ಕುಂದಾಪುರ: ನಿರಂತರವಾಗಿ ಕ್ರೀಡಾ ಚಟುವಟಿಕೆಯಲ್ಲಿ ತೊಡಗಿಸಿಕೊಂಡಾಗ ದೈಹಿಕ, ಮಾನಸಿಕವಾಗಿ ನಾವು ಬಲಿಷ್ಟರಾಗುತ್ತೇವೆ. ಕ್ರೀಡೆ ಜೀವನದಲ್ಲಿ ಗೆಲುವು ಸೋಲು ಸಮಾನವಾಗಿ ಸ್ವೀಕರಿಸುವುದನ್ನು ಕಲಿಸುತ್ತದೆ ಎಂದು ಕುಂದಾಪುರ ವಲಯದ ಪ್ರಧಾನ ಧರ್ಮಗುರು, ಸೈಂಟ್ ಮೇರಿಸ್ ವಿದ್ಯಾಸಂಸ್ಥೆಗಳ ಸಂಚಾಲಕ ಅತೀ ವಂ.ಫಾ.ಪೌಲ್ ರೇಗೋ ಹೇಳಿದರು.
ಅವರು ಕುಂದಾಪುರ ಗಾಂಧಿ ಮೈದಾನದಲ್ಲಿ ನಡೆದ ಕುಂದಾಪುರ ಸೈಂಟ್ ಮೇರಿಸ್ ವಿದ್ಯಾಸಂಸ್ಥೆಗಳ ಸೈಂಟ್ ಮೇರಿಸ್ ಪ್ರೌಢಶಾಲೆ ಮತ್ತು ಸೈಂಟ್ ಮೇರಿಸ್ ಪದವಿ ಪೂರ್ವ ಕಾಲೇಜಿನ ವಾರ್ಷಿಕ ಕ್ರೀಡಾಕೂಟ ಉದ್ಘಾಟಿಸಿ, ಸಮಾರಂಭ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕುಂದಾಪುರದ ರೋಜರಿ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ಅಧ್ಯಕ್ಷ ಜೊನ್ಸನ್ ಡಿ ಅಲ್ಮೇಡಾ ಕ್ರೀಡಾ ಧ್ವಜಾರೋಹಣಗೈದು ಮಾತನಾಡಿ, ಸೈಂಟ್ ಮೇರಿಸ್ ವಿದ್ಯಾಸಂಸ್ಥೆಗಳ ಕ್ರೀಡಾಕೂಟದ ಸಂಘಟನೆ ಉತ್ತಮವಾಗಿದೆ. ವಿದ್ಯಾರ್ಥಿಗಳ ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಬೇಕಾದರೇ ಗುರಿ, ಪರಿಶ್ರಮ ಅಗತ್ಯವಾಗಿ ಬೇಕು ಎಂದರು. ಕುಂದಾಪುರ ತಾಲೂಕು ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯ ಅಧಿಕಾರಿ ಕುಸುಮಾಕರ ಶೆಟ್ಟಿ ಕ್ರೀಡಾಜ್ಯೋತಿ ಬೆಳಗಿಸಿ ಮಾತನಾಡಿ, ನಿರಂತರವಾಗಿ ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿ ಬಹುಮಾನ ಪಡೆದುಕೊಂಡರೆ ಬದುಕು ಕಟ್ಟಿಕೊಳ್ಳಲು ಸಾಧ್ಯವಿದೆ. ಸೋಲು ಗೆಲುವು ಮುಖ್ಯವಲ್ಲ. ಸೋತವರು ಪರಿಶ್ರಮಪಟ್ಟರೆ ಗೆಲುವು ಸಾಧ್ಯ ಎಂದರು.
ಸೈಂಟ್ ಮೇರಿಸ್ ಪ್ರೌಢಶಾಲೆಯ ವಿದ್ಯಾರ್ಥಿ ನಾಯಕಿ ಸಿಂಚನ ನಾಯಕತ್ವದಲ್ಲಿ ಆಕರ್ಷಕ ಪಥಸಂಚಲನೆ ನಡೆಯಿತು. ಸೈಂಟ್ ಮೇರಿಸ್ ಪ.ಪೂ.ಕಾಲೇಜಿನ ವಿದ್ಯಾರ್ಥಿನಿ ಜೋನಿಟಾ ಪ್ರತಿಜ್ಞಾವಿಧಿ ಬೋಧಿಸಿದರು. ಈ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿಯ ಸಮೂಹ ಸಂಪನ್ಮೂಲ ವ್ಯಕ್ತಿ ಮಂಜುನಾಥ್ ಪಾಳ್, ಸೈಂಟ್ ಮೇರಿಸ್ ಹಿ.ಪ್ರಾ.ಶಾಲಾ ಮುಖ್ಯ ಶಿಕ್ಷಕಿ ಶಾಂತಿ ಬರೆಟ್ಟೋ, ಹೋಲಿ ರೋಜರಿ ಆ.ಮಾ.ಶಾಲೆಯ ಮುಖ್ಯ ಶಿಕ್ಷಕಿ ಸಿಸ್ಟರ್ ತೆರೆಜ್ ಶಾಂತಿ, ಹೋಲಿ ರೋಜರಿ ಕಿಂಟರ್ ಗಾರ್ಟನ್ ಮುಖ್ಯ ಶಿಕ್ಷಕಿ ಶೈಲಾ ಲೂಯಿಸ್ ಮೊದಲಾದವರು ಉಪಸ್ಥಿತರಿದ್ದರು. ಸೈಂಟ್ ಮೇರಿಸ್ ಪ.ಪೂ.ಕಾಲೇಜಿನ ಪ್ರಾಂಶುಪಾಲೆ ರೇಷ್ಮಾ ಫೆರ್ನಾಂಡೀಸ್ ಸ್ವಾಗತಿಸಿದರು. ದೈಹಿಕ ಶಿಕ್ಷಣ ಶಿಕ್ಷಕ ಚಂದ್ರಶೇಖರ ಬೀಜಾಡಿ, ಉಪನ್ಯಾಸಕ ನಾಗರಾಜ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಸೈಂಟ್ ಮೇರಿಸ್ ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಅಸುಂತಾ ಲೋಬೋ ವಂದಿಸಿದರು.