ಕೋಲಾರ : ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯ ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನ ಬೆಳೆ ವಿಮೆಗೆ ಹೆಸರು ನೋಂದಾಯಿಸುವ ಮೂಲಕ ರೈತರು ತಮ್ಮ ಬೆಳೆಗಳಿಗೆ ಬೆಳೆವಿಮೆ ಮಾಡಿಸಿಕೊಳ್ಳಬೇಕೆಂದು ಜಿಲ್ಲಾಧಿಕಾರಿಗಳಾದ ಅಕ್ರಂ ಪಾಷ ಅವರು ತಿಳಿಸಿದರು.
ಇಂದು ಜಿಲ್ಲಾಧಿಕಾರಿಗಳ ಕಛೇರಿ ಆವರಣದಲ್ಲಿ ಆಯೋಜಿಸಲಾಗಿದ್ದ, ಜಿಲ್ಲಾ ಮಟ್ಟದ ಬೆಳೆ ವಿಮೆ ಜಂಟಿ ಸಮಿತಿ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡುತ್ತಿದ್ದರು.
ಪ್ರಸಕ್ತ ಸಾಲಿನ ಮುಂಗಾರು ಬೆಳೆಗಳ ವಿಮೆ ಮಾಡಿಸಲು ಬ್ಯಾಂಕ್, ಸಹಕಾರ ಸಂಘಗಳಲ್ಲಿ ಬೆಳೆ ಸಾಲ ಪಡೆದ ರೈತರಿಗೆ ಸಾಲ ಮಂಜೂರಾತಿ ವೇಳೆಯಲ್ಲಿ ವಿಮಾ ಕಂತನ್ನು ಕಡಿತಮಾಡಿಕೊಂಡೆ ಸಾಲದ ಮೊತ್ತ ನೀಡಲಾಗಿರುತ್ತದೆ. ಹೀಗಾಗಿ ರೈತರು ಬೆಳೆ ವಿಮೆ ಕಂತನ್ನು ಪ್ರತ್ಯೇಕವಾಗಿ ಕಟ್ಟುವ ಅಗತ್ಯವಿರುವುದಿಲ್ಲ.
ಮುಂಗಾರು ಹಂಗಾಮಿನ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯನ್ನು ಜಿಲ್ಲೆಯಲ್ಲಿ ಕೃಷಿ ಇಲಾಖೆಯಿಂದ ಅನುಷ್ಠಾನಗೊಳಿಸಲಾಗುತ್ತಿದ್ದು, ಪ್ರಕೃತಿ ವಿಕೋಪದಿಂದ ಬೆಳೆ ನಷ್ಟ ಸಂಭವಿಸಿದರೆ ರೈತರಿಗೆ ನಷ್ಟ ಪರಿಹಾರ ನೀಡುವ ಮೂಲಕ ಆರ್ಥಿಕ ಭದ್ರತೆ ಒದಗಿಸುವ ಯೋಜನೆಯು ಇದಾಗಿದೆ ಎಂದರು.
ವಿಮೆ ಮಾಡಿದ ಕ್ಷೇತ್ರದಲ್ಲಿ ಮಳೆ ಅಭಾವದಿಂದ ಬಿತ್ತನೆ, ನಾಟಿ ಮಾಡಲು ವಿಫಲಗೊಂಡಲ್ಲಿ ವಿಮಾ ರಕ್ಷಣೆ ಒದಗಿಸುವುದು. ಹಾಲಿಯಿರುವ ಬೆಳೆಗಳಿಗೆ (ಬಿತ್ತನೆಯಿಂದ ಕಟ್ಟಾವು ಹಂತದವರೆಗೆ) ಬರ, ಶುಷ್ಕ ಪರಿಸ್ಥಿತಿ, ನೆರೆ, ಪ್ರವಾಹಗಳಿಂದ ಬೆಳೆ ಮುಳುಗಡೆ, ಗುಡುಗು-ಮಿಂಚುಗಳಿಂದ ಉಂಟಾಗುವ ಬೆಂಕಿಯ ಅಪಘಾತ, ಭೂಕುಸಿತ, ಬಿರುಗಾಳಿ, ಚಂಡಮಾರುತ ಸಹಿತ ಮಳೆ ಹಾಗೂ ಆಕಾಲಿಕ ಮಳೆಯಿಂದ ನಷ್ಟ ಸಂಭವಿಸಿದಲ್ಲಿ ಸಮಗ್ರ ವಿಮಾ ಭದ್ರತೆಯನ್ನು ಒದಗಿಸುವುದು ಹಾಗೂ ಕಟಾವಿನ ನಂತರ ಬೆಳೆಯನ್ನು ಜಮೀನಿನಲ್ಲಿ ಒಣಗಲು ಬಿಟ್ಟ ಸಂದರ್ಭದಲ್ಲಿ (14 ದಿನಗಳವರೆಗೆ) ಆಲಿಕಲ್ಲು ಮಳೆ, ಚಂಡಮಾರುತ ಸಹಿತ ಮಳೆ ಹಾಗೂ ಆಕಾಲಿಕ ಮಳೆಯಿಂದ ಬೆಳೆ ನಷ್ಟವಾದರೆ ನಷ್ಟ ಪರಿಹಾರವನ್ನು ಒದಗಿಸುವುದು ಯೋಜನೆಯ ಪ್ರಮುಖ ಅಂಶಗಳಾಗಿರುತ್ತದೆ. ಪ್ರಸ್ತುತ ವಿಮಾ ನೋಂದಣಿ ಪ್ರಗತಿಯಲ್ಲಿದ್ದು, ಜಿಲ್ಲೆಯ ಅಧಿಸೂಚಿತ ಬೆಳೆಗಳಾದ ಮಳೆಯಾಶ್ರಿತ ನೆಲಗಡೆಲೆ (ಶೇಂಗಾ) ಬೆಳೆಗೆ ಜುಲೈ 01ರ ವರೆಗೆ ಟೊಮೆಟೊ, ಮಳೆಯಾಶ್ರಿತ ತೊಗರಿ, ಮಳೆಯಾಶ್ರಿತ ಭತ್ತ ಬೆಳೆಗಳಿಗೆ ಜುಲೈ 31ರ ವರೆಗೆ ಹಾಗೂ ನೀರಾವರಿ ಹಾಗೂ ಮಳೆಯಾಶ್ರಿತ ರಾಗಿ, ನೀರಾವರಿಯಾಶ್ರಿತ ಭತ್ತ, ಮಳೆಯಾಶ್ರಿತ ಹುರಳಿ ಬೆಳೆಗಳಿಗೆ ಆಗಸ್ಟ್ 16ರ ವರೆಗೆ ಕೊನೆಯದಿನವಾಗಿರುತ್ತದೆ. ಅಂತಿಮ ದಿನಾಂಕದವರೆಗೆ ಕಾಯದೆ ವಿಮೆಗೆ ನೋಂದಾಯಿಸಿಕೊಳ್ಳಲು ಅವರು ತಿಳಿಸಿದರು.
ರೈತರು ಹತ್ತಿರದ ಬ್ಯಾಂಕ್ ಗ್ರಾಮ-1, ಸಾಮಾನ್ಯ ಸೇವಾ ಕೇಂದ್ರಗಳು ಹಾಗೂ ಕರ್ನಾಟಕ-1 ಕೇಂದ್ರಗಳಲ್ಲಿ ವಿಮಾ ಪ್ರಸ್ತಾವನೆ, ಪಹಣಿ, ಚಾಲ್ತಿ ಬ್ಯಾಂಕ್ ಪುಸ್ತಕ, ಮೊಬೈಲ್ ಸಂಖ್ಯೆ, FRUITS ID, ಆಧಾರ್ ಸಂಖ್ಯೆಯೊಂದಿಗೆ ಪ್ರಿಮಿಯಮ್ ಪಾವತಿಸಿ ವಿಮೆಗೆ ನೋಂದಾಯಿಸಿಕೊಳ್ಳಬಹುದಾಗಿದೆ ಎಂದು ತಿಳಿಸಿದರು.
ಹೆಚ್ಚಿನ ವಿವರಗಳಿಗಾಗಿ ಹತ್ತಿರದ ರೈತ ಸಂಪರ್ಕ ಕೇಂದ್ರ ಅಥವಾ ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕರು ಅಥವಾ ವಿಮಾ ಸಂಸ್ಥೆಯ ಪ್ರತಿನಿಧಿಯನ್ನು ಸಂಪರ್ಕಿಸಬಹುದಾಗಿದೆ. ಆಯ್ಕೆಯಾಗಿರುವ ವಿಮಾ ಸಂಸ್ಥೆ General Insurance Company ಆಗಿದೆ ಎಂದು ಅವರು ತಿಳಿಸಿದರು.
ರೈತರು ಅಂದಾಜು/ಅಪೇಕ್ಷಿತ ಬೆಳೆ ಬಿತ್ತನೆ ಆಧಾರದ ಮೇಲೆ ಬಿತ್ತನೆ ಪೂರ್ವದಲ್ಲೇ ವಿಮೆಗೆ ನೋಂದಾಯಿಸಕೊಳ್ಳಬಹುದಾಗಿದೆ ಹಾಗೂ ಬಿತ್ತನೆ ದೃಢೀಕರಣದ ಅಗತ್ಯಯಿರುವುದಿಲ್ಲ. ಬೆಳೆ ವಿಮೆಗೆ ನೋಂದಾಯಿಸಿದ ನಂತರ ಬೇರೆ ಬೆಳೆ ಬಿತ್ತನೆ ಮಾಡಿದಲ್ಲಿ ಯೋಜನೆಯಲ್ಲಿ ಭಾಗವಹಿಸಲು ನಿಗಧಿಪಡಿಸಿದ ಅವಧಿಯೊಳಗಾಗಿ ತಾವು ನೋಂದಾಯಿಸಿದ ಕೇಂದ್ರಗಳಿಗೆ ತೆರಳಿ ಬಿತ್ತನೆ ದೃಢೀಕರಣ ಪತ್ರ ನೀಡಿ ವಿಮೆ ಮಾಡಿಸಿದ ಬೆಳೆಯನ್ನು ಬದಲಾಯಿಸತಕ್ಕದ್ದು ಎಂದು ಅವರು ತಿಳಿಸಿದರು.
ಸಭೆಯಲ್ಲಿ ಜಂಟಿ ಕೃಷಿ ನಿರ್ದೇಶಕರಾದ ಸುಮಾ, ತೋಟಗಾರಿಕ ಇಲಾಖೆಯ ಉಪನಿರ್ದೇಶಕರಾದ ಕುಮಾರಸ್ವಾಮಿ ಜಿಲ್ಲಾ ಹಾಗೂ ತಾಲ್ಲೂಕಾ ಅಧಿಕಾರಿಗಳು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.