ಕುಂದಾಪುರದ ವಿಠಲವಾಡಿಯ “ಡೌನ್ ಟೌನ್” ನ ಪಂಚಗಂಗಾವಳಿ ತೀರದಲ್ಲಿ ದೀಪಾವಳಿಯ ದಿನ ಭಾನುವಾರ ಮುಂಜಾನೆ ಶಾಸ್ತ್ರೀಯ ಭಾವ ಸಂಗೀತ ಲಹರಿ ಕಾರ್ಯಕ್ರಮ ಸಂಗೀತ ಪ್ರಿಯರಿಗೆ ಆನಂದ ಉಂಟು ಮಾಡಿತು. ಸಂಗೀತ ಭಾರತಿ ಟ್ರಸ್ಟ್ ಕುಂದಾಪುರ ಹಾಗೂ ಗೋರಕ್ಷಾ ಗೋಕುಲಧಾಮ ಟ್ರಸ್ಟ್ ಕೋಟೇಶ್ವರದ ಜಂಟಿ ಆಶ್ರಯದಲ್ಲಿ ಡೌನ್ ಟೌನ್ ನದಿ ತೀರದಲ್ಲಿ ಅಭಿವೃದ್ಧಿ ಪಡಿಸಿದ ಹಸಿರು ಉದ್ಯಾನವನದಲ್ಲಿ, ಖ್ಯಾತ ಸಂಗೀತಗಾರ ಸಿದ್ಧಾರ್ಥ ಬೆಳ್ಮಣ್ಣು ಶುಶ್ರಾವ್ಯವಾಗಿ ಹಾಡಿದರು. ಈ ಶಾಸ್ತ್ರೀಯ ಸಂಗೀತ, ಭಕ್ತಿ ಸಂಗೀತ ಕಾರ್ಯಕ್ರಮದಲ್ಲಿ ಹಾರ್ಮೋನಿಯಂನಲ್ಲಿ ಪ್ರಸಾದ್ ಕಾಮತ್ ಉಡುಪಿ, ತಬಲಾದಲ್ಲಿ ಕೆ. ವಿಘ್ನೇಶ್ ಕಾಮತ್ ಕೋಟೇಶ್ವರ ಉತ್ತಮ ಸಹಕಾರ ನೀಡಿದರು.
ಕು. ಮೇಘನಾ ಭಟ್ ತಾನ್ಪುರದಲ್ಲಿ, ಕೌಸ್ತುಭ್ ಕಾಮತ್ ತಾಳದಲ್ಲಿ ಸಹಕರಿಸಿದರು.
ಕಲಾವಿದರನ್ನು ಸಂಗೀತ ಭಾರತಿ ಟ್ರಸ್ಟ್ನ ಅಧ್ಯಕ್ಷ ಕೆ. ಶ್ರೀಧರ್ ಕಾಮತ್, ವಿಶ್ವಸ್ಥರಾದ ಎ.ಎಸ್.ಎನ್.ಹೆಬ್ಬಾರ್, ಡಾ| ಎಚ್.ಆರ್. ಹೆಬ್ಬಾರ್ ಹಾಗೂ ಗೋರಕ್ಷಾ ಗೋಕುಲಧಾಮ ಟ್ರಸ್ಟ್ನ ಕೆ. ಸುರೇಶ ಕಾಮತ್, ಶ್ರೀಮತಿ ಭಾಗ್ಯ ಎಸ್. ಕಾಮತ್ ಹಾಗೂ ವಿಶ್ವನಾಥ ಭಟ್ ಉಡುಪಿ ಗೌರವಿಸಿದರು.
ಕೆ. ಸುರೇಶ್ ಕಾಮತ್ ಸ್ವಾಗತಿಸಿ, ಕಲಾವಿದರನ್ನು ಪರಿಚಯಿಸಿದರು.
ಸಂಗೀತ ಭಾರತಿ ಟ್ರಸ್ಟ್ನ ವಿಶ್ವಸ್ಥರಾದ ಕೆ. ಪ್ರಭಾಕರ ಪ್ರಭು, ಕೆ. ಸೀತಾರಾಮ ನಕ್ಕತ್ತಾಯ, ಕಾರ್ಯದರ್ಶಿ ಕೆ. ನಾರಾಯಣ ಉಪಸ್ಥಿತರಿದ್ದರು.
ಬಸ್ರೂರಿನ ಕಲಾವಿದ ಪೂರ್ಣಚಂದ್ರ ಅವರು ತಾವು ಬಿಡಿಸಿದ ಸಿದ್ಧಾರ್ಥ ಬೆಳ್ಮಣ್ಣು ಅವರ ಚುಕ್ಕಿ ಚಿತ್ರ ಅರ್ಪಿಸಿದರು.
“ಶಾಸ್ತ್ರೀಯ ಸಂಗೀತಕ್ಕೆ ಸಂಘಟಕರು, ಶ್ರೋತವರ್ಗ ನೀಡುತ್ತಿರುವ ಪ್ರೋತ್ಸಾಹ ಅಭಿನಂದನೀಯ. ಸುಂದರ ಪರಿಸರದಲ್ಲಿ ಹಾಡಲು ಅವಕಾಶ ನೀಡಿರುವುದಕ್ಕೆ ಖುಷಿಯಾಗಿದೆ” ಎಂದು ಸಿದ್ಧಾರ್ಥ ಬೆಳ್ಮಣ್ಣು ಹೇಳಿದರು.
ಯು.ಎಸ್.ಶೆಣೈ ಕಾರ್ಯಕ್ರಮ ನಿರೂಪಿಸಿದರು.