

ಕುಂದಾಪುರ: ಆರ್. ಎನ್. ಶೆಟ್ಟಿ ಪದವಿ ಪೂರ್ವ ಕಾಲೇಜಿನಲ್ಲಿ ಶಿಕ್ಷಕರ ದಿನಾಚರಣೆ”ಶಿಕ್ಷಕರ ಬಗ್ಗೆ ವಿದ್ಯಾರ್ಥಿಗಿರುವ ನಿರೀಕ್ಷೆಯನ್ನು ತೃಪ್ತಿಕರವಾಗಿ ಪೂರೈಸಿ ನ್ಯಾಯ ಒದಗಿಸುವುದು ಒಳ್ಳೆಯ ಶಿಕ್ಷಕನ ಜವಾಬ್ದಾರಿ. ಆನ್ ಲೈನ್ ತರಗತಿಗಳು ಶಿಕ್ಷಕರ ಅಸ್ತಿತ್ವವನ್ನು ಹೊಸ ರೀತಿಯಲ್ಲಿ ಪರೀಕ್ಷಿಸುತ್ತಿದೆ. ಹೊಸ ಶಿಕ್ಷಣ ವಿಧಾನಗಳನ್ನು ವಿಶಾಲ ಮನಸ್ಸಿನಿಂದ ಮುಕ್ತವಾಗಿ ಚರ್ಚಿಸಿ, ಅನುಷ್ಠಾನಕ್ಕೆ ತಂದರೆ ಶಿಕ್ಷಕ -ವಿದ್ಯಾರ್ಥಿ ಬಾಂಧವ್ಯ ಅರ್ಥಪೂರ್ಣವಾಗುವುದು. ಪ್ರಬುದ್ಧ ರಾಜಕಾರಣಿಯಾಗಿದ್ದ ಎಸ್. ರಾಧಾಕೃಷ್ಣನ್ ರವರೂ ತಾವೂ ಶಿಕ್ಷಕರಾಗಿದ್ದರಿಂದಲೇ ರಾಜ್ಯಸಭೆಯ ಕಲಾಪಗಳನ್ನು ಯಶಸ್ವಿಯಾಗಿ ನಿಭಾಯಿಸಲು ಸಾಧ್ಯವಾಗಿದ್ದು ಎಂದಿದ್ದು ಶಿಕ್ಷಕ ವೃತ್ತಿಯ ಹಿರಿಮೆಯ ಪ್ರತೀಕ ” ಎಂದು ಕುಂದಾಪುರದ ಆರ್.ಎನ್. ಶೆಟ್ಟಿ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಿದ ಶಿಕ್ಷಕ ದಿನಾಚರಣೆಯ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ ಶ್ರೀ ಆರ್. ಬಿ. ನಾಯ್ಕ್, ನಿವೃತ್ತ ಉಪನಿರ್ದೇಶಕರು, ಪದವಿ ಪೂರ್ವ ಶಿಕ್ಷಣ ಇಲಾಖೆ, ಉಡುಪಿ, ಇವರು ಅಭಿಪ್ರಾಯಪಟ್ಟರು. ಕಾಲೇಜಿನ ಪ್ರಾಂಶುಪಾಲರಾದ ಶ್ರೀ ನವೀನ್ ಕುಮಾರ ಶೆಟ್ಟಿಯವರು ಸಮಾಜದ ದೃಷ್ಟಿಯಲ್ಲಿ ಆದರ್ಶ ಮತ್ತು ಸ್ಪೂರ್ತಿಯ ಮಾದರಿಗಳೆನಿಸಿಕೊಳ್ಳುವ ಶಿಕ್ಷಕರ ಹೊಣೆಗಾರಿಕೆ ಬಹಳ ಮಹತ್ವದ್ದು ಎಂದು ತಿಳಿಸಿದರು. ಮುಖ್ಯ ಅತಿಥಿಯವರಾದ ಶ್ರೀ ಆರ್. ಬಿ. ನಾಯ್ಕ್ ರವನ್ನು ಅಭಿನಂದಿಸಲಾಯಿತು. ಡಾ. ಎಸ್. ರಾಧಾಕೃಷ್ಣನ್ ರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಲಾಯಿತು. ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥರಾದ ಶ್ರೀ ಕೃಷ್ಣಮೂರ್ತಿ ಡಿ.ಬಿ ಯವರು ಅತಿಥಿಗಳನ್ನು ಸ್ವಾಗತಿಸಿದರು. ಅರ್ಥಶಾಸ್ತ್ರ ಉಪನ್ಯಾಸಕಿ ಶ್ರೀಮತಿ ನಾಗರತ್ನಾ ಮುಖ್ಯ ಅತಿಥಿಗಳ ಪರಿಚಯ ನೀಡಿದರು. ಕನ್ನಡ ಉಪನ್ಯಾಸಕಿ ಶ್ರೀಮತಿ ದೀಪ್ತಿ ಕೆ ಇವರು ಉಪನ್ಯಾಸಕರಿಗೆ ಪುಷ್ಪ ನೀಡಿ ಗೌರವಿಸುವ ಕಾರ್ಯಕ್ರಮವನ್ನು ನೆರವೇರಿಸಿದರು. ವಾಣಿಜ್ಯ ಶಾಸ್ತ್ರ ಉಪನ್ಯಾಸಕಿ ಶ್ರೀಮತಿ ಅರುಣಾ ಹೊಳ್ಳ ಪ್ರಾರ್ಥನೆ ಹಾಡಿದರು. ಸಂಸ್ಕ್ರತ ವಿಭಾಗ ಮುಖ್ಯಸ್ಥರಾದ ಶ್ರೀ ರವಿ ಉಪಾಧ್ಯ ರವರು ವಂದನಾರ್ಪಣೆಗೈದರು. ರಸಾಯನ ಶಾಸ್ತ್ರ ಉಪನ್ಯಾಸಕಿ ಶ್ರೀಮತಿ ಜಾನೀಸ್ ನತಾಶಾ ಡಿಸೋಜಾ ರವರು ಕಾರ್ಯಕ್ರಮ ನಿರೂಪಿಸಿದರು.

