ವರದಿ : ಮಝರ್, ಕುಂದಾಪುರ
ಕುಂದಾಪುರ : ಮಹಾಮಾರಿಯ ವಿರುದ್ಧ ಹೋರಾಡುವ ನಿಟ್ಟಿನಲ್ಲಿ ಸಾರ್ವಜನಿಕರಿಗೆ ಲಭ್ಯವಾಗುವ ಕುಂದಾಪುರ ಕಲಾಮಂದಿರದ ಲಸಿಕಾ ಕೇಂದ್ರದಲ್ಲಿ ಇದೀಗ ಸಮಾಜ ಸೇವೆಯ ಸೋಗಿನಲ್ಲಿ ರಾಜಕೀಯವು ತಾಂಡವವಾಡುತ್ತಿರುವ ಬಗ್ಗೆ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗುತಲಿದೆ.
ಲಸಿಕೆ ಹಾಕಿಸಿಕೊಳ್ಳಲು ಬೆಳ್ಳಂಬೆಳಗ್ಗೆ ದೂರದಿಂದ ಬಂದು ತಮ್ಮ ಸರತಿಗಾಗಿ ಸಂಜೆ ತನಕ ಕಾದಿದರೂ, ಕೇಂದ್ರದಲ್ಲಿ ಠಿಕಾಣಿ ಹೂಡಿರುವ ಪುಢಾರಿಗಳಿಂದಾಗಿ ಲಸಿಕೆ ಲಭ್ಯವಾಗದೆ,ಹಿಡಿಶಾಪ ಹಾಕುತ್ತಾ ಹಿಂತಿರುಗಬೇಕಾದ ಪರಿಸ್ಥಿತಿ ಬಂದೊದಗಿದೆ ಎಂದು ಹೇಳಲಾಗುತ್ತಿದೆ. ಲಸಿಕಾ ಕೇಂದ್ರದಲ್ಲಿ ಅದಾಗಲೇ ಮಟ್ಟಸವಾಗಿ ತಳವೂರಿರುವ ಎರಡನೇ ಹಂತದ ರಾಜಕಾರಣಿಗಳು ಸುಖಾ ಸುಮ್ಮನೆ ತಮ್ಮ ಹೆಸರನ್ನು ನೋಂದಾಯಿಸಿ ಲಸಿಕೆ ನೀಡಲಾಗುವ ಆರಂಭದ ಹಲವಾರು ಸಂಖ್ಯೆಗಳನ್ನು ಅಥವಾ ಟೋಕನ್ ಗಳನ್ನು ಕಾದಿರಿಸುತ್ತಾರೆ. ನಂತರ ತಮ್ಮ ಚೇಲಾಗಳು ಎಷ್ಟು ತಡವಾಗಿ ಬಂದರೂ ಸರಿ ಅವರು ಆ ಕೂಡಲೇ ಲಸಿಕೆ ಪಡೆಯುವಂತೆ ಮಾಡಿ ತಮ್ಮ ಪ್ರಭಾವವನ್ನು ತೋರ್ಪಡಿಸುವ ಜಿದ್ದಿಗೆ ಬಿದ್ದಿದ್ದಾರೆ.
ಇದು ಸಹಜವಾಗಿ ಬೆಳಿಗ್ಗೆಯಿಂದ ಲಸಿಕೆಗಾಗಿ ಕಾದು ಕಾದು ಹೈರಾಣಾಗಿರುವ ಸಾಮಾನ್ಯ ನಾಗರಿಕ ಕೆರಳುವಂತೆ ಮಾಡುತ್ತಿದೆ. ಇದರ ಬಗ್ಗೆ ವಿಚಾರಿಸಿದರೆ ಮೈಮೇಲೆ ಕಂಬಳಿ ಹುಳು ಬಿದ್ದಂತೆ, ಮೊದಲೇ ನಿಮಗೆ ಲಸಿಕೆ ಪಡೆಯಲು ಅದೇನು ಧಾಡಿ ಬಂದಿತ್ತು,ಅಷ್ಟೊಂದು ಲಸಿಕೆಗಳನ್ನು ಹಾಳು ಮಾಡಿ ಬಿಸಾಡ ಬೇಕಾಯ್ತಲ್ಲಾ ಅಂತಾ ಸಾಕ್ಷಾತ್ ತಮ್ಮ ಮನೆಯಿಂದಲೇ ಲಸಿಕೆ ತಯಾರಿಸಿ ತಂದಂತೆ ವರ್ತಿಸುವ ಕೆಲವು ಚಡ್ಡಿ ಪುಢಾರಿಗಳ ವರ್ತನೆ ಲಸಿಕೆ ಪಡೆಯಲು ಸರತಿಯಲ್ಲಿ ನಿಂತಿರುವ ಸಾರ್ವಜನಿಕರನ್ನು ಇನ್ನಷ್ಟು ರೊಚ್ಚಿಗೇಳುವಂತೆ ಮಾಡಿದೆ.
ಇವರಿಂದಾಗಿ ಇಲ್ಲಿ ನಿಷ್ಠತೆಯಿಂದ ಸೇವೆ ಸಲ್ಲಿಸುವವರಿಗೂ ಕಳಂಕ ತಟ್ಟಿದಂತಾಗಿದೆ.ಲಸಿಕಾ ಕೇಂದ್ರದ ಅಸರ್ಮಪಕ ಕ್ರಮಗಳನ್ನು ಸಮಾಜ ಸೇವೆಯ ಹೆಸರಿನಲ್ಲಿ ಬಳಸಿಕೊಳ್ಳುತ್ತಿರುವ ಇವರು ತಮ್ಮ ಪಕ್ಷದವರಿಗೆ, ತಮ್ಮ ಚೇಲಾಗಳಿಗೆ ಲಸಿಕೆ ಕೊಡಿಸುವಲ್ಲಿ ಸ್ಪರ್ಧೆಗೆ ಬಿದ್ದಿದ್ದಾರೆ ಎಂದು ಹೇಳಲಾಗುತ್ತಿದೆ.ಈ ಬಗ್ಗೆ ಸಂಬಂಧ ಪಟ್ಟ ಜಿಲ್ಲಾಡಳಿತ ಲಸಿಕಾ ಕೇಂದ್ರದಲ್ಲಿ ಆಶಾ ಕಾರ್ಯಕರ್ತೆಯರನ್ನೋ, ಶಿಕ್ಶಕರನ್ನೋ ಅಥವಾ ಇನ್ನಿತರ ಅಧಿಕಾರಿಗಳನ್ನು ಕ್ರಮ ಬದ್ಧವಾಗಿ ಸೇವೆಗೆ ನಿಯುಕ್ತಿಗೊಳಿಸಿ, ವಾಕ್ಸಿನ್ ಕೇಂದ್ರದಲ್ಲೂ ಠಿಕಾಣಿ ಹೂಡಿ ತಮ್ಮ ತುಚ್ಛ ರಾಜಕೀಯ ವೈರಸ್ ಗಳನ್ನು ಪಸರಿಸುತ್ತಿರುವ ಮರಿ ಮುತ್ಸದ್ದಿಗಳ ಹೇಷಾರವಕ್ಕೆ ಕೂಡಲೇ ಕಡಿವಾಣ ಹಾಕಬೇಕೆಂಬ ಆಗ್ರಹ ಕೇಳಿಬರುತ್ತಿದೆ.