JANANUDI.COM NETWORK
” ಸಮಾಜದಲ್ಲಿ ಸರಿಯಾಗಿ ಜೀವಿಸಬೇಕಾದರೆ ಕಾನೂನಿನ ಅಗತ್ಯತೆ ಇದೆ. ಪ್ರತಿಯೊಂದು ಕಾನೂನು ಒಂದಲ್ಲ ಒಂದು ಪ್ರಯೋಜನವನ್ನು ನೀಡುತ್ತದೆ. ಕಾನೂನಿನ ಅರಿವು ಇಲ್ಲದಿದ್ದಲ್ಲಿ ನಾವು ನೀವೆಲ್ಲ ಒಳ್ಳೆಯ ಪ್ರಜೆಗಳಾಗಲು ಸಾಧ್ಯವಿಲ್ಲ. ಈ ನಿಟ್ಟಿನಲ್ಲಿ ಬಹುಸಂಖ್ಯೆಯ ವಿದ್ಯಾರ್ಥಿ ಸಮೂಹಕ್ಕೆ ಅರಿವು ಮೂಡಿಸುವುದು ಕಾನೂನು ಪ್ರಾಧಿಕಾರದ ಧ್ಯೇಯವಾಗಿದ್ದು, ಎಲ್ಲ ವಿದ್ಯಾರ್ಥಿಗಳು ಕಾನೂನಿನ ಪ್ರಕ್ರಿಯೆಗಳನ್ನು ಮನವರಿಕೆ ಮಾಡಿಕೊಂಡು ಗೌರವದಿಂದ ಜೀವನ ನಡೆಸುವಂತಾಗಬೇಕು ” ಎಂದು ಬೆಂಗಳೂರು ಜಿಲ್ಲಾ ನ್ಯಾಯಾಧೀಶರು ಹಾಗೂ ಕರ್ನಾಟಕ ರಾಜ್ಯ ಕಾನೂನು ಸೇವಾ ಪ್ರಾಧಿಕಾರ, ಬೆಂಗಳೂರು ಇದರ ಸದಸ್ಯ ಕಾರ್ಯದರ್ಶಿಯವರಾದ ಶ್ರೀ ಎಚ್. ಶಶಿಧರ್ ಶೆಟ್ಟಿಯವರು ಕುಂದಾಪುರದ ಆರ್. ಎನ್. ಶೆಟ್ಟಿ ಪದವಿ ಪೂರ್ವ ಕಾಲೇಜಿನಲ್ಲಿ ಕರ್ನಾಟಕ ರಾಜ್ಯ ಕಾನೂನು ಸೇವಾ ಪ್ರಾಧಿಕಾರ, ಬೆಂಗಳೂರು, ಜಿಲ್ಲಾ ಕಾನುನು ಸೇವಾ ಪ್ರಾಧಿಕಾರ, ಉಡುಪಿ, ತಾಲೂಕು ಕಾನೂನು ಸೇವಾ ಸಮಿತಿ, ಕುಂದಾಪುರ, ವಕೀಲರ ಸಂಘ ಕುಂದಾಪುರ(ರಿ), ಲಯನ್ಸ್ ಕ್ಲಬ್, ಬನ್ನಾಡಿ, ವಡ್ಡರ್ಸೆ, ಲಯನ್ಸ್ ಕ್ಲಬ್, ಕುಂದಾಪುರ, ಇವುಗಳ ಸಂಯುಕ್ತ ಆಶ್ರಯದಲ್ಲಿ ಕಾಲೇಜಿನಲ್ಲಿ ಹಮ್ಮಿಕೊಳ್ಳಲಾದ ‘ ವಿದ್ಯಾರ್ಥಿಗಳಿಗೆ ಕಾನೂನು ಅರಿವು’ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಕರೆ ನೀಡಿದರು.
ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಹಿರಿಯ ವಕೀಲರಾದ, ರೊಟೇರಿಯನ್, ಎಡ್ವೊಕೇಟ್ ಶಿರಿಯಾರ ಗೋಪಾಲಕೃಷ್ಣ ಶೆಟ್ಟಿಯವರು ವಿದ್ಯಾರ್ಥಿಗಳೊಂದಿಗಿನ ಸಂವಾದದಲ್ಲಿ, ಇಂದು ಯುವಜನರಲ್ಲಿ ಹೆಚ್ಚುತ್ತಿರುವ ಮಾದಕದ್ರವ್ಯ ವಸನದಿಂದಾಗುವ ಅಪರಾಧ-ಸಂಬಂಧಿ ಶಿಕ್ಷೆಗಳನ್ನು ಮತ್ತು ಲೈಂಗಿಕ ಶೋಷಣಾ ವಿಷಯಧಾರಿತ ಕಾನೂನು ವಿಧಿಗಳ ಬಗ್ಗೆ ನಿದರ್ಶನಗಳ ಮೂಲಕ ವಿವರಿಸಿದರು. ಕುಂದಾಪುರ ವಕೀಲರ ಸಂಘದ ಅಧ್ಯಕ್ಷರಾದ ಎಡ್ವೊಕೇಟ್ ನಿರಂಜನ ಹೆಗ್ಡೆಯವರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಶ್ರೀ ರವೀಂದ್ರ ಎಮ್. ಜೋಷಿ, ಗೌರವಾನ್ವಿತ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶರು, ಕುಂದಾಪುರ, ಶ್ರೀಮತಿ ನಾಗರತ್ನಮ್ಮ, ಗೌರವಾನ್ವಿತ ಸಿವಿಲ್ ಮತ್ತು ಜೆ.ಎಮ್. ಎಫ್.ಸಿ ನ್ಯಾಯಾಧೀಶರು, ಕೊತ್ತಾಡಿ ಉದಯ್ ಕುಮಾರ್ ಶೆಟ್ಟಿ, ಅಧ್ಯಕ್ಷರು, ಲಯನ್ಸ್ ಕ್ಲಬ್, ಬನ್ನಾಡಿ-ವಡ್ಡರ್ಸೆ,ಲಯನ್ ಬಿ. ರಾಧಾಕೃಷ್ಣ ನಾಯಕ್, ಅಧ್ಯಕ್ಷರು, ಲಯನ್ಸ್ ಕ್ಲಬ್, ಕುಂದಾಪುರ, ಶ್ರೀ ಪ್ರಮೋದ್ ಹಂದೆ, ಕಾರ್ಯದರ್ಶಿ, ವಕೀಲರ ಸಂಘ, ಕುಂದಾಪುರ ಇವರು ವಿದ್ಯಾರ್ಥಿಗಳಿಗೆ ವಿವಿಧ ಕಾನೂನು ವಿಚಾರಗಳ ಬಗ್ಗೆ ಮಾರ್ಗದರ್ಶನ ನೀಡಿದರು. ಕಾಲೇಜಿನ ಪ್ರಾಂಶುಪಾಲರಾದ ಶ್ರೀ ನವೀನ ಕುಮಾರ ಶೆಟ್ಟಿಯವರು ಅತಿಥಿಗಳನ್ನು ಸ್ವಾಗತಿಸಿದರು. ಲಯನ್ಸ್ ಕ್ಲಬ್ ಬನ್ನಾಡಿ- ವಡ್ಡರ್ಸೆ ಇದರ ಮಾಜಿ ಅಧ್ಯಕ್ಷರೂ, ಪ್ರಸ್ತುತ ವಲಯಾಧ್ಯಕ್ಷರೂ ಆಗಿರುವ ಬನ್ನಾಡಿ ಸೋಮನಾಥ ಹೆಗ್ಡೆಯವರು ಅತಿಥಿಗಳಿಗೆ ಸ್ಮರಣಿಕೆ ನೀಡಿ ಗೌರವಿಸಿದರು. ಕಾಲೇಜಿನ ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಶ್ರೀಮತಿ ಸುಷ್ಮಾ ಶೆಣೈಯವರು ಅತಿಥಿಗಳಿಗೆ ಪುಷ್ಪ ನೀಡಿ ಸ್ವಾಗತಿಸಿದರು. ಕಾಲೇಜಿನ ವಿದ್ಯಾರ್ಥಿನಿಯರು ಪ್ರಾರ್ಥನೆ ಹಾಡಿದರು. ಕನ್ನಡ ವಿಭಾಗದ ಮುಖ್ಯಸ್ಥರಾದ ಶ್ರೀ ಡಿ. ಬಿ. ಕೃಷ್ಣಮೂರ್ತಿಯವರು ವಂದನಾರ್ಪಣೆಗೈದರು. ಕಾಲೇಜಿನ ಹಿಂದಿ ವಿಭಾಗದ ಮುಖ್ಯಸ್ಥರಾದ ಶ್ರೀಮತಿ ಜಯಶೀಲಾ ಪೈಯವರು ಕಾರ್ಯಕ್ರಮ ನಿರೂಪಿಸಿದರು.