ಕುಂದಾಪುರ: ಖಾಸಗಿ ಬಸ್ ಹಾಗೂ ಬೈಕಿನ ನಡುವೆ ನಡೆದ ಭೀಕರ ಅಪಘಾತದಲ್ಲಿ ಬೈಕ್ ಸವಾರ ಕುಂದಾಪುರದ ಪುರಸಭೆಯ ಪೌರ ಕಾರ್ಮಿಕ ಸಾವನ್ನಪ್ಪಿದ ಘಟನೆ ಗುರುವಾರ ರಾತ್ರಿ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ದುರ್ಗಾಂಬ ಬಸ್ ಡಿಪೋ ಎದುರುಗಡೆ ನಡೆದಿದೆ.
ಅಪಘಾತದಲ್ಲಿ ಸಾವನ್ನಪ್ಪಿದ ವ್ಯಕ್ತಿಯನ್ನು ಕುಂದಾಪುರದ ಪೌರಕಾರ್ಮಿಕ, ಬಾರ್ಕೂರಿನ ಬಂಡಿ ಮಠ ನಿವಾಸಿ ಶಂಕರ ಹಾಗೂ ಬೀಚು ಎಂಬುವರ ಪುತ್ರ ಸುಂದರ್ (39) ಎಂದು ಗುರುತಿಸಲಾಗಿದೆ. ಕಳೆದ 15 ವರ್ಷಗಳಿಂದ ಗುತ್ತಿಗೆ ಆಧಾರದಲ್ಲಿ ಕುಂದಾಪುರದ ಪುರಸಭೆಯಲ್ಲಿ ಪೌರಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ ಸುಂದರ್, ಗುರುವಾರ ಸಂಜೆ ಕೋಟೇಶ್ವರದಿಂದ ಬೈಕಿನಲ್ಲಿ ಕುಂದಾಪುರಕ್ಕೆ ವಾಪಸ್ ಬರುತ್ತಿದ್ದರು. ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಹಂಗಳೂರಿನ ದುರ್ಗಾಂಬ ಬಸ್ ಡಿಪೋ ಎದುರುಗಡೆ ಹೆದ್ದಾರಿಯಿಂದ ಸರ್ವಿಸ್ ರಸ್ತೆ ಕಡೆಗೆ ಬೈಕನ್ನು ತಿರುಗಿಸುತ್ತಿದ್ದ ವೇಳೆ ಕುಂದಾಪುರದಿಂದ ಡಿಪ್ಪೋಗೆ ಆಗಮಿಸುತ್ತಿದ್ದ ದುರ್ಗಾಂಬ ಬಸ್ ಹೆದ್ದಾರಿಯಿಂದ ತಿರುವು ಪಡೆದುಕೊಳ್ಳುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ.
ಅಪಘಾತದ ತೀವ್ರತೆಗೆ ಬೈಕ್ ಸಂಪೂರ್ಣವಾಗಿ ಬಸ್ಸಿನ ಅಡಿಗೆ ಬಿದ್ದು ಬೈಕ್ ಸವಾರ ಸುಂದರ್ ಸ್ಥಳದಲ್ಲಿಯೇ ಸಾವನಪ್ಪಿದ್ದಾರೆ. ಮೂರು ತಿಂಗಳ ಹಿಂದಷ್ಟೇ ಸುಂದರ್ ಖಾಯಂ ಪೌರಕಾರ್ಮಿಕರಾಗಿ ನೇಮಕಗೊಂಡಿದ್ದರು ಎಂದು ತಿಳಿದು ಬಂದಿದೆ.
ಸುಂದರವರ ಮೃತ ದೇಹವನ್ನು ಸರ್ಕಾರಿ ಆಸ್ಪತ್ರೆಯಲ್ಲಿ ಇಡಲಾಗಿದ್ದು ಕುಂದಾಪುರ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ದುರ್ಗಾಂಬ ಬಸ್ ಡಿಪ್ಪೋದ ಎದುರುಗಡೆ ಡಿವೈಡ್ ನಿರ್ಮಿಸಿರುವುದು, ಇದಲ್ಲದೆ ಹೆದ್ದಾರಿ 66 ರಲ್ಲಿ ಹಲವು ಅವೈಜ್ಞಾನಿಕ ಕ್ರಾಸಿಂಗ್ ನಿಮಿಸಿದ್ದಾರೆ, . ಇದೀಗ ಅಪಘಾತದಿಂದ ಪೌರಕಾರ್ಮಿಕನೊಬ್ಬ ಸಾವನ್ನಪ್ಪಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.