ಕೋಲಾರ : ಉಪನ್ಯಾಸಕರು ತಮ್ಮ ವಿದ್ಯಾರ್ಥಿಗಳ ಉಜ್ವಲ ಭವಿಷ್ಯಕ್ಕಾಗಿ ಶ್ರಮಪಡಬೇಕು. ಆ ಮೂಲಕ ಜಿಲ್ಲೆಗೆ ಕೀರ್ತಿಯನ್ನು ತರಬೇಕು. ಈ ನಿಟ್ಟಿನಲ್ಲಿ ಎಲ್ಲರೂ ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದು ಜಿಲ್ಲಾಧಿಕಾರಿಗಳಾದ ಅಕ್ರಂ ಪಾಷ ಅವರು ತಿಳಿಸಿದರು.
ಇಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಪದವಿ ಪೂರ್ವ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ, ಜಿಲ್ಲೆಯ ಸರ್ಕಾರಿ ಮತ್ತು ಅನುದಾನಿತ ಪದವಿ ಪೂರ್ವ ಕಾಲೇಜುಗಳ ಪ್ರಾಂಶುಪಾಲರು, ಉಪನ್ಯಾಸಕರುಗಳಿಗೆ ಒಂದು ದಿನದ ಶೈಕ್ಷಣಿಕ ಕಾರ್ಯಾಗಾರ ಸಮಾರಂಭವನ್ನು ಉದ್ದೇಶಿಸಿ ಅವರು ಮಾತನಾಡಿದರು.
ಎಲ್ಲಾ ಉಪನ್ಯಾಸಕರು ಜಿಲ್ಲೆಯಲ್ಲಿ ದ್ವಿತೀಯ ಪಿ.ಯು.ಸಿ ಫಲಿತಾಂಶವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಕೋಲಾರ ಜಿಲ್ಲೆಯು ಕೃಷಿಕ ಪ್ರಧಾನವಾದ ಜಿಲ್ಲೆಯಾಗಿರುವುದರಿಂದ ಬಹಳಷ್ಟು ವಿದ್ಯಾರ್ಥಿಗಳು ಕೃಷಿಕ ಕುಟುಂಬದಿಂದ ಬಂದಿರುತ್ತಾರೆ. ಅವರಿಗೆ ಸೂಕ್ತ ಮಾರ್ಗದರ್ಶನ ನೀಡಿ ಅವರ ಜೀವನದ ಪ್ರಮುಖ ಘಟ್ಟವಾದ ಕಾಲೇಜು ಹಂತವನ್ನು ಯಶಸ್ವಿಯಾಗಿ ದಾಟಲು ಹಾಗೂ ಅವರ ಭವಿಷ್ಯವನ್ನು ರೂಪಿಸಿಕೊಳ್ಳಲು ಅನುವು ಮಾಡಿಕೊಡಬೇಕು ಎಂದು ತಿಳಿಸಿದರು.
ಕಳೆದ ಸಾಲಿನಲ್ಲಿ ಪಿ.ಯು.ಸಿ ಫಲಿತಾಂಶದಲ್ಲಿ ಜಿಲ್ಲೆಯು ರಾಜ್ಯದಲ್ಲಿ 14ನೇ ಸ್ಥಾನವನ್ನು ಪಡೆದಿದ್ದು, ಇದನ್ನು ಮೊದಲ 5 ಸ್ಥಾನಗಳೊಳಗೆ ಪಡೆಯಲು ವಿದ್ಯಾರ್ಥಿಗಳಲ್ಲಿ ಹುರುಪು ತುಂಬಬೇಕು.
ಸರ್ಕಾರಿ ಕಾಲೇಜುಗಳಿಗೆ ಬರುವ ಮಕ್ಕಳಿಗೆ ಜವಾಬ್ದಾರಿಯುತವಾಗಿ ಸತ್ಪಜೆಗಳಾಗುವಂತೆ ರೂಪಿಸುವ ಹೊಣೆ ಹೊರಬೇಕು. ಜಿಲ್ಲೆಯು ಫಲಿತಾಂಶ ಮತ್ತು ಗುಣಮಟ್ಟದ ವಿದ್ಯಾಭ್ಯಾಸದಲ್ಲಿ ರಾಜ್ಯಕ್ಕೆ ಮಾದರಿಯಾಗಬೇಕು. ಒಂದೊಮ್ಮೆ ಜಿಲ್ಲೆಯ ಬಗ್ಗೆ ಅಧಿಕಾರಿ ವೃಂದಗಳಲ್ಲಿ ಮಾತನಾಡಿಕೊಳ್ಳುತ್ತಿದಂತೆ ಅತಿ ಹೆಚ್ಚು ಅಧಿಕಾರಿಗಳನ್ನು ಸರ್ಕಾರಿ ಸೇವೆಗೆ ನೀಡುವ ಜಿಲ್ಲೆಯಾಗಿ ಮಾಡಬೇಕು ಎಂದು ತಿಳಿಸಿದರು.
ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಹಣಾಧಿಕಾರಿಗಳಾದ ಪದ್ಮ ಬಸವಂತಪ್ಪ ರವರು ಮಾತನಾಡಿ ಪಿ.ಯು.ಸಿ ವಿದ್ಯಾರ್ಥಿಗಳು ಸಮಾಜದ ಉನ್ನತ ಆದರ್ಶಗಳನ್ನು ಮೈಗೂಡಿಸಿಕೊಳ್ಳಲು ಉಪನ್ಯಾಸಕರು ಪ್ರೇರೇಪಿಸಬೇಕು. ಜಿಲ್ಲೆಯ ಪಿ.ಯು.ಸಿ ವಿಜ್ಞಾನ ವಿದ್ಯಾರ್ಥಿಗಳಿಗೆ ಸಿ.ಇ.ಟಿ ಮತ್ತು ನೀಟ್ ಪರೀಕ್ಷೆಗಳ ತಯಾರಿಗಾಗಿ ವಿಶೇಷ ವಿಡಿಯೋ ತರಗತಿಗಳನ್ನು ನಡೆಸಲು ಯೋಜಿಸಲಾಗುತ್ತಿದೆ. ಜಿಲ್ಲೆಯಲ್ಲಿ ಹೆಚ್ಚಿನ ವಿದ್ಯಾರ್ಥಿಗಳು ಇದನ್ನು ಸದುಪಯೋಗಪಡಿಸಿಕೊಳ್ಳುವಂತೆ ತಿಳಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ. ನಾರಾಯಣ ರವರು ಮಾತನಾಡಿ ಮಕ್ಕಳ ಸುರಕ್ಷತೆಗಾಗಿ ಪಾಲಕರು ಮೊಬೈಲ್ ದೂರವಾಣಿಗಳನ್ನು ವಿದ್ಯಾರ್ಥಿಗಳಿಗೆ ಕೊಡಿಸುತ್ತಾರೆ. ಆದರೆ ತಮ್ಮ ಮಕ್ಕಳು ಆ ಮೊಬೈಲ್ಗಳನ್ನು ದುರುಪಯೋಗಪಡಿಸಿಕೊಳ್ಳದಂತೆ ಜಾಗ್ರತೆ ವಹಿಸಬೇಕು. ತರಗತಿಗಳ ವೇಳೆಯಲ್ಲಿ ಉಪನ್ಯಾಸಕರು ಕಡ್ಡಾಯವಾಗಿ ಮೊಬೈಲ್ ಫೋನ್ಗಳನ್ನು ಅನುಮತಿಸಬಾರದು.
ಕಾಲೇಜುಗಳಲ್ಲಿ ಯಾವುದೇ ರೀತಿಯ ಅಹಿತಕರ ಘಟನೆ, ಮಾದಕ ವಸ್ತುಗಳ ಉಪಯೋಗ ಅಥವಾ ಕಾನೂನು ಭಂಗ ಪಡಿಸುವ ಚಟುವಟಿಕೆಗಳು ಕಂಡು ಬಂದಲ್ಲಿ ಜಿಲ್ಲಾ ಪೊಲೀಸರ ನೆರವನ್ನು ಪಡೆಯಬೇಕು. ಇತ್ತೀಚೆಗೆ ಹೆಚ್ಚಾಗಿರುವ ಸೈಬರ್ ಅಪರಾಧ ಪ್ರಕರಣಗಳಲ್ಲಿ ಹೆಚ್ಚಾಗಿ ಯುವಕ/ಯುವತಿಯರು ಭಾಗಿಯಾಗುತ್ತಿರುವುದು ಕಳವಳಕಾರಿಯಾಗಿದೆ.
ವಿದ್ಯಾರ್ಥಿಗಳಲ್ಲಿ ಶಿಸ್ತು ಮೂಡಿಸಬೇಕಾದ್ದು, ನಮ್ಮೆಲ್ಲರ ಕರ್ತವ್ಯವಾಗಿದೆ. ಜಿಲ್ಲೆಯ ಎಲ್ಲಾ ಶಾಲಾ ಕಾಲೇಜುಗಳಲ್ಲಿ ನಿರಂತರವಾಗಿ ಅಪರಾಧ ತಡೆ ಜಾಗೃತಿ ಸಭೆಗಳನ್ನು ನಡೆಸಲಾಗುತ್ತಿದೆ. ಇವುಗಳ ಸದುಪಯೋಗ ಪಡಿಸಿಕೊಳ್ಳಲು ವಿನಂತಿಸಿದರು.
ಸಭೆಯಲ್ಲಿ ಕೆ.ಜಿ.ಎಫ್. ಪೊಲೀಸ್ ವರಿಷ್ಠಾಧಿಕಾರಿಗಳಾದ ಶಾಂತರಾಜ್, ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ರಾಮಚಂದ್ರಪ್ಪ, ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಬಾಲಕೃಷ್ಣ, ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.