

ಕುಂದಾಪುರ: ಇಲ್ಲಿನ ಭಂಡಾರ್ಕಾರ್ಸ್ ಕಲಾ ಮತ್ತು ವಿಜ್ಞಾನ ಕಾಲೇಜಿನ ವತಿಯಿಂದ ಪ್ರಾರಂಭಗೊಂಡ ಸಮುದಾಯ ಬಾನುಲಿ ರೇಡಿಯೋ ಕುಂದಾಪ್ರ 89.6 ಎಫ್.ಎಮ್. ನಿರಂತರ ಪ್ರಸಾರ ಮಾರ್ಚ್ 13ರಿಂದ ಆರಂಭಗೊಳ್ಳಲಿದೆ ಎಂದು ಭಂಡಾರ್ಕಾರ್ಸ್ ಕಾಲೇಜಿನ ಹಿರಿಯ ವಿಶ್ವಸ್ಥರಾದ ಕೆ. ಶಾಂತಾರಾಮ ಪ್ರಭು ಅವರು ಗುರುವಾರ ಕಾಲೇಜಿನಲ್ಲಿ ನಡೆಸಿದ ಸುದ್ದಿಗೋಷ್ಟಿಯಲ್ಲಿ ತಿಳಿಸಿದ್ದಾರೆ.
ರೇಡಿಯೋ ಕುಂದಾಪುರ ಇದು ಲಾಭರಹಿತ ಸಮುದಾಯ ಬಾನುಲಿ ಕೇಂದ್ರವಾಗಿದ್ದು ಸ್ಥಳೀಯ ಜನರ ಜೀವನದ ಪ್ರಗತಿ ಸುಧಾರಿಸುವ ಗುರಿಯನ್ನು ಹೊಂದಿದೆ. ಕೃಷಿ, ಮೀನುಗಾರಿಕೆ, ಗೃಹಿಣಿಯರು ಮತ್ತು ವಿದ್ಯಾರ್ಥಿಗಳಿಗೆ ಅನುಕೂಲವಾಗುವ ವಿಶೇಷ ಕಾರ್ಯಕ್ರಮಗಳ ಪ್ರಸಾರ ಇದರ ಧ್ಯೇಯೋದ್ದೇಶವಾಗಿದೆ. ಆರೋಗ್ಯ, ಪೋಷಣೆ, ಶಿಕ್ಷಣ, ಕೃಷಿ ವಿಷಯಗಳ ಕುರಿತು ಸ್ಥಳೀಯರ ಅನುಭವಗಳನ್ನು ಮತ್ತು ಅವರ ವಿಚಾರಗಳನ್ನು ಹಂಚಿಕೊಳ್ಳಲು ಚರ್ಚಿಸಲು ಸಮುದಾಯದ ಸದಸ್ಯರಿಗೆ ಇದೊಂದು ವೇದಿಕೆಯಾಗಿದೆ ಎಂದು ಹೇಳಿದರು.
ಕಾಲೇಜಿನ ವಿಶ್ವಸ್ಥ ಮಂಡಳಿಯ ಸದಸ್ಯರಾದ ಯು.ಎಸ್ ಶೆಣೈ ಮಾತನಾಡಿ, ರೇಡಿಯೋ ಕುಂದಾಪುರ 89.6 ಎಫ್.ಎಮ್ ಸಮುದಾಯ ಬಾನುಲಿ ಕೇಂದ್ರ ಸ್ಥಳೀಯ ಕನ್ನಡ ಭಾಷೆಯಲ್ಲಿಯೇ ಹೆಚ್ಚು ಪ್ರಸಾರವಾಗುವುದರಿಂದ ಜನರನ್ನು ಅದು ಸುಲಭವಾಗಿ ತಲುಪುತ್ತದೆ ಮತ್ತು ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಉತ್ತಮ ಸಂವಹನ ಮಾಧ್ಯಮವಾಗಿದೆ. ಗ್ರಾಮೀಣ ಭಾಗದ ಜನರ ಸಮಸ್ಯೆ, ಸವಾಲುಗಳು ಮತ್ತು ಅಗತ್ಯತೆಗಳನ್ನು ರೇಡಿಯೋ ಕುಂದಾಪುರದ ಮೂಲಕ ಸುಲಭವಾಗಿ ಹಂಚಿಕೊಳ್ಳಬಹುದಾಗಿದೆ. ಇದು ಸಮುದಾಯದವರೇ ನಿರ್ವಹಿಸುವ ಸಮುದಾಯ ಬಾನುಲಿ. ಜನಸಾಮಾನ್ಯರ ಹವ್ಯಾಸ, ಆಸಕ್ತಿಯ ವಿಷಯಗಳ ಕುರಿತಂತೆ ಮೌಲಿಕ ಕಾರ್ಯಕ್ರಮಗಳನ್ನು ಪ್ರಸಾರ ಮಾಡಲಾಗುತ್ತದೆ. ಸಮುದಾಯದ ವಿವಿಧ ಜನ ಜೀವನದ ಆಚರಣೆಗಳ, ವೈಯಕ್ತಿಕ ವೃತ್ತಿಗಳ ಸೃಜನಶೀಲತೆ ಮತ್ತು ಸ್ವಯಂ ಸಬಲೀಕರಣಕ್ಕೆ ಪೂರಕವಾದ ಮನರಂಜನಾ ವಿಷಯಗಳ ಕುರಿತಂತೆ ಕಾರ್ಯಕ್ರಮಗಳನ್ನು ರೇಡಿಯೋ ಕುಂದಾಪುರ 89.6 ಎಫ್. ಎಮ್. ಸಮುದಾಯ ಬಾನುಲಿ ಕೇಂದ್ರವು ಪ್ರಸಾರ ಮಾಡುತ್ತದೆ.
ರೇಡಿಯೋ ಕುಂದಾಪ್ರ ಕಾರ್ಯಕ್ರಮಗಳಲ್ಲಿ ಕೃಷಿ ಸಮಾಚಾರ, ಕಡಲ ಒಡಲು, ಯುವ ಸ್ಪಂದನ, ಕೇಳೇ ಸಖಿ, ಮುಂತಾದ ವಿಭಾಗಗಳು ಇರುತ್ತದೆ ಎಂದರು.
ಇದರಲ್ಲಿ ಭಂಡಾರ್ಕಾರ್ಸ್ ಕಾಲೇಜಿನ ಪ್ರತಿಭಾವಂತ ವಿದ್ಯಾರ್ಥಿಗಳ ಭಾಗವಹಿಸುವಿಕೆ ವಿಶೇಷವಾಗಿದೆ. ಉತ್ಸಾಹಿ ವಿದ್ಯಾರ್ಥಿಗಳು ಬಹಳಷ್ಟು ರೇಡಿಯೋ ಕಾರ್ಯಕ್ರಮಗಳ ಜೊತೆಗೆ ಸುಂದರ ಶೀರ್ಷಿಕೆ ಗೀತೆ ಒದಗಿಸಿದ್ದಾರೆ. ವಾರಕ್ಕೊಮ್ಮೆ ಪ್ರಸಾರಗೊಳ್ಳುವ ರೇಡಿಯೋ ನಾಟಕಕ್ಕೆ ಮುನ್ನುಡಿ ಬರೆದಿದ್ದಾರೆ ಎಂದರು.
ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದ ಕಾಲೇಜಿನ ಪ್ರಾಂಶುಪಾಲ ಶುಭಕರಾಚಾರಿ, ಮಾ.13 ಬೆಳಿಗ್ಗೆ ಅಕಾಡೆಮಿ ಆಫ್ ಜನರಲ್ ಎಜ್ಯುಕೇಶನ್ ಮಣಿಪಾಲದ ಅಧ್ಯಕ್ಷ ಡಾ. ಎಚ್.ಎಸ್.ಬಲ್ಲಾಳ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಸಂಸ್ಥೆಯ ಕಾರ್ಯದರ್ಶಿ ವರದರಾಯ ಪೈ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ಭಂಡಾರ್ಕರ್ಸ್ ಕಾಲೇಜಿನ ಹಿರಿಯ ವಿಶ್ವಸ್ಥರಾದ ಕೆ. ಶಾಂತಾರಾಮ ಪ್ರಭು ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಡಾ.ಜಿ.ಎಂ.ಗೊಂಡ 89.6 ಎಫ್.ಎಮ್ ಕಾರ್ಯಕ್ರಮ ನಿರ್ವಾಹಕಿ ಜ್ಯೋತಿ ಸಾಲಿಗ್ರಾಮ, ಕಾಲೇಜಿನ ಪತ್ರಿಕೋದ್ಯಮ ಮುಖ್ಯಸ್ಥೆ ಸುಮಲತಾ ಉಪಸ್ಥಿತರಿದ್ದರು.





