ಬೆಂಗಳೂರು : ಮೂರೂವರೆ ದಶಕಗಳ ಕಾಲ ಒಂದೇ ಪತ್ರಿಕೆಯಲ್ಲಿ ಕೆಲಸ ಮಾಡುವುದು ನಿಜಕ್ಕೂ ಸವಾಲಿನ ಕೆಲಸ. ಪ್ರಜಾವಾಣಿ ಪತ್ರಿಕೆಗೆ ವರದಿಗಾರನಾಗಿ ಸೇರಿ, ಮುಖ್ಯ ವರದಿಗಾರರಾಗಿ, ಸಂಪಾದಕರಾಗಿ ನಿವೃತ್ತಿ ಹೊಂದಿದ ಆರ್.ಪಿ.ಜಗದೀಶ್ ಅವರಿಗೆ ಎಪ್ಪತ್ತೈದು ವಸಂತಕ್ಕೆ ಕಾಲಿಡುವ ಸಂಭ್ರಮ.
ಸತತವಾಗಿ ನಾಲ್ಕು ದಶಕಗಳ ಕಾಲ ಪತ್ರಕರ್ತರಾಗಿ ಸುದ್ದಿ ಮನೆಯಲ್ಲಿದ್ದ ಆರ್.ಪಿ.ಜಗದೀಶ್ ಅವರನ್ನು ಸ್ವಾತಂತ್ರ್ಯತ್ಸವದ ಅಮೃತ ಮಹೋತ್ಸವ ಅಂಗವಾಗಿ ಅವರ ಮನೆಯಂಗಳದಲ್ಲಿ ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ (ಕೆಯುಡಬ್ಲ್ಯೂಜೆ) ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಅವರು ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಪ್ರಜಾವಾಣಿ ಪತ್ರಿಕೆಯಲ್ಲಿ ಆರ್.ಪಿ.ಜಗದೀಶ್ ಅವರು ತಮ್ಮ ರಾಜಕೀಯ ವಿಶ್ಲೇಷಣೆಗಳನ್ನು ಕಾದು ಓದುವಷ್ಟರ ಮಟ್ಟಿಗೆ ವಿಭಿನ್ನ ಪ್ರಭಾವವನ್ನು ಸೃಷ್ಟಿಸಿದ್ದರು. ಈಗಲೂ ರಾಜಕೀಯ ವಿದ್ಯಮಾನಗಳಿಗೆ ಪ್ರತಿಕ್ರಿಯಿಸುವಷ್ಟು ಕ್ರಿಯಾಶೀಲತೆಯನ್ನು ಉಳಿಸಿಕೊಂಡಿದ್ದಾರೆ ಎಂದರು.
ಕೆಯುಡಬ್ಲ್ಯೂಜೆ ಸದಸ್ಯರಾಗಿ, ಪದಾಧಿಕಾರಿಯಾಗಿ ಸಂಘಟನೆ ಜೊತೆಗೆ ಸತತವಾಗಿ ಬಾಂಧವ್ಯವನ್ನು ಬೆಳೆದುಕೊಂಡು ಬಂದಿರುವ ಜಗದೀಶ್ ಅವರು, ಮುಖ್ಯಮಂತ್ರಿ ಮಾಧ್ಯಮ ಸಲಹೆಗಾರರಾಗಿಯೂ ಸೇವೆ ಸಲ್ಲಿಸಿದವರು ಎಂದು ಅವರ ಸೇವೆ ಸ್ಮರಿಸಿದರು.
ಕೆಯುಡಬ್ಲ್ಯೂಜೆ ಗೌರವ ಸ್ವೀಕರಿಸಿ ಮಾತನಾಡಿದ ಆರ್.ಪಿ.ಜಗದೀಶ್, ನಾನು ಲೆಕ್ಚರರ್ ಆಗಲು ಹೊರಟವನು. ಒಂದು ಗೀಳಿಗೆ ಕಟ್ಟು ಬಿದ್ದು ಪತ್ರಕರ್ತನಾದೆ. ಲೋಕವಾಣಿ ಮೂಲಕ ಪ್ರಜಾವಾಣಿ ಸೇರಿದೆ ಎಂದು ವೃತ್ತಿ ಪ್ರವೇಶ ದಿನಗಳನ್ನು ನೆನೆದರು.
ಪತ್ರಕರ್ತ ಆಗಬೇಕು ಎಂಬ ಹಂಬಲದಿಂದ ಬರುತ್ತಿದ್ದರು. ಆದರೆ ಈಗ ಕಾಲಘಟ್ಟ ಬದಲಾಗಿದ್ದು ಮನೋಭಾವ, ಧ್ಯೇಯ ಉದ್ದೇಶಗಳು ವಿಭಿನ್ನವಾಗಿವೆ. ಮಾಧ್ಯಮ ಕ್ಷೇತ್ರ ಕೂಡ ವಿಸ್ತಾರವಾಗಿದೆ. ವೃತ್ತಿಯಲ್ಲಿ ಮೌಲ್ಯದ ಬೆಳಕು ಹೆಚ್ಚಾಗುವಂತ ಕೆಲಸವನ್ನು ಸಂಘಟನೆಯ ಮೂಲಕ ಮಾಡಬೇಕು ಎಂದರು.
ಕೋವಿಡ್ ಕಾಲಘಟ್ಟದಲ್ಲಿ ಕೆಯುಡಬ್ಲ್ಯೂಜೆ ಪತ್ರಕರ್ತರ ಕುಟುಂಬಕ್ಕೆ ತಲಾ 5 ಲಕ್ಷ ರೂ ಪರಿಹಾರ ಕೊಡಿಸಿರುವುದು ಶ್ಲಾಘನೀಯ ಕೆಲಸ ಎಂದರು. ಶಿವಾನಂದ ತಗಡೂರು ಅಧ್ಯಕ್ಷರಾದ ಮೇಲೆ ನಾನು ಗಮನಿಸಿದಂತೆ ಪತ್ರಕರ್ತರ ಹಿತ ಕಾಯುವ ಮತ್ತು ಕ್ಷೇಮಾಭಿವೃದ್ಧಿಗೆ ಅತಿ ಹೆಚ್ಚು ಆದ್ಯತೆ ನೀಡುವ ಕೆಲಸ ಮಾಡಿದ್ದಾರೆ ಎಂದರು.
ಪತ್ರಕರ್ತರು ಗ್ಲಾಮರ್ ಬೆನ್ನತ್ತುವುದು ಸರಿಯಲ್ಲ. ಇದೊಂದು ಸೇವೆ ಎನ್ನುವ ಭಾವನೆಯಿಂದ ಕೆಲಸ ಮಾಡಿದರೆ ಮಾತ್ರ ಎತ್ತರಕ್ಕೆ ಬೆಳೆಯಲು ಸಾಧ್ಯ. ಅದ್ದರಿಂದ ವೃತ್ತಿ ಬಗ್ಗೆ ಹೆಚ್ಚು ಕಾಳಜಿ ವಹಿಸಿ ಕೆಲಸ ಮಾಡುವಂತೆ ಕರೆ ನೀಡಿದರು. ಬೆಂಗಳೂರು ನಗರ ಘಟಕದ ಸೋಮಶೇಖರ್ ಗಾಂಧಿ, ಜುಕ್ರೀಯ, ಹರೀಶ್ ಮತ್ತಿತರರು ಹಾಜರಿದ್ದರು.