

ಕುಂದಾಪುರ: ಮನೆಯಲ್ಲಿಯೇ ಮೃತಪಟ್ಟು ಯಾರಿಗೂ ತಿಳಿಯದೆ ತಾಯಿಯ ಮ್ರತ ದೇಹ ಕೊಳೆತಿದ್ದು,, 32ರ ಹರೆಯದ ವಿಶೇಷಚೇತನ ಮಗಳು, ಕೊಳೆತ ಸ್ಥಿತಿಯಲ್ಲಿದ್ದ ತಾಯಿಯ ಮೃತದೇಹ ಜೊತೆ ಅನ್ನ ಆಹಾರ ಇಲ್ಲದೇ ಮೂರು ದಿನ ಕಳೆದವಳನ್ನು ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ಮೂಡು ಗೋಪಾಡಿಯ ದಾಸನಹಾಡಿಯಲ್ಲಿ ಎಂಬಲ್ಲಿ ನಡೆದಿದೆ.
ಮೃತರನ್ನು ದಾಸನಹಾಡಿ ನಿವಾಸಿ ಜಯಂತಿ ಶೆಟ್ಟಿ(62) ಹಾಗೂ ಅವರ ಮಗಳು ಪ್ರಗತಿ ಶೆಟ್ಟಿ(32) ಎಂದು ಗುರುತಿಸಲಾಗಿದೆ.
ಇವರು ಮೇ 12ರಂದು ಕುಂಭಾಸಿ ಆನೆಗುಡ್ಡೆ ಶ್ರೀವಿನಾಯಕ ದೇವಸ್ಥಾನಕ್ಕೆ ತೆರಳಿ ಮಗಳ ಆರೋಗ್ಯ ಚೇತರಿಕೆಗಾಗಿ ವಿಶೇಷ ಸೇವೆಗಳನ್ನು ಮಾಡಿಸಿ, ಮೇ 13ರಂದು ಕೋಟೇಶ್ವರ ಕೋಟಿಲಿಂಗೇಶ್ವರ ದೇವಸ್ಥಾನಕ್ಕೆ ತೆರಳಲು ಸ್ಥಳೀಯ ಆಟೋ ರಿಕ್ಷಾ ಚಾಲಕನಿಗೆ ಮಾಹಿತಿ ನೀಡಿದ್ದರು. ಅದರಂತೆ ಅಟೋ ಚಾಲಕ ಮೇ 13ರಂದು ದೇವಳಕ್ಕೆ ತೆರಳುವ ಬಗ್ಗೆ ವಿಚಾರಿಸಲು ಕರೆ ಮಾಡಿದ್ದರೆನ್ನಲಾಗಿದೆ. ಆದರೆ ಅವರಿಂದ ಯಾವುದೇ ಪ್ರತಿಕ್ರಿಯೆ ಸಿಕ್ಕಿಲ್ಲ ಎಂದು ತಿಳಿದು ಬಂದಿದೆ. ಬಳಿಕ ಮೂರು ದಿನ ಕಳೆದರೂ ಜಯಂತಿ ಶೆಟ್ಟಿಯ ಮನೆಯ ಗೇಟ್ ಸೇರಿದಂತೆ ಮನೆಯ ಹಿಂಭಾಗ ಮತ್ತು ಮುಂಭಾಗದ ಬಾಗಿಲುಗಳು ಮುಚ್ಚಿಕೊಂಡಿರುವುದನ್ನು ಹಾಗೂ ಮನೆಯ ಎಲ್ಲಾ ಕೊಠಡಿಗಳ ದೀಪಗಳು ಹಗಲಿನಲ್ಲಿಯೂ ಉರಿಯುತ್ತಿದ್ದದ್ದನ್ನು ಸ್ಥಳೀಯರು ಗಮನಿಸಿದ್ದರು. ಇವರು ಹೊರಗಡೆ ಹೋಗಿರಬಹುದು ಎಂದು ಭಾವಿಸಿದ್ದ ಸ್ಥಳೀಯರಿಗೆ ಮೇ 17ರಂದು ರಾತ್ರಿ ವೇಳೆ ಮನೆ ಸಮೀಪ ವಾಸನೆ ಬಂದಿದೆ.
ನೆರೆಹೊರೆಯವರು ಜಯಂತಿ ಶೆಟ್ಟಿಯ ಮೊಬೈಲ್ಗೆ ಕರೆ ಮಾಡಿದಾಗ ಮೊಬೈಲ್ ಮನೆಯಲ್ಲಿಯೇ ರಿಂಗಣಿಸುತ್ತಿತ್ತು. ಈ ಹಿನ್ನೆಲೆಯಲ್ಲಿ ಸ್ಥಳೀಯರು ಗೋಪಾಡಿ ಗ್ರಾಪಂ ಅಧ್ಯಕ್ಷ ಸುರೇಶ್ ಶೆಟ್ಟಿಗೆ ಮಾಹಿತಿ ನೀಡಿದರು. ಬಳಿಕ ಸ್ಥಳಕ್ಕೆ ಬಂದ ಸುರೇಶ್ ಶೆಟ್ಟಿ ಇವರು ಸ್ಥಳೀಯರೊಂದಿಗೆ ಮನೆಯ ಸುತ್ತಮುತ್ತ ಹುಡುಕಾಡಿ ಮನೆಯ ಕಿಟಕಿಯಲ್ಲಿ ನೋಡಿದಾಗ ಮಗಳು ಸಂಪೂರ್ಣ ನಿತ್ರಾಣಗೊಂಡು ಪ್ರಜ್ಞಾಹೀನ ಸ್ಥಿತಿಯಲ್ಲಿ ನೆಲೆದ ಮೇಲೆ ಬಿದ್ದಿರುವುದು ಕಂಡು ಬಂತು.
ಹೆಂಗವಳ್ಳಿ ಮೂಲದ ಇವರು ಕಳೆದ ಒಂದೂವರೆ ದಶಕಗಳಿಂದ ಮೂಡುಗೋಪಾಡಿಯಲ್ಲಿ ನೆಲೆಸಿದ್ದು ಜಯಂತಿಯ ಪತಿ ನಿಧನರಾದ ಬಳಿಕ ತಾಯಿ-ಮಗಳು ಇಬ್ಬರೇ ವಾಸವಾಗಿದ್ದರು. ಜಯಂತಿ ಶೆಟ್ಟಿ ಮಧುಮೇಹ ಸಮಸ್ಯೆಯಿಂದ ಬಳಲುತ್ತಿದ್ದರೆ, ಮಗಳು ಹುಟ್ಟಿನಿಂದಲೇ ಬುದ್ಧಿಮಾಂದ್ಯರಾಗಿದ್ದಾರೆ. ಇತ್ತೀಚಿಗೆ ಮಧುಮೇಹ ಕಾಯಿಲೆಗೆ ತುತ್ತಾಗಿದ್ದ ಪ್ರಗತಿ ಶೆಟ್ಟಿಯ ಒಂದು ಕಾಲು ಕತ್ತರಿಸಲಾಗಿತ್ತು.
ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸ್ ಉಪನಿರೀಕ್ಷಕ ವಿನಯ್ ಎಂ.ಕೊರ್ಲಹಳ್ಳಿ ಹಾಗೂ ಸಿಬ್ಬಂದಿ ಮನೆಯ ಬಾಗಿಲನ್ನು ಸ್ಥಳೀಯರ ಸಹಕಾರ ದಿಂದ ಮುರಿದು ಒಳಹೊಕ್ಕಿ ತೀವ್ರ ನಿತ್ರಾಣಗೊಂಡು ಪ್ರಗತಿ ಶೆಟ್ಟಿಯನ್ನು ಕೋಟೇಶ್ವರ ಖಾಸಗಿ ಆಸ್ಪತ್ರೆಗೆ ದಾಖಲಿಸಿದರು. ಆದರೆ ತೀವ್ರವಾಗಿ ಅಸ್ವಸ್ಥ ಗೊಂಡ ಪ್ರಗತಿ ಶೆಟ್ಟಿ ಚಿಕಿತ್ಸೆ ಫಲಕಾರಿಯಾಗದೆ ಶನಿವಾರ ಮಧ್ಯಾಹ್ನದ ವೇಳೆಗೆ ಮೃತಪಟ್ಟರೆಂದು ತಿಳಿದುಬಂದಿದೆ. ಇವರ ಸಂಬಂಧಿಕರನ್ನು ಪತ್ತೆ ಹಚ್ಚಿ, ಕಾನೂನು ಪ್ರಕ್ರಿಯೆ ಮುಗಿಸಿ, ಅಂತ್ಯಕ್ರಿಯೆ ನಡೆಸಲಾಯಿತು.