ಉಡುಪಿ ; ಕುವೆಂಪು ಅವರ ವ್ಯಕ್ತಿತ್ವದಂತೆಯೇ ಅವರ ಸಾಹಿತ್ಯವು ಸಹ ಬಹುಮುಖಿಯಾದುದು. ಬದುಕಿನ ಎಲ್ಲ ಮಗ್ಗುಲುಗಳನ್ನು ಸ್ಪರ್ಶಿಸಿ ಕನ್ನಡ ಸಾಹಿತ್ಯದ ಮೇರೆಯನ್ನು ವಿಸ್ತರಿಸಿದ ಕವಿ ಅವರು. ಸಮಕಾಲೀನ ಘಟನೆಗಳಿಗೆ ತೀಕ್ಷ್ಣವಾಗಿ ಸ್ಪಂದಿಸಿ ಪ್ರತಿಕ್ರಿಯಿಸಿದ ಆಧುನಿಕ ಕನ್ನಡದ ಮೊದಲ ದನಿ ಕುವೆಂಪು ಅವರದ್ದು ಎಂದು ಡಾ.ರೇಖಾ ಬನ್ನಾಡಿ ಹೇಳಿದರು. ಅವರು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ತೆಂಕನಿಡಿಯೂರು, ಉಡುಪಿ ಇಲ್ಲಿನ ಕನ್ನಡ ವಿಭಾಗ ಮತ್ತು ಆಂತರಿಕ ಗುಣಮಟ್ಟ ಮತ್ತು ಭರವಸೆ ಕೋಶ ಜಂಟಿಯಾಗಿ ಆಯೋಜಿಸಿದ “ರಸಋಷಿ ಕುವೆಂಪು ಅವರ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿ ಮಾತನಾಡಿದರು.
ಧರ್ಮ ಮತ್ತು ದೇವರುಗಳ ಕುರಿತು ಕುವೆಂಪು ಒಳಗಿನ ವಿಮರ್ಶಕರಾಗಿ ಮುಖಾಮುಖಿಯಾಗುತ್ತಾ ಬಂದವರು. “ಆ ಮತದ ಈ ಮತದ ಕೊಳೆ ಸಾಕಿನ್ನು. ಮನುಜ ಮತದ ಕಡೆಗೆ ಬನ್ನಿ” ಎಂದು ಕರೆಯುವ ಕುವೆಂಪುರವರದ್ದು ಮತಾತೀತವಾದ ಆಧ್ಯಾತ್ಮ. ತನ್ನ ಧ್ಯೇಯ ಧೋರಣೆಗಳಿಗೆ ತಾನೇ ಮೇಲ್ಪಂಕ್ತಿಯಾಗಿ ಬದುಕಿರುತ್ತಾರೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಪ್ರೊ ನಿತ್ಯಾನಂದ ವಿ.ಗಾಂವಕರ ಮಾತನಾಡಿ ಈ ನಾಡನ್ನು ವೈಚಾರಿಕವಾಗಿ ವೈಜ್ಞಾನಿಕವಾಗಿ ಪ್ರಭಾವಿಸಿದ ಕುವೆಂಪು ಅವರ ಕೃತಿಗಳನ್ನು ವಿದ್ಯಾರ್ಥಿಗಳು ಹೆಚ್ಚೆಚ್ಚು ಅಭ್ಯಾಸ ಮಾಡಬೇಕು. ತನ್ಮೂಲಕ ಅವರು ಬಯಸಿದ್ದ ಸಮಾನತೆಯ ನಾಡು ರೂಪುಗೊಳ್ಳಬೇಕು ಎಂದರು.
ಕನ್ನಡ ವಿಭಾಗದ ಮುಖ್ಯಸ್ಥರಾದ ಶ್ರೀಮತಿ ರತ್ನಮಾಲಾ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಗ್ರಂಥಪಾಲಕ ಶ್ರೀಕೃಷ್ಣ ಸಾಸ್ತಾನ ಕುವೆಂಪು ಗೀತೆಗಳ ಗಾಯನ ಮಾಡಿದರು. ಸ್ನಾತಕೋತ್ತರ ಅಧ್ಯಯನ ಕೇಂದ್ರದ ವಿದ್ಯಾರ್ಥಿಗಳಾದ ಕೀರ್ತನಾ ಮತ್ತು ವಿಠಲ ಕುವೆಂಪು ಅವರ ಕೃತಿಗಳನ್ನು ಕುರಿತು ಅನಿಸಿಕೆ ವ್ಯಕ್ತಪಡಿಸಿದರು.
ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಡಾ.ರಘು ನಾಯ್ಕ, ಐಕ್ಯೂಎಸಿ ಸಂಚಾಲಕ ಬಾ.ಮೇವಿ ಮಿರಾಂಡಾ ಮತ್ತು ಕನ್ನಡ ವಿಭಾಗದ ಉಪನ್ಯಾಸಕರು ಉಪಸ್ಥಿತರಿದ್ದರು. ಕನ್ನಡ ಉಪನ್ಯಾಸಕಿ ಶಾಲಿನಿ ಯು.ಬಿ. ಕಾರ್ಯಕ್ರಮ ನಿರೂಪಿಸಿದರು.