ಶ್ರೀನಿವಾಸಪುರ; ಫೆ.23: ಸಾವಿರಾರು ಎಕರೆ ಅರಣ್ಯ ಭೂ ಒತ್ತುವರಿಯನ್ನು ತೆರವುಗೊಳಿಸಿರುವ ಅರಣ್ಯ ಉಪ ಸಂರಕ್ಷಣಾಧಿಕಾರಿಗಳು ಹಾಗೂ ವಲಯ ಅರಣ್ಯಾಧಿಕಾರಿಗಳ ವಿರುದ್ಧ ಭೂಗಳ್ಳರು ನ್ಯಾಯಾಲಯದಲ್ಲಿ ಧಾವೆ ಹೂಡಿದ್ದು, ಅಧಿಕಾರಿಗಳ ರಕ್ಷಣೆಗೆ ಅರಣ್ಯ ಸಚಿವರಾದ ಈಶ್ವರ ಖಂಡ್ರೆ ಅವರನ್ನು ಒತ್ತಾಯಿಸಿ ಫೆ.29ರ ಗುರುವಾರ ಅರಣ್ಯ ಸಚಿವರ ನಿವಾಸದ ಮುಂದೆ ಹೋರಾಟ ಮಾಡಲು ರೈತಸಂಘದ ಸಭೆಯಲ್ಲಿ ತೀರ್ಮಾನಿಸಲಾಯಿತು.
ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಕರೆದಿದ್ದ ಸಭೆಯಲ್ಲಿ ಮಾತನಾಡಿದ ರೈತಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ, ಅಮಾಯಕ ರೈತರ ಹೆಸರಿನಲ್ಲಿ ಬಲಾಢ್ಯ, ಶ್ರೀಮಂತ, ರಾಜಕೀಯ, ರಿಯಲ್ ಎಸ್ಟೇಟ್ ಉದ್ಯಮಿಗಳು ನಕಲಿ ದಾಖಲೆಗಳನ್ನು ಸೃಷ್ಠಿ ಮಾಡಿಕೊಂಡು ಸಾವಿರಾರು ಎಕರೆ ಅರಣ್ಯ ಭೂಮಿಯನ್ನು ಒತ್ತುವರಿ ಮಾಡಿಕೊಂಡು ಬ್ಯಾಂಕ್ಗಳಲ್ಲಿ ಕೋಟ್ಯಾಂತರ ರೂಪಾಯಿ ಸಾಲ ಪಡೆಯುವ ಜೊತೆಗೆ ಅರಣ್ಯ ಭೂಮಿಯನ್ನು ಕೋಟಿಕೋಟಿ ಹಣಕ್ಕೆ ಮಾರಾಟ ಮಾಡಿರುವ ಭೂಗಳ್ಳರ ವಿರುದ್ಧ ಕಠಿಣ ಕ್ರಮಕೈಗೊಳ್ಳಲು ಮಾನ್ಯ ಅರಣ್ಯ ಸಚಿವರು ಕಾನೂನು ಜಾರಿ ಮಾಡಬೇಕೆಂದು ಒತ್ತಾಯಿಸಿದರು.
ಕಾಡು ಇದ್ದರೆ ಮಳೆ, ಮಳೆ ಬಂದರೆ ಬೆಳೆ, ಬೆಳೆಯಿದ್ದರೆ ದೇಶದ ಹಸಿವು ನೀಗಿಸುವ ರೈತ. ಆದರೆ ಆ ರೈತರ ಹೆಸರಿನಲ್ಲಿ ಅರಣ್ಯ ಭೂಮಿಯನ್ನು ಕಬಳಿಸಿ ನೂರಾರು ವರ್ಷಗಳಿಂದ ಕೋಟ್ಯಾಂತರ ರೂಪಾಯಿ ಹಣ ಸಂಪಾದನೆ ಮಾಡಿ ಈಗ ಅರಣ್ಯಾಧಿಕಾರಿಗಳು ದೌರ್ಜನ್ಯದಿಂದ ಮಾವಿನ ಗಿಡಗಳನ್ನು ನಾಶ ಮಾಡಿದ್ದಾರೆಂದು ಗೌರವಾನ್ವಿತ ನ್ಯಾಯಾಲಯದಲ್ಲಿ ಧಾವೆ ಹೂಡಿರುವ ಭೂ ಒತ್ತುವರಿದಾರರು ನಿಜವಾದ ರೈತರೇ ? ರೈತರಾದರೆ ಸರ್ಕಾರದ ಕಂದಾಯ ನಿಯಮದ ಪ್ರಕಾರ 5 ಎಕರೆ ಭೂಮಿ ಇಲ್ಲದವರಿಗೆ ಒತ್ತುವರಿ ಮಾಡಿಕೊಂಡರೆ ಸರ್ಕಾರದ ನಿಯಮದ ಪ್ರಕಾರ ಮಂಜೂರು ಆಗುತ್ತದೆ.
ಆದರೆ ನಿಯಮ ಮೀರಿ ನೂರಾರು ಎಕರೆ ಅರಣ್ಯ ಭೂಮಿ ಒತ್ತುವರಿ ಮಾಡಿಕೊಂಡು ಈಗ ಅರಣ್ಯಾಧಿಕಾರಿಗಳ ವಿರುದ್ಧವೇ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿ ಒತ್ತುವರಿ ಸ್ಥಗಿತಗೊಳಿಸಲು ಮುಂದಾಗಿರುವುದು ಯಾವ ನ್ಯಾಯ. ಮಾನ್ಯ ಗೌರವಾನ್ವಿತ ನ್ಯಾಯಮೂರ್ತಿಗಳು ಒತ್ತುವರಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಅರಣ್ಯಾಧಿಕಾರಿಗಳಿಗೆ ಧೈರ್ಯ ತುಂಬಿ ಕಾಯಾಚರಣೆ ಮುಂದುವರೆಸಲು ಆದೇಶ ನೀಡಬೇಕೆಂದರು.
ತಾಲೂಕು ಅಧ್ಯಕ್ಷ ತೆರ್ನಹಳ್ಳಿ ಆಂಜಿನಪ್ಪ ಮಾತನಾಡಿ, ಗೌರವಾನ್ವಿತ ನ್ಯಾಯಾಲಯದ ಮೇಲೆ ರೈತಾಪಿ ವರ್ಗಕ್ಕೆ ಅಪಾರವಾದ ಗೌರವವಿದೆ. ಒತ್ತುವರಿ ತೆರವುಗೊಳಿಸುವ ಪ್ರಕರಣಕ್ಕೆ ಸಂಬಂಧಪಟ್ಟಂತೆ ಅರಣ್ಯಾಧಿಕಾರಿಗಳು ಅರಣ್ಯ ಭೂಮಿಯಲ್ಲಿದ್ದ ಮಾವಿನ ಗಿಡಗಳನ್ನು ನಾಶ ಮಾಡಿರುವ ಬಗ್ಗೆ ಪ್ರಶ್ನೆ ಮಾಡಿರುವುದಕ್ಕೆ ನಮ್ಮ ತಕರಾರರಿಲ್ಲ. ಆದರೆ, ಅರಣ್ಯ ಭೂಮಿಯನ್ನೇ ನೂರಾರು ವರ್ಷಗಳಿಂದ ನಕಲಿ ದಾಖಲೆಗಳನ್ನು ಸೃಷ್ಠಿ ಮಾಡಿರುವ ಭೂಗಳ್ಳರಿಗೆ ಯಾವ ಶಿಕ್ಷೆ ಎಂಬುದು ನಮ್ಮ ಪ್ರಶ್ನೆಯಾಗಿದೆ.
ಅರಣ್ಯ ಭೂಮಿ ಕೆರೆ, ರಾಜಕಾಲುವೆ, ಗುಂಡುತೋಪು ರಕ್ಷಣೆ ಮಾಡದೇ ಇದ್ದರೆ ಮುಂದಿನ ದಿನಗಳಲ್ಲಿ ಭವಿಷ್ಯದ ಜೀವನ ಊಹಿಸಿಕೊಳ್ಳುವುದೂ ಕಷ್ಟಕರವಾಗುವುದರ ಜೊತೆಗೆ ನಾವು ಸಮಾಜದಲ್ಲಿ ಸರ್ಕಾರಿ ಆಸ್ತಿಗಳನ್ನು ಕಬಳಿಕೆ ಮಾಡಿದರೂ ನ್ಯಾಯಾಲಯದಲ್ಲಿ ಜಯ ಸಿಗುತ್ತದೆ ಎಂಬ ಭೂಗಳ್ಳರ ನಂಬಿಕೆ ಇನ್ನಷ್ಟು ಗಟ್ಟಿಯಾಗಿ ಸರ್ಕಾರಿ ಆಸ್ತಿಗಳ ಮೇಲೆ ತಮ್ಮ ಪ್ರತಾಪ ತೋರಿಸುತ್ತಾರೆ. ಈ ರೀತಿ ಯಾವುದೇ ಸಮಸ್ಯೆಯಾಗದ ರೀತಿ ಕಾನೂನಿನ ಅಡಿಯಲ್ಲಿ ಸಾವಿರಾರು ಎಕರೆ ಅರಣ್ಯ ಭೂಮಿ ತೆರವುಗೊಳಿಸಿರುವ ಅರಣ್ಯಾಧಿಕಾರಿಗಳ ರಕ್ಷಣೆಗೆ ಅರಣ್ಯ ಸಚಿವರನ್ನು ಒತ್ತಾಯಿಸಿ ಫೆ.29ರ ಗುರುವಾರ ಅರಣ್ಯ ಸಚಿವರ ನಿವಾಸದ ಮುಂದೆ ದಾಖಲೆಗಳ ಸಮೇತ ಹೋರಾಟ ಮಾಡಿ ನಿಷ್ಠಾವಂತ ಅಧಿಕಾರಿಗಳ ರಕ್ಷಣೆಗೆ ಒತ್ತಾಯ ಮಾಡುವ ನಿರ್ಧಾರವನ್ನು ಕೈಗೊಳ್ಳಲಾಯಿತು.
ಸಭೆಯಲ್ಲಿ ರಾಜ್ಯ ಮುಖಂಡ ಬಂಗವಾದಿ ನಾಗರಾಜಗೌಡ, ದ್ಯಾವಂಡಹಳ್ಳಿ ರಾಜೇಂದ್ರಣ್ಣ, ಜಿಲ್ಲಾಧ್ಯಕ್ಷ ಈಕಂಬಳ್ಳಿ ಮಂಜುನಾಥ್, ಆಲವಾಟಿ ಶಿವು, ರಾಮಕೃಷ್ಣಪ್ಪ, ಗಣೇಶ್, ಹನುಮಣ್ಣ, ಸುಪ್ರೀಂ ಚಲ, ತಿಮ್ಮಣ್ಣ, ಶೇಖ್ ಷಫೀ ಉಲ್ಲಾ, ಸಹದೇವಣ್ಣ, ಸುಪ್ರೀಂ ಚಲ, ವೆಂಕಟೇಶ್ ಮುಂತಾದವರಿದ್ದರು.