ಕುಂದಾಪುರ: ಸಿದ್ದಾಪುರ ವ್ಯವಸಾಯ ಸೇವಾ ಸಹಕಾರಿ ಸಂಘದ ಪ್ರಭಾರ ವ್ಯವಸ್ಥಾಪಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಆಶಾ ಎಸ್ (52) ಅವರು ಬುಧವಾರ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಆಶಾ ಸುಮಾರು 28 ವರ್ಷಗಳ ಕಾಲ ಸೊಸೈಟಿಯಲ್ಲಿ ವಿವಿಧ ಹುದ್ದೆಗಳಲ್ಲಿ ಕರ್ತವ್ಯ ನಿರ್ವಹಿಸಿ, ಪ್ರಸ್ತುತ ಪ್ರಭಾರ ವ್ಯವಸ್ಥಾಪಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಬುಧವಾರ ಬೆಳಗ್ಗೆ ಕರ್ತವ್ಯಕ್ಕೆ ಹಾಜರಾಗಿದ್ದರು. ಸಂಘದಲ್ಲಿ ಅಡಿಟ್ ಕೂಡ ನಡೆಯುತ್ತಿತ್ತು. ಮಧ್ಯಾಹ್ನ 12 ಗಂಟೆಯ ಸಮಯದಲ್ಲಿ ಕಚೇರಿಯಿಂದ ಯಾರಿಗೂ ತಿಳಿಸದೆ ನೇರವಾಗಿ ಮನೆಗೆ ಹೋಗಿ, ಮಹಡಿಯ ಕೋಣೆಯಲ್ಲಿ ಹಗ್ಗದಿಂದ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಪ್ರಭಾರ ಸಿಇಒ ಮಹೇಶ್ ರಾವ್ ಅವರು ಹೇಳುವ ಪ್ರಕಾರ, ಆಶಾ ಅವರು ತಮ್ಮ ಚಿನ್ನವನ್ನು ಪತಿಯ ಹೆಸರಿನಲ್ಲಿ ಸಂಘದಲ್ಲಿ ಅಡವಿಟ್ಟು ಸಾಲ ಪಡೆದಿದ್ದರು. ಚಿನ್ನವನ್ನು ಲಾಕರ್ನಲ್ಲಿ ಇಡುವ ಜವಾಬ್ದಾರಿಯನ್ನು ಅವರೇ ನಿಭಾಯಿಸುತ್ತಿದ್ದರು. ಬುಧವಾರ ಅಡಿಟ್ ನಡೆಯುವಾಗ ಅವರು ಅಡವಿಟ್ಟ ಚಿನ್ನ ಲಾಕರ್ನಲ್ಲಿ ಇಲ್ಲದಿರುವುದನ್ನು ಆಶಾ ಅವರಲ್ಲಿ ವಿಚಾರಿಸಲಾಗಿದೆ. ಚಿನ್ನ ಇಲ್ಲದಿರುವ ವಿಚಾರ ಹೊರಗಡೆಗೆ ಬಂದು ಅವಮಾನವಾಗುತ್ತದೆ ಎಂದು ಹೆದರಿ, ಕಚೇರಿಯಲ್ಲಿ ಯಾರಿಗೂ ಹೇಳದೆ ಮನೆಗೆ ಹೋಗಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ಇದೆ ಎಂದಿದ್ದಾರೆ.
ಆಶಾ ಅವರು ಕಚೇರಿಯಲ್ಲಿ ಇಲ್ಲದಿರುವುದು ಗೊತ್ತಾದ ಬಳಿಕ ಹುಡುಕಾಟ ನಡೆಸಲಾಗಿತ್ತು. ಕೊನೆಯಲ್ಲಿ ಸಿಸಿ ಕೆಮರಾ ನೋಡಿದಾಗ, ಮನೆಯ ಕಡೆಗೆ ಸ್ಕೂಟಿ ತೆಗೆದುಕೊಂಡು ಹೋಗುತ್ತಿರುವುದು ಗೊತ್ತಾಗಿದೆ. ಕೂಡಲೇ ಮಹೇಶ್ ಹಾಗೂ ಸಿಬಂದಿ ಮಂಜುನಾಥ ಅವರು ಆಶಾ ಅವರ ಮನೆಗೆ ಬಂದು ನೋಡಿದಾಗ ಅವರು ನೇಣುಬಿಗಿದುಕೊಂಡಿದ್ದರು.
ಆಶಾ ಅವರ ತಾಯಿ ಬೊಬ್ಬೆ ಹಾಕಿದಾಗ ಸ್ಥಳೀಯರು ಬಂದು ಬಾಗಿಲು ಒಡೆದು ನೇಣಿನಿಂದ ಆಶಾ ಅವರನ್ನು ಕೆಳಗೆ ಇಳಿಸಿ, ಕೂಡಲೇ ಸಿದ್ದಾಪುರ ಸರಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿಂದ ಮಣಿಪಾಲದ ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಮಾರ್ಗ ಮಧ್ಯೆ ಸಾವನ್ನಪ್ಪಿದರು.