

ಕುಂದಾಪುರ: “ಸಂವಹನ ಕಲೆಯ ಮಹತ್ವ ಅರಿಯಬೇಕಾಗುವುದು ಔಪಚಾರಿಕವಾಗಿ ಮಾತನಾಡುವಾಗ ಮಾತ್ರವಲ್ಲ, ಅನೌಪಚಾರಿಕವಾಗಿ ದಿನನಿತ್ಯ ಇತರ ವ್ಯಕ್ತಿಗಳೊಂದಿಗೆ ವ್ಯವಹರಿಸುವಾಗ ಅವರನ್ನು ಸಭ್ಯತೆಯಿಂದ ಸಂಭೋದಿಸಿ ಮೃದು ಧಾಟಿಯಲ್ಲಿ ಮಾತನಾಡುವಾಗಲೂ ಮನಗಾಣಬೇಕಾದ ವಿಚಾರ” ಎಂದು ವಿದ್ಯಾರ್ಥಿಗಳು ತಮ್ಮನ್ನು ತಾವು ಇತರರಿಗೆ ಪ್ರಕಟ ಪಡಿಸಲು ಬೇಕಾದ ಸಂವಹನ ಕಲೆಯ ಬಗ್ಗೆ ಕುಂದಾಪುರದ ಆರ್. ಎನ್.ಶೆಟ್ಟಿ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಲಾದ ‘ ಸಂವಹನ ಕಲೆ’ ಉಪನ್ಯಾಸದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ತೆಕ್ಕಟ್ಟೆಯ ಕಾಮಾಕ್ಷಿ ಫಾರ್ಮ್ಸ್ ನ ಉದಯೋನ್ಮುಖ ಕೃಷಿ ಉದ್ಯಮಿ ದಿವ್ಯಾ ನಾಯಕ್ ಇವರು ತಿಳಿಸಿದರು.
ಕಾಲೇಜಿನ ಹಿಂದಿ ವಿಭಾಗದ ಮುಖ್ಯಸ್ಥೆಯಾದ ಶ್ರೀಮತಿ ಜಯಶೀಲಾ ಪೈಯವರು ಸಂಪನ್ಮೂಲ ವ್ಯಕ್ತಿ ದಿವ್ಯಾ ನಾಯಕ್ ತೆಕ್ಕಟ್ಟೆ ಇವರನ್ನು ಸಭೆಗೆ ಪರಿಚಯಿಸಿ ಸ್ವಾಗತಿಸಿದರು. ಈ ಸಂದರ್ಭದಲ್ಲಿ ಕೃಷಿ ಕ್ಷೇತ್ರದಲ್ಲಿನ ವಿಶಿಷ್ಟ ಪ್ರಯೋಗಗಳಿಗಾಗಿ ದಿವ್ಯಾ ನಾಯಕ್ ಇವರನ್ನು ಗೌರವಿಸಲಾಯಿತು. ಕಾಲೇಜಿನ ಕನ್ನಡ ವಿಭಾಗದ ಶ್ರೀಮತಿ ದೀಪ್ತಿ ಕೆ ಇವರು ಧನ್ಯವಾದ ಸಲ್ಲಿಸಿದರು. ಕನ್ನಡ ವಿಭಾಗದ ಮುಖ್ಯಸ್ಥರಾದ ಶ್ರೀ ಕೃಷ್ಣಮೂರ್ತಿ ಡಿ.ಬಿ ಯವರು ಕಾರ್ಯಕ್ರಮ ನಿರೂಪಿಸಿದರು.

