ಕುಂದಾಪುರ, ಸೆ.15: ಕುಂದಾಪುರದ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಸಂಗಮ್ ಬಳಿ ಭಾನುವಾರ ಬೆಳಿಗ್ಗೆ ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯ ಅಂಗವಾಗಿ ಹಮ್ಮಿಕೊಳ್ಳಲಾದ ಮಾನವ ಸರಪಳಿ ಕಾರ್ಯಕ್ರಮದ ಉದ್ಘಾಟನಾ ಸಮಾರಂಭ ನೆಡೆಯಿತು. ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ಮಾತನಾಡಿ ‘ಅಂಬೇಡ್ಕರ್ ಅವರು ನಮಗೆ ಸಂವಿಧಾನ ರಚಿಸಿ ನೀಡಿದ್ದಾರೆ, ಅವರ ಆಶಯ ತುಂಬಾ ಇದೆ, ಪರಿಪೂರ್ಣವಾಗಿಲ್ಲ, ಪರಿಪೂರ್ಣ ಮಾಡುವ ಜವಾಬ್ದಾರಿ ನಮಗೆ ನೀಡಿದ್ದಾರೆ’ ಎಂದು ತಿಳಿಸಿದರು.
ಕುಂದಾಪುರದ ಶಾಸಕ ಎ. ಕಿರಣ್ ಕುಮಾರ್ ಕೊಡ್ಗಿ ಮಾತನಾಡಿ, ವಿಶ್ವದಲ್ಲಿಯೇ ಅತಿ ದೊಡ್ಡ ಪ್ರಜಾಪ್ರಭುತ್ವ ದೇಶ ಭಾರತ. ಸರ್ವಧರ್ಮಗಳು ಜಾತಿ ಮತ ಪಂಥಗಳನ್ನು ಸಾಮರಸ್ಯದಿಂದ ಕೊಂಡೊಯ್ಯುತ್ತಿರುವ ಭಾರತ ಪ್ರಜಾತಾಂತ್ರಿಕ ವ್ಯವಸಸ್ಥೆ ಒಂದು ವಿಶೇಷವಾಗಿದೆ, ಇಂತಹ ಪ್ರಜಾಪ್ರಭುತ್ವ ಇನ್ನೂ ಗಟ್ಟಿಯಾಗಬೇಕು ಎಂದರು.
ಕುಂದಾಪುರ ತಹಶೀಲ್ದಾರ್ ಶೋಭಾಲಕ್ಷ್ಮಿ ಸಂವಿಧಾನದ ಪೀಠಿಕೆಯನ್ನು ಬೋಧಿಸಿದರು. ಕಾರ್ಯಕ್ರಮದಲ್ಲಿ ಬಿಸಿಎಂ ಹಾಸ್ಟೆಲಿನ ವಿದ್ಯಾರ್ಥಿನಿಯರು ಸಮೂಹ ನೃತ್ಯ ಪ್ರದರ್ಶಿಸಿದರು. ಸಭಾ ಕಾರ್ಯಕ್ರಮದಲ್ಲಿ ಕುಂದಾಪುರ ಉಪ ವಿಭಾಗಾಧಿಕಾರಿ ಮಹೇಶ್ಚಂದ್ರ, ಪುರಸಭೆ ಮುಖ್ಯ ಅಧಿಕಾರಿ ಆನಂದಪ್ಪ, ಪುರಸಭೆಯ ಅಧ್ಯಕ್ಷ ಮೋಹನ ದಾಸ ಶೆಣೈ, ಉಪಾಧ್ಯಕ್ಷೆ, ಸರಕಾರಿ ಅಧಿಕಾರಿಗಳು ಶಾಲಾ ಮುಖ್ಯಸ್ಥರು, ಶಿಕ್ಷಕರು, ರಾಜಕೀಯ ನೇತಾರರು, ನಾಗರಿಕರು ಭಾಗವಹಿಸಿದ್ದರು.
ಅರಣ್ಯ ಇಲಾಖೆಯ ವತಿಯಿಂದ ಹೆದ್ದಾರಿ ಬದಿಯಲ್ಲಿ ಗಿಡಗಳನ್ನು ನೆಡಲಾಯಿತು.ಪುರಸಭೆಯ ವತಿಯಿಂದ ಪುಷ್ಪ ಗೀಡಗಳನ್ನು ನೆಡಲಾಯಿತು. ಬಳಿಕ ವಿವಿಧ ಶಾಲಾ ಮಕ್ಕಳಿಂದ ಮತ್ತು ಸಾರ್ವಜನಿಕರಿಂದ ಹೆದ್ದಾರಿಯ ಪಕ್ಕದಲ್ಲಿ ಉದ್ದಕ್ಕೂ ಮಾನವ ಸರಪಳಿಯನ್ನು ನಿರ್ಮಿಸಿ ಪ್ರಜಾಪ್ರಭುತ್ವ ವ್ಯವಸ್ಥೆಗೆ ಗೌರವ ಸೂಚಿಸಲಾಯಿತು. ಪುರಸಭೆ ವತಿಯಿಂದ ಸಿಹಿ ತಿಂಡಿ ಹಂಚಲಾಯಿತು.