ಶಾಲಾ ಕಾಲೇಜು ಆವರಣ ಪ್ರವೇಶಿಸಿ ಅನೈತಿಕ ಚಟುವಟಿಕೆ ವಿರುದ್ಧ ಕಾನೂನು ಕ್ರಮ :ಶಾಸಕ ಕೆ.ಆರ್.ರಮೇಶ್ ಕುಮಾರ್

ಶ್ರೀನಿವಾಸಪುರ: ಶಾಲಾ ಕಾಲೇಜು ಆವರಣ ಪ್ರವೇಶಿಸಿ ಅನೈತಿಕ ಚಟುವಟಿಕೆ ನಡೆಸುವ ವ್ಯಕ್ತಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ಕೆ.ಆರ್.ರಮೇಶ್ ಕುಮಾರ್ ಹೇಳಿದರು.
ಪಟ್ಟಣದ ಪುರಸಭಾ ಕಚೇರಿ ಸಭಾಂಗಣದಲ್ಲಿ ಸೋಮವಾರ ಏರ್ಪಡಿಸಿದ್ದ ಶಿಕ್ಷಣ ಇಲಾಖೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ವಿದ್ಯಾ ಸಂಸ್ಥೆಗಳ ಪಾವಿತ್ರ್ಯತೆ ಉಳಿಸಲು ಪೂರಕವಾದ ಕ್ರಮ ಕೈಗೊಳ್ಳಲು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಜಿಲ್ಲಾ ಸಾರ್ವಜನಿಕ ಇಲಾಖೆ ಉಪ ನಿರ್ದೇಶದಕರನ್ನು ಭೇಟಿಯಾಗಿ ಚರ್ಚಿಸಲಾಗುವುದು ಎಂದು ಹೇಳಿದರು.
ಕೆಲವರು ಸರ್ಕಾರಿ ಶಾಲಾ ಕಾಲೇಜು ಆವರಣದಲ್ಲಿ ಕುಡಿಯುವುದು, ಜೂಜಾಡುವುದು ಮುಂತಾದ ಚಟುವಟಿಯಲ್ಲಿ ತೊಡಗಿರುವುದನ್ನು ಕಂಡರೆ ಹೃದಯ ಕಿತ್ತುಬರುತ್ತದೆ. ಅದನ್ನು ತಡೆಯಲು ಸಿಸಿ ಕ್ಯಾಮೆರಾ ಅಳವಡಿಸಲಾಗುವುದು. ಅಂಥ ತಿಳಿಗೇಡಿಗಳನ್ನು ಹಿಡಿದು ನ್ಯಾಯಾಲಯದಲ್ಲಿ ನಿಲ್ಲಿಸಿದಾಗ ಮಾತ್ರ ಬುದ್ಧಿ ಬರುತ್ತದೆ ಎಂದು ಅಭಿಪ್ರಾಯಪಟ್ಟರು.
ಶಿಕ್ಷಕರು ವಿದ್ಯಾರ್ಥಿಗಳನ್ನು ತಮ್ಮ ಮಕ್ಕಳಂತೆ ಭಾವಿಸಿ ಪಾಠ ಹೇಳಬೇಕು. ಯಾವುದೇ ಖಾಸಗಿ ಶಾಲೆಗಿಂತ ಕಡಿಮೆ ಇಲ್ಲದಂತೆ ಶಿಕ್ಷಣದ ಗುಣಮಟ್ಟ ಕಾಯ್ದುಕೊಳ್ಳಬೇಕು ಎಂದು ಹೇಳಿದರು.
ಮಕ್ಕಳ ಸಂಖ್ಯೆ ಹೆಚ್ಚಾಗಿರುವ ಸರ್ಕಾರಿ ಕಿರಿಯ ಹಾಗೂ ಹಿರಿಯ ಪ್ರಾಥಮಿಕ ಶಾಲೆಗಳಿಗೆ ಅಗತ್ಯವಾದ ಕಟ್ಟಡ ನಿರ್ಮಿಸಿ ಕೊಡಲಾಗುವುದು. ಶಾಲೆಗೆ ಕಾಂಪೌಂಡ್, ಗೇಟ್, ಸುರಕ್ಷಿತ ಶುದ್ಧ ಕುಡಿಯುವ ನೀರು ಒದಗಿಸಲಾಗುವುದು. ವಿದ್ಯಾರ್ಥಿಗಳು ಹಾಗೂ ಶಿಕ್ಷಕರಿಗೆ ಪ್ರತ್ಯೇಕವಾಗಿ ಶೌಚಾಲಯ ನಿರ್ಮಿಸಲಾಗುವುದು. ಮಕ್ಕಳ ಕಲಿಕೆಗೆ ಪೂರಕವಾದ ಪುಸ್ತಕ ಭಂಡಾರ, ಪ್ರಯೋಗ ಶಾಲೆ, ಸಿಸಿ ಕ್ಯಾಮೆರಾ, ಸಭಾಂಗಣ ಇತ್ಯಾದಿಗಳನ್ನು ಒದಗಿಸಲಾಗುವುದು.
ಸಭೆಯಲ್ಲಿ ಕ್ಷೇತ್ರದ ಪ್ರತಿ ಪ್ರೌಢ ಶಾಲೆ ಹಾಗೂ ಕಾಲೇಜಿನ ಮುಖ್ಯಸ್ಥರೊಂದಿಗೆ ಸಂಸ್ಥೆಯ ಅಗತ್ಯತೆಗಳ ಬಗ್ಗೆ ಚರ್ಚಿಸಲಾಯಿತು.
ಕ್ಷೇತ್ರ ಶಿಕ್ಷಣಾಧಿಕಾರಿ ವಿ.ಉಮಾದೇವಿ, ಪುರಸಭಾಧ್ಯಕ್ಷೆ ಎಂ.ಎನ್.ಲಲಿತಾ ಶ್ರೀನಿವಾಸ್, ಪಿಎಲ್‍ಡಿ ಬ್ಯಾಂಕ್ ಅಧ್ಯಕ್ಷ ದಿಂಬಾಲ ಅಶೋಕ್, ಡಿಸಿಸಿ ಬ್ಯಾಂಕ್ ನಿದೇಶಕ ವೆಂಕಟರೆಡ್ಡಿ, ಮುಖಂಡರಾದ ಅಯ್ಯಪ್ಪ, ಸತ್ಯನಾರಾಯಣ ಇದ್ದರು.