

ಕುಂದಾಪುರ ಪ್ರಧಾನ ಅಂಚೆ ಕಚೇರಿಯಲ್ಲಿ ಪಂಚಗಂಗಾವಳಿ ಶಾಶ್ವತ ಅಂಚೆ ಮೊಹರು ಮೇ 23 ರಂದು ಬಿಡುಗಡೆಗೊಂಡಿತು. ಉಡುಪಿ ವಿಭಾಗದ ಅಂಚೆ ಇಲಾಖೆಯ ಅಧೀಕ್ಷಕ ರಮೇಶ ಪ್ರಭು ಅಧಿಕೃತವಾಗಿ ಅತಿಥಿಗಳ ಸಮ್ಮುಖದಲ್ಲಿ ಚಾಲನೆ ನೀಡಿದರು.
“ಕರ್ನಾಟಕ ಅಂಚೆ ವೃತ್ತದ ಮುಖ್ಯ ಪೋಸ್ಟ್ ಮಾಸ್ಟರ್ ಜನರಲ್ ಎಸ್. ರಾಜೇಂದ್ರ ಕುಮಾರ್ ‘ಪಂಚಗಂಗಾವಳಿ’ ಬಗ್ಗೆ ತುಂಬ ಕುತೂಹಲ ಹೊಂದಿದ್ದರು. ಕುಂದಾಪುರದ ಮಹತ್ವ ತಿಳಿಸುವ, ಮೊಹರು ಮಾಡಬೇಕೆಂಬ ಆಶಯ ನಮಗಿತ್ತು. ‘ಪಂಚಗಂಗಾವಳಿ’ ನದಿಗಳು ಕುಂದಾಪುರ ತಾಲೂಕಿನಲ್ಲಿ ಹರಿಯುತ್ತಿದ್ದು, ದೇಶದಲ್ಲೇ ವಿಶಿಷ್ಟ ಸ್ಥಾನ ಹೊಂದಿದೆ ಎಂದು ಅರಿತ ಮೇಲೆ ಇಲಾಖೆಯ ಒಪ್ಪಿಗೆ ದೊರಕಿತು. ಅಂಚೆ ಚೀಟಿ ಸಂಗ್ರಾಹಕರೂ ಖುಷಿ ಪಟ್ಟರು. ಈ ಮೊಹರನ್ನು ಅಂಚೆ ಕಾರ್ಡು, ಕವರ್ಗಳಿಗೆ ಹಾಕಿಸುವ ಮೂಲಕ ಹೆಚ್ಚು ಜನಪ್ರಿಯ ಮಾಡಬಹುದು.” ಎಂದು ರಮೇಶ ಪ್ರಭು ತಿಳಿಸಿದರು.
ಮೊಹರು ರಚನೆಗೆ ಸಹಕಾರ ನೀಡಿದ ಪಂಚಗಂಗಾವಳಿ ಸಮಿತಿಯ ಸಂಚಾಲಕ ಯು. ಎಸ್. ಶೆಣೈ, ಹಿರಿಯ ಅಂಚೆ ಚೀಟಿ ಸಂಗ್ರಾಹಕ ಕೃಷ್ಣಯ್ಯ ಉಡುಪಿಯವರನ್ನು ಅವರು ಅಭಿನಂದಿಸಿದರು.
“ಜಿಲ್ಲೆಯಲ್ಲಿ 9 ಪ್ರಮುಖ ಕೇಂದ್ರಗಳ ಮೊಹರು ಬಿಡುಗಡೆ ಮಾಡಲಾಗಿದ್ದು, ಪಂಚಗಂಗಾವಳಿ 10ನೇ ಮೊಹರು. ಮುಂದಿನ ದಿನಗಳಲ್ಲಿ ಪಂಚಗಂಗಾವಳಿ ಚಿತ್ರ ಇರುವ ಅಂಚೆ ಕಾರ್ಡು ಸಹ ಬಿಡುಗಡೆ ಮಾಡಲಿದ್ದೇವೆ. ಉತ್ತಮ ಸೇವೆ ನೀಡುತ್ತಿರುವ ಕುಂದಾಪುರ ಅಂಚೆ ಕಚೇರಿ ಅಧಿಕಾರಿಗಳು, ಸಿಬ್ಬಂದಿಗಳು, ‘ಪಂಚಗಂಗಾವಳಿ’ ಮೊಹರು ಹೆಚ್ಚು ಸಾರ್ವಜನಿಕರಿಗೆ ತಲುಪುವಂತೆ ಮಾಡಲಿದ್ದಾರೆ.” ಎಂದು ತಿಳಿಸಿ ಅತಿಥಿಗಳನ್ನು ಅಭಿನಂದಿಸಿದರು.
ಹಿರಿಯ ವಕೀಲ, ಉಡುಪಿ ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಎ. ಎಸ್. ಎನ್. ಹೆಬ್ಬಾರ್ ಅಂಚೆ ಇಲಾಖೆಯ ಸೇವೆಯನ್ನು ಕೊಂಡಾಡಿ, “ಸಾರ್ವಜನಿಕ ಹಿತಾಸಕ್ತಿಗೆ ಕೂಡಲೇ ಸ್ಪಂದಿಸುವ ಅಂಚೆ ಇಲಾಖೆ ಕುಂದಾಪುರಕ್ಕೆ ಮಹತ್ವ ನೀಡಿ ‘ಪಂಚಗಂಗಾವಳಿ’ ಮೊಹರು ಬಿಡುಗಡೆ ಮಾಡಿರುವುದು ಶ್ಲಾಘನೀಯ. ಇದು ಈ ಪರಿಸರದ ಅಭಿವೃದ್ಧಿಗೆ ಪ್ರೇರಣೆ ನೀಡಲಿ.” ಎಂದು ಅಭಿನಂದಿಸಿದರು.
ವಿದೇಶದಲ್ಲೂ ಭಾರತೀಯ ಅಂಚೆ ಚೀಟಿಗಳಿಗಿರುವ ಗೌರವವನ್ನು ಅವರು ವಿವರಿಸಿದರು.
ಯು. ಎಸ್. ಶೆಣೈ ಮಾತನಾಡಿ, ‘ವಿದೇಶಿ, ಸ್ವದೇಶಿ ಸಂಶೋಧಕರು, ಇತಿಹಾಸಗಾರರು, ಪಂಚಗಂಗಾವಳಿ ನದಿಗಳ ವೈಶಿಷ್ಟ್ಯದ ಬಗ್ಗೆ ದಾಖಲಿಸಿದ್ದು, ಮುಂದಿನ ಪೀಳಿಗೆಯವರಿಗೂ ನಮ್ಮ ಪರಿಸರದ ಬಗ್ಗೆ ಅರಿವು ಮೂಡಿಸಬೇಕಾದುದು ಅವಶ್ಯವಾಗಿದೆ. ಈ ಕಾರಣ 15 ವರ್ಷಗಳಿಂದ ಪಂಚಗಂಗಾವಳಿ ಅಭಿಯಾನ ನಡೆಸುತ್ತಿದ್ದೇವೆ. ಅಂಚೆ ಇಲಾಖೆ ಸೂಕ್ತ ಸಂದರ್ಭದಲ್ಲಿ ಪಂಚಗಂಗಾವಳಿ ಮೊಹರು ಬಿಡುಗಡೆಗೊಳಿಸಿರುವುದು ಖುಷಿ ಉಂಟು ಮಾಡಿತು. ಈ ವಿನ್ಯಾಸ ರಚನೆಗೆ ಸಹಕರಿಸಿದ ಕಲಾವಿದ ಕೇಶವ ಸಸಿಹಿತ್ಲು, ಪ್ರೇರಣೆ ನೀಡಿದ ಕೃಷ್ಣಯ್ಯ, ಅಂಚೆ ಅಧೀಕ್ಷಕ ರಮೇಶ ಪ್ರಭು ಅವರಿಗೆ ಅಭಿನಂದನೆಗಳು. ಅಂಚೆ ಚೀಟಿ ಸಂಗ್ರಹದ ಹವ್ಯಾಸವನ್ನು ಪ್ರತಿಭಾ ಕಾರಂಜಿ ಮಾದರಿಯಲ್ಲಿ ವಿದ್ಯಾರ್ಥಿಗಳಿಗೆ ಪ್ರೇರಣೆ ನೀಡಬೇಕು.” ಎಂದರು.
ಹಿರಿಯ ಅಂಚೆ ಚೀಟಿ ಸಂಗ್ರಾಹಕ ಕೃಷ್ಣಯ್ಯ ಮಾತನಾಡಿ, ‘ಉಡುಪಿ ಜಿಲ್ಲೆಯಲ್ಲಿ ಪ್ರಮುಖ ಸ್ಥಳಗಳ ಮೊಹರು, ಅಂಚೆ ಚೀಟಿ ಬಿಡುಗಡೆ ಆಗುವಂತೆ ಮಾಡಲು ಪ್ರಯತ್ನ ನಿರಂತರ ನಡೆಯುತ್ತಿದೆ. ಕೆಲವು ಕಾರಣಗಳಿಂದ ವಿಳಂಬವಾಗುತ್ತದೆ. ಕೆಲವೊಮ್ಮೆ ನಮ್ಮ ನಿರೀಕ್ಷೆಯ ವಿನ್ಯಾಸ ಪ್ರಕಟವಾಗುವುದಿಲ್ಲ. ಈ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲು ಸಂತೋಷವಾಗುತ್ತದೆ. ‘ಪಂಚಗಂಗಾವಳಿ’ ಮೊಹರು ಬಿಡುಗಡೆ ತೃಪ್ತಿ ತಂದಿದೆ ಎಂದರು.
ಕುಂದಾಪುರ ಪ್ರಧಾನ ಅಂಚೆ ಪಾಲಕರಾದ ಜಿ. ಎಸ್. ಮರಕಾಲ ಅತಿಥಿಗಳನ್ನು ಗೌರವಿಸಿದರು. ಉಡುಪಿ ಜಿಲ್ಲಾ ಸಹಾಯಕ ಅಂಚೆ ಅಧೀಕ್ಷಕ ಕೃಷ್ಣರಾಜ ಭಟ್ ಪ್ರಾಸ್ತವಿಕ ಮಾತುಗಳನ್ನಾಡಿದರು. ಉಪ ಪ್ರಧಾನ ಅಂಚೆ ಪಾಲಕಿ ಸೌಮ್ಯಶ್ರೀ ಸ್ವಾಗತಿಸಿದರು. ಪೂರ್ಣಿಮಾ ಜನಾರ್ಧನ ಕಾರ್ಯಕ್ರಮ ನಿರೂಪಿಸಿದರು. ಸಹಾಯಕ ಅಂಚೆ ಅಧೀಕ್ಷಕ ದಯಾನಂದ ವಂದಿಸಿದರು.