

ಕುಂದಾಪುರ, ಡಿ.೨೧:: ಕುಂದಾಪುರ ಸಮೀಪ ಕೋಟೇಶ್ವರದ ರಾಷ್ಟ್ರೀಯ ಹೆದ್ದಾರಿಯಲ್ಲಿ ತಡರಾತ್ರಿ ಟ್ರಕಿಗೆ ಫಿಗೋ ಹಾಗೂ ಕಾರು ನಡುವೆ ನಡೆದ ಭೀಕರ ಅಪಘಾತದಲ್ಲಿ ಉದ್ಯಾವರ ಐಸಿವೈಎಂ ಅಧ್ಯಕ್ಷ ಸ್ಥಳದಲ್ಲೇ ಸಾವನ್ನಪ್ಪಿದ ದುರ್ಘಟನೆ ಸಂಭವಿಸಿದೆ.
ಮೃತಪಟ್ಟ ತರುಣ ಉದ್ಯಾವರದ ಸಂಪಿಗೆನಗರ ನಿವಾಸಿ ರೊಬರ್ಟ್ ಕ್ಯಾಸ್ಟಲಿನೋ ಅವರ ಪುತ್ರ ಜೋಯಿಸ್ಟನ್ ಕ್ಯಾಸ್ಟಲಿನೋ ಎಂದು ತಿಳಿದು ಬಂದಿದೆ. ಇವರು ಕುಂದಾಪುರದಿಂದ ಕಾರ್ಯಕ್ರಮ ಮುಗಿಸಿಕೊಂಡು ಉಡುಪಿ ಕಡೆಗೆ ಬರುತ್ತಿರುವಾಗ ಕೆಟ್ಟು ನಿಂತಿದ್ದ ಟ್ರಕಿಗೆ ಢಿಕ್ಕಿ ಹೊಡೆದಿದ್ದಾರೆ ಎಂದು ತಿಳಿಯಲಾಗಿದೆ. ಅದರ ಪರಿಣಾಮ ಜೋಯಿಸ್ಟನ್ ಮೃತಪಟ್ಟಿದ್ದು, ಕಾರಿನಲ್ಲಿದ್ದ ಲಿಸ್ಟನ್ ಪಿಂಟೋ, ಜಸ್ಟಿನ್ ಕಾರ್ಡೋಜಾ, ವಿಲ್ಸನ್ ಮಾರ್ಟಿಸ್, ಗ್ಲಾಡ್ಸನ್ ಡಿಸಿಲ್ವ ಗಾಯಗೊಂಡಿದ್ದಾರೆ ಎನ್ನಲಾಗಿದೆ.
ಘಟನೆ ಸ್ಥಳಕ್ಕೆ ಕುಂದಾಪುರ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ, ಅಪಘಾತ ಪ್ರಕರಣ ದಾಖಲಿಸಿಕೊಂಡಿದ್ದಾರೆ.