‘ಸ್ವತಂತ್ರ ಭಾರತ ಅಮೃತ ಮಹೋತ್ಸವದ ಮೈಲಿಗಲ್ಲು ದಾಟುತ್ತಿರುವ ಶುಭ ಸಂದರ್ಭದಲ್ಲಿ ದೇಶ ಕಟ್ಟಿದ ಅಂದಿನ ಮತ್ತು ಇಂದಿನ ನಾಯಕರ ಆಶೋತ್ತರಗಳನ್ನು ಮನದಲ್ಲಿಟ್ಟು ಪ್ರಜ್ಞಾವಂತ ನಾಗರೀಕರಾದ ನಾವು ರಾಷ್ಟ್ರವನ್ನು ಇನ್ನಷ್ಟು ಬಲಿಷ್ಠಗೊಳಿಸಲು ನಮ್ಮ ಕೊಡುಗೆಯನ್ನು ನೀಡಬೇಕು ‘ ಎಂದು ಕುಂದಾಪುರದ ಆರ್. ಎನ್. ಶೆಟ್ಟಿ ಪದವಿ ಪೂರ್ವ ಕಾಲೇಜಿನಲ್ಲಿ 76 ನೇ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಅಮ್ರೋತ್ಸವ ಆಚರಣೆಯ ಅಂಗವಾಗಿ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ನವೀನ್ ಕುಮಾರ ಶೆಟ್ಟಿಯವರು ಧ್ವಜಾರೋಹಣಗೈದು ಕರೆ ನೀಡಿದರು. ‘ಆಝಾದಿ ಕಾ ಅಮೃತ್ ಮಹೊತ್ಸವ್ ‘ ಕಾರ್ಯಕ್ರಮದ ಅಂಗವಾಗಿ ಕಾಲೇಜಿನಲ್ಲಿ ಆಯೋಜಿಸಲಾದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಮಾಡಲಾಯಿತು. ಪ್ರಥಮ ಪಿ.ಯು.ಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ನೃತ್ಯ ಕಲಾವಿದೆ ಕು. ಪೂರ್ವಿಕಾ ಇವರಿಂದ ದೇಶಭಕ್ತಿ ನೃತ್ಯ ಪ್ರದರ್ಶನ ನಡೆಯಿತು. ಬಹುಮಾನ ವಿಜೇತ ವಿದ್ಯಾರ್ಥಿಗಳಿಂದ ಭಾಷಣ ಹಾಗೂ ವಿದ್ಯಾರ್ಥಿನಿಯರಿಂದ ದೇಶಭಕ್ತಿ ಗೀತೆಯನ್ನು ಆಯೋಜಿಸಲಾಯಿತು. ಸ್ವಾತಂತ್ರ್ಯದ ಅಮೃತಮಹೋತ್ಸವದ ಅಂಗವಾಗಿ ಕಾಲೇಜಿನ ವಿದ್ಯಾರ್ಥಿಗಳಿಂದ ಸಹಸಂಸ್ಥೆಯಾದ ಡಾ. ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಸಹಯೋಗದಲ್ಲಿ ಕುಂದಾಪುರ ನಗರದಲ್ಲಿ ಮೆರವಣಿಗೆಯನ್ನು ಹಮ್ಮಿಕೊಳ್ಳಲಾಯಿತು. ಕಾಲೇಜಿನ ಹಿಂದಿ ವಿಭಾಗದ ಮುಖ್ಯಸ್ಥರಾದ ಶ್ರೀಮತಿ ಜಯಶೀಲಾ ಪೈಯವರು ಬಹುಮಾನ ವಿತರಣಾ ಕಾರ್ಯಕ್ರಮ ನಿರ್ವಹಿಸಿದರು. ಕನ್ನಡ ವಿಭಾಗದ ಮುಖ್ಯಸ್ಥರಾದ ಶ್ರೀ ಕೃಷ್ಣಮೂರ್ತಿ ಡಿ.ಬಿ ಯವರು ಧನ್ಯವಾದ ಸಲ್ಲಿಸಿದರು. ದೈಹಿಕ ಶಿಕ್ಷಣ ನಿರ್ದೇಶಕರಾದ ಶ್ರೀ ರಾಮ್ ಶೆಟ್ಟಿಯವರು ಕಾರ್ಯಕ್ರಮ ನಿರ್ವಹಿಸಿದರು.