ಶ್ರೀನಿವಾಸಪುರ: ಕೋಲಾರ ಜಿಲ್ಲೆ ಶ್ರೀನಿವಾಸಪುರ ತಾಲ್ಲೂಕಿನ ರೋಜರನಹಳ್ಳಿ ಕ್ರಾಸ್ ನಲ್ಲಿ ಕರ್ನಾಟಕ ಪ್ರಾಂತ ರೈತ ಸಂಘದ ನೇತೃತ್ವದಲ್ಲಿ ಬಗರ್ ಹುಕುಂ ಸಾಗುವಳಿ ಸಕ್ರಮಕ್ಕಾಗಿ, ಪಿ ನಂಬರ್ ಭೂಮಿಯನ್ನು ದುರಸ್ತಿ ಮಾಡಿ ಹೊಸ ನಂಬರ್ ಕೊಡಬೇಕೆಂದು, ನಿವೇಶನ ರಹಿತರಿಗೆ ನಿವೇಶನ ಹಂಚಿಕೆ ಮಾಡಲು ಒತ್ತಾಯಿಸಿ, ರೈತರ ಮೇಲೆ ನಿರಂತರವಾಗಿ ಅರಣ್ಯ ಇಲಾಖೆಯವರ ದೌರ್ಜನ್ಯವನ್ನು ವಿರೋಧಿಸಿ ರೈತರ ಸಮಾವೇಶವನ್ನು ಏರ್ಪಡಿಸಲಾಗಿತ್ತು. ಈ ಸಮಾವೇಶದಲ್ಲಿ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಾತಕೋಟ ನವೀನ್ ಕುಮಾರ್ ಮತ್ತು ಜಿಲ್ಲಾಧ್ಯಕ್ಷರಾದ ಟಿ.ಎಂ.ವೆಂಕಟೇಶ್ ಮಾತನಾಡಿ ಈ ಸಮಸ್ಯೆಗಳ ಪರಿಹಾರಕ್ಕಾಗಿ ರೈತ ಸಂಘದಿಂದ ನಿರಂತರವಾಗಿ ಹೋರಾಟಗಳನ್ನು ನಡೆಸುತ್ತಿದ್ದು ಫೆಬ್ರವರಿ 10ನೇ ತಾರೀಖುನಿಂದ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ರೈತರ ಅನಿರ್ದಿಷ್ಟ ಹೋರಾಟ ನಡೆಯುತ್ತಿದ್ದು ಈ ಹೋರಾಟದಲ್ಲಿ ಶ್ರೀನಿವಾಸಪುರ ತಾಲ್ಲೂಕಿನ ಕಸಬಾ ಹೋಬಳಿಯ ರೈತರು ಮತ್ತು ಕೋಲಾರ ತಾಲ್ಲೂಕಿನ ಹೊಳೂರು ಹೋಬಳಿಯ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ತಮ್ಮ ಭೂಮಿಯ ಹಕ್ಕನ್ನು ಪಡೆಯಲು ಮುಂದಾಗ ಬೇಕೆಂದು ಮನವಿ ಮಾಡಿದರು.
ಇದೇ ಸಂದರ್ಭದಲ್ಲಿ ರೈತ ಮುಖಂಡ ಶ್ರೀರಾಮ ಮಾತನಾಡಿ ಹೊಳೂರು ಹೋಬಳಿಯಿಂದ ನೂರು ಜನ ಶ್ರೀನಿವಾಸಪುರ ತಾಲ್ಲೂಕಿನ ಕಸಬಾ ಹೋಬಳಿಯಿಂದ ನೂರು ಜನ ರೈತರು ಭಾಗವಹಿಸುತ್ತೇವೆ. ಬೆಂಗಳೂರಿನಲ್ಲಿ ನಡೆಯುವ ಹೋರಾಟದಲ್ಲಿ ಎಲ್ಲಾ ರೈತರಿಗೂ ಊಟದ ವ್ಯವಸ್ಥೆಗಾಗಿ ತರಕಾರಿಗಳನ್ನು ತರುತ್ತೇವೆ ಎಂದು ತಿಳಿಸಿದರು.
ಜಿ ಮಂಜುಳ ಮಾತನಾಡಿ ನಿವೇಶನ ರಹಿತರ ಮಹಿಳೆಯರನ್ನು ಹೆಚ್ಚಿನ ಸಂಖ್ಯೆಯಲ್ಲಿ ಬೆಂಗಳೂರಿನ ಹೋರಾಟಕ್ಕೆ ಸಂಘಟಿಸುತ್ತೇವೆಂದು ತಿಳಿಸಿದರು.
ನೂತನವಾಗಿ ಭೂಮಿ ಹೋರಾಟ ಸಮಿತಿಯನ್ನು ರಚನೆ ಮಾಡಲಾಯಿತು. ಅಧ್ಯಕ್ಷರಾಗಿ ಮುದುವಾಡಿ ಹೊಸಹಳ್ಳಿ ಶ್ರೀರಾಮ. ಉಪಾಧ್ಯಕ್ಷರಾಗಿ ಹೂವಳ್ಳಿ ವೆಂಕಟಲಕ್ಷ್ಮಮ್ಮ, ಮುದುವಾಡಿ ವೆಂಕಟಸಾಮಿ, ಕಾರ್ಯದರ್ಶಿಯಾಗಿ ದಳಸನೂರು ಯಲ್ಲಪ್ಪ, ಜಂಟಿ ಕಾರ್ಯದರ್ಶಿಗಳಾಗಿ ಕುಪ್ಪಹಳ್ಳಿ ಶಂಕರ, ಮುದುವಾಡಿ ರಮೇಶ್, ಸದಸ್ಯರಾಗಿ ದಳಸನೂರು ಭಾಷಾಸಾಬ್, ರಜಾಕ್, ರಾಮಪ್ಪ, ಕುಪ್ಪಹಳ್ಳಿ ಧನುಷ್, ಡೈರಿ ಉಲ್ಲಾಸಪ್ಪ, ಬಂಗವಾದಿ ರವಿ, ಹೂವಳ್ಳಿ ಡೈರಿ ಸೋಮಶೇಖರ್, ಮುದುವಾಡಿ ಮನೋಹರ್, ರಾಜಾಸಾಬ್, ಚಂದ್ರಪ್ಪ,ತ ತೊಟ್ಲಿಗಾನಹಳ್ಳಿ ವೆಂಕಟರವಣಪ್ಪ, ಟೀಚರ್ ಮುನಿರೆಡ್ಡಿ ಮುಂತಾದವರಿದ್ದರು.