ಕುಂದಾಪುರ:’ನಾವು ದಿನನಿತ್ಯ ವಿವಿಧ ರೀತಿಯ ಅವಕಾಶಗಳನ್ನು ಪಡೆದುಕೊಳ್ಳಲು ಪ್ರಯತ್ನಿಸುತ್ತಾ ಇರುತ್ತೇವೆ. ನಮಗೆ ಸಿಕ್ಕಿದ ಅವಕಾಶ- ಸೌಲಭ್ಯಗಳನ್ನು ಇತರರಿಗೂ ನೀಡುವ ಔದಾರ್ಯ ನಮ್ಮಲ್ಲಿರಬೇಕು. ಇಂಥ ಸರಳ ಮೌಲ್ಯಗಳನ್ನು ನಾವು ಪಾಲಿಸಿದರೆ ಸ್ವಾಮಿ ವಿವೇಕಾನಂದರ ಕನಸಿನ ಭಾರತ ದೇಶ ಕಟ್ಟುವಲ್ಲಿ ನಾವು ಕೊಡುಗೆಯನ್ನು ನೀಡಿದಂತಾಗುತ್ತದೆ’ ಎಂದು ಜೆಸಿ ಅಕ್ಷತಾ ಗಿರೀಶ್ ಐತಾಳ್ , ಕಾರ್ಯಕ್ರಮ ವಿಭಾಗದ ವಲಯ ನಿರ್ದೇಶಕರು, ಜೆಸಿಐ ಇವರು ರಾಷ್ಟ್ರೀಯ ಯುವ ದಿನದ ಪ್ರಯುಕ್ತ ಕುಂದಾಪುರದ ಆರ್. ಎನ್. ಶೆಟ್ಟಿ ಪದವಿ ಪೂರ್ವ ಕಾಲೇಜಿನಲ್ಲಿ ಜೆ.ಸಿ.ಐ ಕುಂದಾಪುರ ಸಿಟಿಯ ಸಹಯೋಗದಲ್ಲಿ ಆಯೋಜಿಸಿದ ‘ ಎಂಪವರಿಂಗ್ ಯೂತ್ ‘ ಕಾರ್ಯಕ್ರಮವನ್ನು ಉದ್ಘಾಟಿಸಿ ಕರೆ ನೀಡಿದರು. ಮುಖ್ಯ ಅತಿಥಿಯವರಾದ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ನವೀನ್ ಕುಮಾರ್ ಶೆಟ್ಟಿಯವರು ವಿದ್ಯಾರ್ಥಿಗಳು ಸ್ವಾಮಿ ವಿವೇಕಾನಂದರ ಉದಾತ್ತ ಸ್ಮರಣೆ ಮಾಡಿ ತರಬೇತುದಾರರು ನೀಡುವ ಸ್ಪೂರ್ತಿದಾಯಕ ಮಾತುಗಳಿಂದ ಪ್ರೇರಣೆ ಪಡೆಯಬೇಕು ಎಂದು ತಿಳಿಸಿದರು. ತರಬೇತುದಾರರಾಗಿ ಆಗಮಿಸಿದ ಪ್ರೊವಿಶನಲ್ ಝೋನಲ್ ಟ್ರೈನರ್ ಜೆಸಿ ಕ್ವೀನಿ ಡಿಕೊಸ್ಟಾ ರವರು ಸಂವಹನ, ಸೃಜನಶೀಲತೆ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯುವಜನತೆ ಮಾಡಬೇಕಾದ ಸದಭಿರುಚಿಯ ವರ್ತನೆಯ ಬಗ್ಗೆ ವಿದ್ಯಾರ್ಥಿಗಳನ್ನು ಅನೇಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ವಿವರಿಸಿದರು. ಕುಂದಾಪುರ ವಲಯ ಉಪಾಧ್ಯಕ್ಷರಾದ ಜೆಸಿ ಅಭಿಲಾಷ್ ಬಿ.ಎ ಯವರು ವಿದ್ಯಾರ್ಥಿಗಳು ಬದುಕಿನಲ್ಲಿ ಒಳ್ಳೆಯ ವಿಚಾರಗಳನ್ನು ವ್ಯಕ್ತಿತ್ವದಲ್ಲಿ ಅಳವಡಿಸಿಕೊಂಡು ಯೂತ್ ಐಕಾನ್ ಗಳಾಗಿ ಮೂಡಿ ಬರಲಿ ಎಂದು ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಸ್ವಾಮಿ ವಿವೇಕಾನಂದರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಲಾಯಿತು. ಜೆ.ಸಿ.ಐ ಕುಂದಾಪುರ ಸಿಟಿ ಯ ನೂತನ ಅಧ್ಯಕ್ಷರಾದ ಜೆಸಿ ಡಾ. ಸೋನಿ ಡಿಕೊಸ್ಟಾ ರವರು ಅತಿಥಿಗಳನ್ನು ಸ್ವಾಗತಿಸಿದರು. ಮಹಿಳಾ ಜೆ.ಸಿ. ಸಂಯೋಜಕಿ ಜೆಸಿ ಪ್ರೇಮಾ ಡಿ ಕುನ್ಹಾ ರವರು ಧನ್ಯವಾದ ಸಲ್ಲಿಸಿದರು. ಕಾಲೇಜಿನ ಹಿಂದಿ ವಿಭಾಗದ ಮುಖ್ಯಸ್ಥರಾದ ಶ್ರೀಮತಿ ಜಯಶೀಲಾ ಪೈಯವರು ಕಾರ್ಯಕ್ರಮ ನಿರೂಪಿಸಿದರು.