

ಕುಂದಾಪುರ: “ಶಿಕ್ಷಣದಿಂದ ವ್ಯಕ್ತಿತ್ವದಲ್ಲಿ ಪಡೆದ ಬದಲಾವಣೆಯನ್ನು ನಿತ್ಯ ಜೀವನದಲ್ಲಿ ಹೇಗೆ ಬಳಸಿಕೊಳ್ಳುತ್ತೀರಿ ಅನ್ನುವುದು ಮುಖ್ಯ. ಈ ನಿಟ್ಟಿನಲ್ಲಿ ಉನ್ನತ ವ್ಯಾಸಂಗ ಮುಗಿಸಿದ ವಿದ್ಯಾರ್ಥಿಗಳು ಭಾರತದಲ್ಲಿಯೇ ಉದ್ಯೋಗ ಪಡೆದು, ದೇಶದ ರಾಷ್ಟ್ರೀಯ ಆದಾಯವನ್ನು ಹೆಚ್ಚಿಸುವಂತಾಗಬೇಕು’ ಎಂದು ಆರ್. ಎನ್ ಶೆಟ್ಟಿ ಪದವಿ ಪೂರ್ವ ಕಾಲೇಜಿನ ವಾರ್ಷಿಕೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ ಉಡುಪಿಯ ಎಮ್.ಜಿ.ಎಮ್ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಲಕ್ಷ್ಮೀನಾರಾಯಣ ಕಾರಂತ ರವರು ತಿಳಿಸಿದರು.
ಇನ್ನೋರ್ವ ಮುಖ್ಯ ಅತಿಥಿ ಉಡುಪಿ ಜಿಲ್ಲಾ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಶ್ರೀ ಮಾರುತಿ ಇವರು ಪದವಿ ಪೂರ್ವ ವಿಭಾಗದ ಮೂರು ವಿಭಾಗಗಳಲ್ಲಿ ವಿದ್ಯಾರ್ಥಿಗಳು ಯಾವ ವಿಭಾಗವನ್ನು ಆಯ್ಕೆ ಮಾಡಿದರೂ ಶುದ್ಧ ಮನದ ಪರಿಶ್ರಮದಿಂದ ಅಭ್ಯಾಸ ಮಾಡಿದರೆ ಜೀವನದಲ್ಲಿ ಸಂತೃಪ್ತಿ ಪಡೆಯಲು ಸಾಧ್ಯ ಎಂದು ತಿಳಿಸಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ ಕಾಲೇಜಿನ ಸಂಚಾಲಕರೂ ಬೈಂದೂರು ವಿಧಾನಸಭಾ ಕ್ಷೇತ್ರದ ಶಾಸಕರೂ ಆದ ಶ್ರೀ ಸುಕುಮಾರ ಶೆಟ್ಟಿಯವರು ವಿದ್ಯಾರ್ಥಿಗಳ ಸಾಧನೆಯನ್ನು ಮೆಚ್ಚಿ ಶ್ಲಾಘಿಸಿದರು.
ಕಾಲೇಜಿನ ಆಡಳಿತ ಮಂಡಳಿ ಕುಂದಾಪುರ ಎಜುಕೇಶನ್ ಸೊಸೈಟಿಯ ಕಾರ್ಯದರ್ಶಿಯವರಾದ ಶ್ರೀ ಸೀತಾರಾಮ ನಕ್ಕತ್ತಾಯರು ಅತಿಥಿಗಳನ್ನು ಸ್ವಾಗತಿಸಿದರು. ಕುಂದಾಪುರ ಎಜುಕೇಶನ್ ಸೊಸೈಟಿಯ ಜೊತೆ ಕಾರ್ಯದರ್ಶಿ ಶ್ರೀ ಸುಧಾಕರ್ ಶೆಟ್ಟಿ ಭಾಂಢ್ಯ ಮತ್ತು ಸದಸ್ಯರಾದ ಶ್ರೀ ಅರುಣ್ ಕುಮಾರ್ ಶೆಟ್ಟಿಯವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾಲೇಜಿನ ಪ್ರಾಂಶುಪಾಲರಾದ ಶ್ರೀ ನವೀನ್ ಕುಮಾರ್ ಶೆಟ್ಟಿಯವರು ವಾರ್ಷಿಕ ಶೈಕ್ಷಣಿಕ ವರದಿ ವಾಚಿಸಿದರು. ಕಾಲೇಜಿನ ಹಿಂದಿ ವಿಭಾಗದ ಮುಖ್ಯಸ್ಥೆ ಶ್ರೀಮತಿ ಜಯಶೀಲಾ ಪೈಯವರು ಸಾಧಕ ವಿದ್ಯಾರ್ಥಿಗಳ ಸನ್ಮಾನ ಪತ್ರ ವಾಚಿಸಿದರು. ಕಾಲೇಜಿನ ಉಪನ್ಯಾಸಕರಾದ ಶ್ರೀಮತಿ ಸುಷ್ಮಾ ಶೆಣೈ, ಶ್ರೀಮತಿ ಶುಭಾ ಎಂ, ಶ್ರೀಮತಿ ಅರಣಾ ಹೊಳ್ಳ, ಹಾಗೂ ಜಾನೀಸ್ ನತಾಶಾ ಡಿಸೋಜಾರವರು ಬಹುಮಾನ ವಿತರಣಾ ಕಾರ್ಯಕ್ರಮವನ್ನು ನಿರ್ವಹಿಸಿದರು. ವಿದ್ಯಾರ್ಥಿಗಳಾದ ಜೊಯೆಲ್ ಜೋ ಹಾಗೂ ಅಬು ಸುಫಿಯಾನ್ ಅತಿಥಿಗಳನ್ನು ಪರಿಚಯಿಸಿದರು. ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥರಾದ ಶ್ರೀ ಕೃಷ್ಣಮೂರ್ತಿ ಡಿ.ಬಿಯವರು ಧನ್ಯವಾದ ಸಲ್ಲಿಸಿದರು. ದ್ವಿತೀಯ ಪಿ.ಯು.ಸಿ ವಿಜ್ಞಾನ ವಿಭಾಗದ ಸಾಹಿತ್ಯ ಮತ್ತು ಪ್ರಥಮ ಪಿ.ಯು.ಸಿ ವಿಜ್ಞಾನ ವಿಭಾಗದ ಸೌಮ್ಯ ಇವರು ಕಾರ್ಯಕ್ರಮ ನಿರೂಪಿಸಿದರು.



