

ಕುಂದಾಪುರ; ಪಂಚಗಂಗಾವಳಿ ಇತಿಹಾಸ ಕಾಪಾಡಲು ಹಲವು ಆಕರಗಳಿವೆ. ಡಾ.ವಸಂತಮಾಧವ, ಇತಿಹಾಸ ತಜ್ಞರ ಅಭಿಪ್ರಾಯದಂತೆ ದಿ.ಗುರುರಾಜ ಭಟ್ಟರು, ದಿ.ಡಾ.ವಸಂತ ಶೆಟ್ಟಿ, ಡಾ.ಪಿ.ಎಸ್.ಶಾಸ್ತ್ರಿ ಮುಂತಾದ ರಾಜ್ಯದ ಇತಿಹಾಸ ಸಂಶೋಧಕರು ಈ ಬಗ್ಗೆ ಕುಂದಾಪುರದ ಹಲವು ಗ್ರಾಮಗಳಲ್ಲಿ ಶಾಸನದ ಅಧ್ಯಯನ ಮಾಡಿದ್ದಾರೆ. 1800 ರಲ್ಲಿ ಮೆಕೆಂಜಿ, ಪಂಚಗಂಗಾವಳಿಯ ಸಾಂಸ್ಕøತಿಕ ಇತಿಹಾಸಕ್ಕೆ ಬೇಕಾದ ಮಾಹಿತಿ ಸಂಗ್ರಹಿಸಿದ್ದಾರೆ. ಹೆಮಿಲ್ಟನ್ ಅಲೆಕ್ಸಾಂಡ್, ಎಡನ್ ಮಸ್ಕತ್, ಕೂಟೊ ಮುಂತಾದ ವಿದೇಶಿಗರೂ ಪಂಚಗಂಗಾವಳಿ ಮಹತ್ವವನ್ನು ತಮ್ಮ ಅಧ್ಯಯನದಲ್ಲಿ ತಿಳಿಸಿದ್ದಾರೆ. ಕುಂದಾಪುರ ತಾಲ್ಲೂಕಿನ ಹಲವು ಹಿರಿಯರು ಬೇಕಾದ ಆಕರಗಳನ್ನು ಸಂಗ್ರಹಿಸಿಟ್ಟು, ಅಧ್ಯಯನ ಮಾಡುವ ಆಸಕ್ತರಿಗೆ ನೀಡಿದ್ದಾರೆ.
ಆದರೆ ನಮ್ಮ ಕರ್ನಾಟಕ ಸರಕಾರ, ದ.ಕ., ಉಡುಪಿ ಜಿಲ್ಲೆ ಜಿಲ್ಲಾಧಿಕಾರಿಗಳು, ಮಂಗಳೂರು ವಿಶ್ವವಿದ್ಯಾಲಯ, ಶಾಸಕರು, ಸಂಸದರು, ಸ್ಥಳೀಯ ಸಂಸ್ಥೆಗಳೂ ಯಾರೂ ನಮ್ಮ ಈ ಪಂಚಗಂಗಾವಳಿ ನದಿ ಪಾತ್ರಗಳ ಬಗ್ಗೆ ತಿಳಿದುಕೊಳ್ಳಲು ಪ್ರಯತ್ನಿಸಲಿಲ್ಲ. ಶಾಸನಗಳನ್ನು ಉಳಿಸುವ ಬಗ್ಗೆಯೂ ಪ್ರಯತ್ನಿಸಲಿಲ್ಲ. ಅದಕ್ಕೂ ಮುಖ್ಯವಾಗಿ ಕುಂದಾಪುರದ ಬಳಿ ಪಂಚಗಂಗಾವಳಿ ನದಿ ಬತ್ತಿ ಹೋಗುತ್ತಿರುವಾಗ ಅದು ಜನಜೀವನದ ಮೇಲೆ ಗಂಭೀರ ಪರಿಣಾಮ ಬೀರುತ್ತಿರುವಾಗ ಈ ಸಮಸ್ಯೆ ಪರಿಹರಿಸಲು ಯಾವುದೇ ಗಂಭೀರ ಪ್ರಯತ್ನ ಮಾಡದಿರುವುದು ಶೋಚನೀಯ ವಿಚಾರವಾಗಿದೆ. ಪಂಚಗಂಗಾವಳಿ, ಗಂಗೊಳ್ಳಿ ಕುಂದಾಪುರದ ನಡುವೆ 1 ಕಿ.ಮಿ.ನಷ್ಟು ಅಗಲವಾಗಿದೆ. ಬಬ್ಬುಕುದ್ರು ಈ ನಡುವೆ ಇರುವ 24 ಎಕರೆ ಜನವಸತಿ ಇಲ್ಲದ ಪ್ರದೇಶ. ಈ ಕುದ್ರುವಿನಿಂದ ಕುಂದಾಪುರದ ಕಡೆ ಇರುವ ಸುಮಾರು 500 ಮೀಟರ್ ಅಗಲದ ನದಿ ಸುಮಾರು 1500 ಮೀ. ವಿಸ್ತಾರದ ಪ್ರದೇಶ ಸಂಪೂರ್ಣ ಹೂಳು ತುಂಬಿ ಹೋಗಿದೆ. ಭರತದ ಸಂದರ್ಭದಲ್ಲಿ ನದಿಯಲ್ಲಿ ಒಂದಡಿಯಷ್ಟು ನೀರು ಕಂಡರೂ ಇಳಿತದ ಸಮಯದಲ್ಲಿ ಮರುಭೂಮಿಯಲ್ಲಿ ಒಯಸಿಸ್ ಕಂಡಂತೆ ಇರುತ್ತದೆ. ಒಂದು ಲಕ್ಷ ಲೋಡ್ ಮರಳು ತೆಗೆದರೂ ಇನ್ನಷ್ಟು ಇದೆ ಎಂಬಷ್ಟು ಮರಳು ದಿಬ್ಬಗಳೆದ್ದು, ಅದರ ಮೇಲೆ ಗಿಡಗಳು ಬೆಳೆದು ಕಾಡುಗಳಾಗಿವೆ. ಹೊಸ ಕುದುರುಗಳಾಗಿವೆ.
ಬಬ್ಬುಕುದ್ರು ಪ್ರವಾಸೋಧ್ಯಮಕ್ಕಾಗಿ ಬಳಸುವ ಪ್ರಸ್ತಾಪ, ದಶಕಗಳಿಂದಲೂ ಸರಕಾರದ ಫೈಲುಗಳಲ್ಲೇ ಗೆದ್ದಲು ತಿನ್ನುತ್ತಿದೆ. ಇಂತಹ ಅದ್ಭುತ ಪರಿಸರ ಪ್ರವಾಸೋಧ್ಯಮಕ್ಕೂ ಬಳಸದಿರುವ ಪ್ರವಾಸೋಧ್ಯಮ ಇಲಾಖೆಯ ಅಸಡ್ಡೆ ಎದ್ದು ಕಾಣುತ್ತದೆ. ಸ್ಥಳೀಯ ಒತ್ತಡ ಇಲ್ಲದಿರುವುದರಿಂದ ಒಂದು ದಶಕದ ಹಿಂದೆ ಈ ಬಗ್ಗೆ ಸಮೀಕ್ಷೆ ನಡೆಸಿದ ಲೋಕೋಪಯೋಗಿ ಹಾಗೂ ಪ್ರವಾಸೋಧ್ಯಮ ಇಲಾಖೆ ಆನಂತರ ಸುಮ್ಮನಾದವು. ಅರಣ್ಯ ಇಲಾಖೆ ಒಂದೆರಡು ದಶಕ ಈ ಪರಿಸರ ಅಭಿವೃದ್ಧಿಗೆ ಶ್ರಮಿಸಿತಾದರೂ ಆಸಕ್ತ ಅಧಿಕಾರಿಗಳಿಗೆ ಸರಕಾರದ ಬೆಂಬಲ ಸಿಗಲಿಲ್ಲ. ಯಾರಾದರೂ ಎಚ್ಚೆತ್ತು ಈ ವಿಚಾರದಲ್ಲಿ ಚಿಂತನೆ ಮಾಡಬಹುದು ಎಂಬ ನಿರೀಕ್ಷೆ ಜನರದ್ದಾಗಿದೆ.
