ಕುಂದಾಪುರ: “ಕ್ರೀಡಾ ಪಂದ್ಯಾಟ ಯುವ ವಿದ್ಯಾರ್ಥಿಗಳಲ್ಲಿ ಮನೋ-ದೈಹಿಕ ಬಲವನ್ನು ಹೆಚ್ಚಿಸುತ್ತದೆ. ಕಬ್ಬಡ್ಡಿಯಂಥ ಕ್ರೀಡೆ ವಿದ್ಯಾರ್ಥಿಗಳ ಸಾಹಸ ಬುದ್ಧಿಯನ್ನು ಹೆಚ್ಚಿಸಿ ಬದುಕಿನ ಸವಾಲುಗಳನ್ನು ಎದುರಿಸುವ ಸಾಮರ್ಥ್ಯ ನೀಡುತ್ತದೆ ” ಎಂದು ಕುಂದಾಪುರ ಎಜುಕೇಶನ್ ಸೊಸೈಟಿಯ ಅಧ್ಯಕ್ಷರಾದ ಶ್ರೀ ಬಿ.ಎಮ್.ಸುಕುಮಾರ್ ಶೆಟ್ಟಿ ಯವರು ಕುಂದಾಪುರದ ಆರ್.ಎನ್. ಶೆಟ್ಟಿ ಪಿ.ಯು ಕಾಲೇಜು, ಪದವಿ ಪೂರ್ವ ಶಿಕ್ಷಣ ಇಲಾಖೆ, ಉಡುಪಿ, ಇವರ ಜಂಟಿ ಆಶ್ರಯದಲ್ಲಿ ಆಯೋಜಿಸಿದ ಕುಂದಾಪುರ ತಾಲೂಕು ಮಟ್ಟದ ಪದವಿ ಪೂರ್ವ ವಿದ್ಯಾರ್ಥಿಗಳ ಕಬ್ಬಡ್ಡಿ ಪಂದ್ಯಾಟವನ್ನು ಉದ್ಘಾಟಿಸಿ ಕರೆ ನೀಡಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಶ್ರೀ ಕುಸುಮಾಕರ ಶೆಟ್ಟಿ, ಯುವಜನಸೇವಾ ಕ್ರೀಡಾಧಿಕಾರಿ, ಕುಂದಾಪುರ, ಇವರು ಕ್ರೀಡೆಯು ದೈನಂದಿನ ಚಟುವಟಿಕೆಗಳ ಭಾಗವಾಗಿರದಿದ್ದರೆ ಜೀವನ ನೀರಸವಾಗುತ್ತದೆ ಎಂದು ತಿಳಿಸಿದರು.
ಶ್ರೀ ಜೀವನ್ ಕುಮಾರ್ ಶೆಟ್ಟಿ, ಜಿಲ್ಲಾಧ್ಯಕ್ಷರು, ಪದವಿ ಪೂರ್ವ ಕಾಲೇಜುಗಳ ದೈಹಿಕ ಶಿಕ್ಷಣ ನಿರ್ದೇಶಕರ ಸಂಘ, ಉಡುಪಿ, ಇವರು ಶುಭಾಶಂಸನೆಗೈದರು.
ಶ್ರೀ ನಾಗರಾಜ ಶೆಟ್ಟಿ, ಹಿರಿಯ ದೈಹಿಕ ಶಿಕ್ಷಣ ನಿರ್ದೇಶಕರು ಗಂಗೊಳ್ಳಿ ಹಾಗೂ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರಾದ ಶ್ರೀ ರಾಮ್ ಶೆಟ್ಟಿಯವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾಲೇಜಿನ ಪ್ರಾಂಶುಪಾಲರಾದ ಶ್ರೀ ನವೀನ ಕುಮಾರ್ ಶೆಟ್ಟಿಯವರು ಅತಿಥಿಗಳನ್ನು ಸ್ವಾಗತಿಸಿದರು. ಆಂಗ್ಲಭಾಷಾ ಉಪನ್ಯಾಸಕಿಯಾದ ಶ್ರೀಮತಿ ಸುಮತಿ ಶೆಣೈಯವರು ಧನ್ಯವಾದ ಸಲ್ಲಿಸಿದರು. ಹಿಂದಿ ವಿಭಾಗದ ಮುಖ್ಯಸ್ಥರಾದ ಶ್ರೀಮತಿ ಜಯಶೀಲಾ ಪೈಯವರು ಕಾರ್ಯಕ್ರಮ ನಿರೂಪಿಸಿದರು.