ಕುಂದಾಪುರದ ಆರ್. ಎನ್. ಶೆಟ್ಟಿ ಪದವಿ ಪೂರ್ವ ಕಾಲೇಜಿನಲ್ಲಿ ಗಾಂಧೀಜಿ ಮತ್ತು ಶಾಸ್ತ್ರೀಜಿ ಜಯಂತಿ ಆಚರಣೆ

” ಗಾಂಧೀಜಿಯವರು ಭಾರತವನ್ನು ಸ್ವತಂತ್ರಗೊಳಿಸುವಲ್ಲಿ ಮಾತ್ರವಲ್ಲದೇ, ದೇಶ ನಿರ್ಮಾಣಕ್ಕೆ ಭದ್ರ ಅಡಿಪಾಯ ಹಾಕುವುದರಲ್ಲಿಯೂ ಮುಂಚೂಣಿಯ ಪಾತ್ರವಹಿಸಿದ್ದರು. ಭಾರತದ ಸಂವಿಧಾನದಲ್ಲಿಯೂ ಅಳವಡಿಸಲಾದ ರಾಮರಾಜ್ಯದ ಪರಿಕಲ್ಪನೆ ಮತ್ತು ಸರಳತೆ, ಸ್ವಚ್ಚತೆಯೆಂಬ ಮೌಲ್ಯಗಳನ್ನು ಪರಿಣಾಮಕಾರಿಯಾಗಿ ಜನಜೀವನದಲ್ಲಿ ತಲುಪಿಸಿದವರೂ ಗಾಂಧೀಜಿಯವರು. ಹಾಗೆಯೇ ಗಾಂಧೀಜಿಯವರ ಶ್ರೇಷ್ಠ ತತ್ವ ಮತ್ತು ಮೌಲ್ಯಗಳನ್ನು ಅತ್ಯಂತ ಸಾರ್ಥಕ ರೀತಿಯಲ್ಲಿ ಬದುಕಿ ಯಶಸ್ವಿಯಾದವರು ಮಾಜಿ ಪ್ರಧಾನಿ ಶ್ರೀ ಲಾಲ್ ಬಹದ್ದೂರ್ ಶಾಸ್ತ್ರೀಜಿಯವರು ” ಎಂದು ಕುಂದಾಪುರದ ಆರ್. ಎನ್. ಶೆಟ್ಟಿ ಪದವಿ ಪೂರ್ವ ಕಾಲೇಜಿನಲ್ಲಿ ಗಾಂಧೀಜಿ ಮತ್ತು ಶಾಸ್ತ್ರೀಜಿ ಜಯಂತಿಯ ಆಚರಣೆಯ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ನವೀನ ಕುಮಾರ್ ಶೆಟ್ಟಿಯವರು ಕರೆ ನೀಡಿದರು. ಗಾಂಧಿ‌ ಮತ್ತು ಶಾಸ್ತ್ರಿ ಜಯಂತಿಯ ಅಂಗವಾಗಿ ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಮತ್ತು ಮಾಜಿ ಪ್ರಧಾನಿ‌ಲಾಲ್ ಬಹದ್ದೂರ್ ಶಾಸ್ತ್ರೀಜಿಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಲಾಯಿತು.  ಕಾಲೇಜಿನ‌ ಎಲ್ಲ ಬೋದಕ- ಬೋಧಕೇತರ ಸಿಬ್ಬಂಧಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಕನ್ನಡ ವಿಭಾಗದ ಮುಖ್ಯಸ್ಥರಾದ ಶ್ರೀ ಕೃಷ್ಣಮೂರ್ತಿ ಡಿ.ಬಿ ಯವರು ಕಾರ್ಯಕ್ರಮ ನಿರ್ವಹಿಸಿದರು.