ಕುಂದಾಪುರ ಸೈಂಟ್ ಮೇರಿಸ್ ಪ್ರೌಢಶಾಲೆ: ಮತದಾನ ಮಾಡಿ ಸಂಭ್ರಮಿಸಿದ ವಿದ್ಯಾರ್ಥಿಗಳು


ಕುಂದಾಪುರ: ನಾಮಪತ್ರ ಸಲ್ಲಿಕೆ, ಚುನಾವಣೆ ಪ್ರಚಾರ, 13 ರಿಂದ 15 ವರ್ಷದ ವಿದ್ಯಾರ್ಥಿಗಳಿದ ಮತದಾನ, ಮುಖ್ಯಮಂತ್ರಿ, ಉಪಮುಖ್ಯಮಂತ್ರಿಯ ಆಯ್ಕೆ. ಇದು ಕುಂದಾಪುರದ ಪ್ರತಿಷ್ಠಿತ ಸೈಂಟ್ ಮೇರಿಸ್ ಪ್ರೌಢಶಾಲೆಯಲ್ಲಿ ನಡೆದ ಶಾಲಾ ಮಕ್ಕಳ ವಿದ್ಯಾರ್ಥಿ ಸರಕಾರದ ಚುನಾವಣೆಯಲ್ಲಿ ಕಂಡು ಬಂದ ದೃಶ್ಯ. ಶಾಲೆಯ ವಿವಿಧ ಚಟುವಟಿಕೆಗಳಾದ ಶೈಕ್ಷಣಿಕ ಕಾರ್ಯಕ್ರಮದ ಜತೆಗೆ ಸಾಂಸ್ಕೃತಿಕ, ಕ್ರೀಡೆ, ಶಾಲೆ ಸ್ವಚ್ಛತೆ, ಊಟ ಇನ್ನಿತರ ಚಟುವಟಿಕೆಗಳಲ್ಲಿ ಜವಾಬ್ದಾರಿ ತೆಗೆದುಕೊಂಡು ಚಟುವಟಿಕೆಗಳನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಮಾಡಲು ಈ ಚುನಾವಣೆ ನಡೆಸಲಾಗಿಯಿತು. ಅಲ್ಲದೇ ಪಠ್ಯದಲ್ಲಿದ್ದನ್ನು ಪ್ರಾತ್ಯಕ್ಷಿಕವಾಗಿ ತೋರಿಸಿ ಪ್ರಜಾಪ್ರಭುತ್ವದ ಬಗ್ಗೆ ಅರಿವು ಮೂಡಿಸುವುದು ಚುನಾವಣೆಯ ಉದ್ದೇಶವಾಗಿದೆ. ಜತೆಗೆ ಮಕ್ಕಳಿಗೆ ಜವಾಬ್ದಾರಿ, ಮುಂದಾಳತ್ವ, ಎಲ್ಲರನ್ನು ಮುನ್ನಡೆಸುವ ಶಕ್ತಿಯ ವೃದ್ದಿಸುವುದು ಶಾಲಾ ಸಂಸತ್ ಚುನಾವಣೆ ಪ್ರಮುಖ ಭಾಗವಾಗಿದೆ.
ವಿದ್ಯಾರ್ಥಿಗಳು ಮೊದಲ ಬಾರಿಗೆ ಚುನಾವಣೆ ಅನುಭವ ಪಡೆದರು. ವಿಧಾನ ಸಭೆ, ಲೋಕಸಭೆ ಚುನಾವಣೆಗಳ ಮಾದರಿಯಲ್ಲೇ ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆ, ಹಿಂತೆಗೆದು ಕೊಳ್ಳುವಿಕೆ, ಪ್ರಚಾರ, ಮತದಾನ ಎಲ್ಲವೂ ವ್ಯವಸ್ಥಿತವಾಗಿ ಏರ್ಪಟ್ಟಿತ್ತು. ಪ್ರಜಾ ಪ್ರಭುತ್ವ ಎಂದರೆ ಏನು? ಮತದಾನದ ರೀತಿ ನೀತಿಗಳೇನು, ಮತದಾನ ಹೇಗೆ ಮಾಡಬೇಕು, ಮುಖ್ಯಮಂತ್ರಿಗಳ,ಉಪಮುಖ್ಯಮಂತ್ರಿಗಳ ಕೆಲಸ ಕಾರ್ಯಗಳ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಲಾಯಿತು. ಸೋಮವಾರ ಮಕ್ಕಳಿಂದ ಮತದಾನ ನಡೆಯಿತು. ಮತಪತ್ರ ನೀಡುವಿಕೆ, ಶಾಯಿ ಹಚ್ಚುವಿಕೆ, ಮತ ಹಾಕುವುದು, ಸಹಿ ಮಾಡುವುದು ನಿಜವಾದ ಚುನಾವಣೆಯನ್ನೇ ನೆನೆಪಿಸಿದವು. ವಿದ್ಯಾರ್ಥಿಗಳು ಸರತಿ ಸಾಲಿನಲ್ಲಿ ನಿಂತು ಮತದಾನ ಮಾಡಿದರು. ನಂತರ ಫಲಿತಾಂಶವೂ ಪ್ರಕಟಗೊಳಿಸಲಾಯಿತು. ಮತಗಟ್ಟೆಗೆ ಪೆÇೀಲಿಸ್ (ಎನ್‍ಸಿಸಿ ವಿದ್ಯಾರ್ಥಿ)ಬಿಗಿ ಭದ್ರತೆ ಮಾಡಲಾಯಿತು. ಮುಖ್ಯ ಶಿಕ್ಷಕಿ ಅಸುಂತಾ ಲೋಬೋ ಅವರ ಮಾರ್ಗದರ್ಶನದಲ್ಲಿ ಚುನಾವಣಾ ಅಧಿಕಾರಿ ಸುಶೀಲಾ ಖಾರ್ವಿ ನೇತೃತ್ವದಲ್ಲಿ ಶಿಕ್ಷಕರಾದ ಭಾಸ್ಕರ್ ಗಾಣಿಗ, ಸಿಸ್ಟರ್ ಚೇತನಾ, ಪ್ರೀತಿ ಪಾಯಸ್, ಚಂದ್ರಶೇಖರ್ ಬೀಜಾಡಿ, ಸ್ಮಿತಾ ಡಿ.ಸೋಜಾ, ಡೀನಾ ಪಾಯಸ್ ಅಧಿಕಾರಿಗಳಾಗಿ ವಿದ್ಯಾರ್ಥಿಗಳ ಚುನಾವಣೆಯನ್ನು ನಿಭಾಯಿಸಿದ್ದರು. 10 ನೇ ತರಗತಿಯ ಮನ್ವಿತಾ ಮುಖ್ಯಮಂತ್ರಿಯಾಗಿ, 9ನೇ ತರಗತಿಯ ಕಾರ್ತೀಕ್ ಉಪಮುಖ್ಯಮಂತ್ರಿಯಾಗಿ ಆಯ್ಕೆಯಾದರು.