚರ ಗೋವಿಂದರಾಜು, ಚಿದಾನಂದ ಎಂ.ಗೌಡ, ಗಂಗಾ ಕಲ್ಯಾಣ ಯೋಜನೆ ವಿಶೇಷ ಸದನ ಸಮಿತಿ ಸದಸ್ಯರಾದ ಡಿ.ಆರ್.ಫಾರೂಕ್, ಎಸ್.ರವಿ, ಗಣಪತಿ ದಉಮ್ಮ ಉಳ್ಳೇಕರ್, ಕೆ.ಪ್ರತಾಪ್ ಸಿಂಹ ನಾಯಕ್, ತಹಶೀಲ್ದಾರ್ ಎಸ್.ಎಂ.ಶ್ರೀನಿವಾಸ್, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಎಸ್.ಆನಂದ್ ಇದ್ದರು.ಇದ್ದರು.