ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ

ಶ್ರೀನಿವಾಸಪುರ: ಶಾಸಕ ಕೆ.ಆರ್.ರಮೇಶ್ ಕುಮಾರ್ ಗುರುವಾರ ವಿಧಾನ ಸಭೆಯಲ್ಲಿ ಅತ್ಯಾಚಾರ ಕುರಿತು ಆಡಿದ ಮಾತನ್ನು ಖಂಡಿಸಿ ತಾಲ್ಲೂಕು ಬಿಜೆಪಿ, ಹಾಗೂ ಜೆಡಿಎಸ್ ಕಾರ್ಯಕರ್ತರು ಪ್ರತ್ಯೇಕವಾಗಿ ಮೆರವಣಿಗೆ ನಡೆಸಿ, ಕೆ.ಆರ್.ರಮೇಶ್ ಕುಮಾರ್ ಪ್ರತಿಕೃತಿಯನ್ನು ಸುಟ್ಟುಹಾಕಿದರು.
ಪುರಸಭಾಧ್ಯಕ್ಷೆ ಎಂ.ಎನ್.ಲಲಿತಾ ಶ್ರೀನಿವಾಸ್ ಪ್ರತಿಭಟನಕಾರರನ್ನು ಉದ್ದೇಶಿಸಿ ಮಾತನಾಡಿ, ‘ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲದಿದ್ದರೆ ಅತ್ಯಾಚಾರವನ್ನು ಆನಂದಿಸಿ ಎಂಬ ಮಾತಿದೆ’ ಎಂದು ಕಾಂಗ್ರೆಸ್ ಶಾಸಕ ಕೆ.ಆರ್.ರಮೇಶ್ ಕುಮಾರ್ ಅವರು ವಿಧಾನಸಭೆಯಲ್ಲಿ ಗುರುವಾರ ಹೇಳಿರುವುದು ಖಂಡನೀಯ. ಅವರ ಮಾತು ಮಹಿಳಾ ಸಮುದಾಯ ಹಾಗೂ ಭಾರತೀಯ ಸಂಸ್ಕøತಿಗೆ ಮಾಡಿರುವ ಅಪಚಾರ ಎಂದು ಹೇಳಿದರು.
ರಾಜ್ಯ ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಬಿ.ವಿ.ಶಿವಾರೆಡ್ಡಿ ಮಾತನಾಡಿ, ವಿಧಾನಸಭೆಯ ಹಿರಿಯ ಸದಸ್ಯರಾದ ಕೆ.ಆರ್.ರಮೇಶ್ ಕುಮಾರ್ ಅವರ ಬಾಯಿ ತೆವಲಿನಿಂದ ತಾಲ್ಲೂಕಿನ ಜನರಿಗೆ ಅವಮಾನವಾಗಿದೆ. ಮಹಿಳೆಯರ ಬಗ್ಗೆ ಕ್ಷುಲ್ಲಕವಾಗಿ ಮಾತನಾಡಿರುವ ಅವರು ಕ್ಷಮೆ ಕೋರಿದರೆ ಸಾಲದು, ವಿಧಾನಸಭಾಧ್ಯಕ್ಷರು ಅವರನ್ನು ಸದನದಿಂದ ಅಮಾನತು ಪಡಿಸಬೇಕು ಎಂದು ಒತ್ತಾಯಿಸಿದರು.

ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ತೂಪಲ್ಲಿ ಆರ್.ನಾರಾಯಣಸ್ವಾಮಿ, ಪುರಸಭಾ ಸದಸ್ಯ ಬಿ.ವೆಂಕಟರೆಡ್ಡಿ, ವಕೀಲ ಕೆ.ಶಿವಪ್ಪ ಮಾತನಾಡಿ, ಶಾಸಕ ಕೆ.ಆರ್.ರಮೇಶ್ ಕುಮಾರ್ ಸದನದಲ್ಲಿ ಅತ್ಯಾಚಾರ ಕುರಿತು ಆಡಿದ ಮಾತನ್ನು ಖಂಡಿಸಿದರು. ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಆಗ್ರಿಹಿಸಿದರು.
ಈ ಸಂದರ್ಭದಲ್ಲಿ ಪಟ್ಟಣದ ಎಂ.ಜಿ ರಸ್ತೆಯಲ್ಲಿ ಶಾಸಕ ಕೆ.ಆರ್.ರಮೇಶ್ ಕುಮಾರ್ ಅವರ ಪ್ರತಿಕೃತಿ ದಹಿಸಲಾಯಿತು. ಅವರ ವಿರುದ್ಧ ಘೋಷಣೆ ಕೂಗಲಾಯಿತು. ತಮ್ಮ ಬೇಡಿಕೆಗಳನ್ನು ಒಳಗೊಂಡ ಮನವಿ ಪತ್ರವನ್ನು ತಶೀಲ್ದಾರ್ ಎಸ್.ಎಂ.ಶ್ರೀನಿವಾಸ್ ಅವರಿಗೆ ನೀಡಿದರು.
ಮುಖಂಡರಾದ ಮಂಜುನಾಥರೆಡ್ಡಿ, ಪೂಲ ಶಿವಾರೆಡ್ಡಿ, ಆಯಿಷಾ ನಯಾಜ್, ವೇಣುಗೋಪಾಲರೆಡ್ಡಿ, ಚಂಗಪ್ಪ ಇದ್ದರು.
ಬಿಜೆಪಿ ಪ್ರತಿಭಟನೆ: ಪಟ್ಟಣದ ಸರ್ಕಾರಿ ಬಸ್ ನಿಲ್ದಾಣದ ಸಮೀಪ ಕೆ.ಆರ್.ರಮೇಶ್ ಕುಮಾರ್ ಅವರ ಪ್ರತಿಕೃತಿ ದಹನ ಮಾಡಿದ ಬಳಿಕ ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷ ಡಾ. ಕೆ.ಎನ್.ವೇಣುಗೋಪಾಲ್ ಮಾತನಾಡಿ, ತಮ್ಮನ್ನು ಬುದ್ಧಿ ಜೀವಿಯೆಂದು ಬಿಂಬಿಸಿಕೊಂಡಿರುವ ಶಾಸಕ ಕೆ.ಆರ್.ರಮೇಶ್ ಕುಮಾರ್, ಸದನದಲ್ಲಿ ಅತ್ಯಾಚಾರದಂಥ ಅಮಾನವೀಯ ಕೃತ್ಯದ ಬಗ್ಗೆ ತೀರಾ ಲಘುವಾಗಿ ಮಾತನ್ನಾಡಿದ್ದಾರೆ. ಅಂಥ ಗಂಭೀರ ಸಂಗತಿಯನ್ನು ತಮಾಷೆಗೂ ಆ ರೀತಿ ಹೇಳಬಾರದಿತ್ತು. ಮಾತಿನ ಭರದಲ್ಲಿ ಏನನ್ನಾದರೂ ಮಾತನಾಡಬಹುದು ಎಂದು ತಿಳಿಯುವುದು ತಪ್ಪಾಗುತ್ತದೆ ಎಂದು ಹೇಳಿದರು.
ತಾಲ್ಲೂಕು ಬಿಜೆಪಿ ಅಧ್ಯಕ್ಷ ಎ.ಅಶೋಕರೆಡ್ಡಿ ಮುಖಂಡರಾದ ವೆಂಕಟಮುನಿಯಪ್ಪ, ರಾಮಾಂಜಿ, ಎಸ್.ವಿನೋದ್ ಕುಮಾರ್, ರಮೇಶ್, ಷಫಿವುಲ್ಲಾ, ಶಿವಶಂಕರ್, ರಾಜು, ಮಾಲಾ ಇದ್ದರು.