

ಕುಂದಾಪುರ, ನ.6: ಕುಂದಾಪುರ ರೋಸರಿ ಚರ್ಚಿನಲ್ಲಿ ಕ್ರೈಸ್ತ ಶಿಕ್ಷಣದ ಶಿಕ್ಷಕರ ಪಾಲಕ, ಕ್ರೈಸ್ತ ಶಿಕ್ಷಣದ ಸುಧಾರಣೆಯ ರೂವಾರಿ ಸಂತ ಚಾರ್ಲ್ಸ್ ಬೊರೊಮಿಯೊವರ ದಿನಾಚರಣೆಯನ್ನು ನ.6 ರಂದು ರೋಸರಿ ಚರ್ಚಿನ ಕ್ರೈಸ್ತ ನೀತಿ ಶಿಕ್ಷಣ ಭೋದನೆ ಮಾಡುವ ಶಿಕ್ಷಕರು ಪವಿತ್ರ ಬಲಿದಾನ ಅರ್ಪಿಸುವ ಮೂಲಕ ಆಚರಿಸಿದರು. ಅತಿಥಿ ಧರ್ಮಗುರು ಮಂಗಳೂರು ಧರ್ಮಪ್ರಾಂತ್ಯದ ಕ್ರೈಸ್ತ ಕಿರು ಸಮೂದಾಯದ ನಿರ್ದೇಶಕರಾದ ವಂ| ಜೊಕೀಮ್ ಫೆರ್ನಾಂಡಿಸ್ ಇವರ ಪ್ರಧಾನ ಯಾಜಕತ್ವದಲ್ಲಿ ಪವಿತ್ರ ಬಲಿದಾನವನ್ನು ಅರ್ಪಿಸಲಾಯಿತು. ವಿಶ್ವದಲ್ಲಿ ಸಂತ ಚಾರ್ಲ್ಸ್ ಬೊರೊಮಿಯೊ ದಿನಾಚರಣೆಯನ್ನು ನವೆಂಬರ್ 4 ರಂದು ಆಚರಿಸಲಾಗುತ್ತದೆ, ಈ ಹಬ್ಬದ ಬಲಿದಾನದಲ್ಲಿ ಚರ್ಚಿನ ಪ್ರಧಾನ ಧರ್ಮಗುರು ಅ|ವಂ|ಸ್ಟ್ಯಾನಿ ತಾವ್ರೊ ಸಹ ಬಲಿದಾನವನ್ನು ಅರ್ಪಿಸಿ ಕ್ರೈಸ್ತ ಶಿಕ್ಷಣ ಭೋದಿಸುತ್ತಿರುವ ಶಿಕ್ಷಕರಿಗೆ ಶುಭ ಕೋರಿದರು.
ನಂತರ ನಡೆದ ಸಭಾಕಾರ್ಯಕ್ರಮದಲ್ಲಿ “ಸಂತ ಚಾರ್ಲ್ಸ್ ಬೊರೊಮಿಯೊ ಅವರು 1564 ರಿಂದ 1584 ರವರೆಗೆ ಮಿಲನ್ನ ಕಾರ್ಡಿನಲ್ ಮತ್ತು ಆರ್ಚ್ಬಿಷಪ್ ಆಗಿದ್ದರು. ಆವಾಗ ಪ್ರೊಟೆಸ್ಟಂಟ್ ಪಂಗಡಕ್ಕೆ ಉತ್ತರವಾಗಿ, ಕ್ರೈಸ್ತ ಶಿಕ್ಷಣ ಕ್ಷೇತ್ರದಲ್ಲಿ ಮಹತ್ತರ ಸುಧಾರಣೆಯನ್ನು ತಂದಿದ್ದರು, ಅದಕ್ಕಾಗಿ ಪವಿತ್ರ ಸಭೆ ಅವರನ್ನು ಕ್ರೈಸ್ತ ನೀತಿ ಶಿಕ್ಷಣದ ಶಿಕ್ಷಕರ ಪಾಲಕ ಎಂದು ಅವರ ಹಬ್ಬವನ್ನು ಆಚರಿಸುತ್ತದೆ” ಎಂದು ಅವರು ತಿಳಿಸಿ “ಕ್ರೈಸ್ತ ಶಿಕ್ಷಕರ ಸೇವೆ ಅಮೂಲ್ಯವಾದುದು, ನೀವು ಎನನ್ನೂ ಪ್ರತಿಫಲ ಅಪೇಕ್ಷಿಸದೆ ನೀವು ಮಕ್ಕಳಿಗೆ ನೀತಿ ಶಿಕ್ಷಣ ಭೋದಿಸಿ ಉತ್ತಮ ಸಮಾಜ ನಿರ್ಮಾಣಗೊಳ್ಳಲು ಸಕರಿಸುವುದು ಶ್ಲಾಘನೀಯ ಸೇವೆಯಾಗಿದೆ” ಎಂದು ತಿಳಿಸಿದರು.
ನೀತಿ ಶಿಕ್ಷಣದ ಶಿಕ್ಷಕಿ ಪ್ರೀತಿ ಕ್ರಾಸ್ತಾ, “ಸಾಮನ್ಯರಾದ ನಮಗೆ ಮಕ್ಕಳಿಗೆ ನೀತಿ ಶಿಕ್ಷಣ ನೀಡುವುದಕ್ಕೆ ದೇವರು ನಮಗೆ ಈ ಅವಕಾಶ ಕಲ್ಪಿಸಿಕೊಟ್ಟಿದ್ದು ದೇವರ ದೊಡ್ಡ ಅನುಗ್ರಹ ಎಂದು ಭಾವಿಸುತ್ತೇನೆ, ಈ ಸೇವೆ ನನಗೆ ಸಂತ್ರಪ್ತಿಯನ್ನು ತಂದಿದೆ’ ಎಂದು ತಮ್ಮ ಅನ್ನಿಸಿಕೆಯನ್ನು ಹಂಚಿಕೊಂಡರು. ಸಹಾಯಕ ಧರ್ಮಗುರು ವಂ|ಅಶ್ವಿನ್ ಆರಾನ್ಹಾ, ಪಾಲನ ಮಂಡಳಿ ಉಪಾಧ್ಯಕ್ಷ ಲುವಿಸ್ ಜೆ. ಫೆರ್ನಾಂಡಿಸ್, ಕಾರ್ಯದರ್ಶಿ ಆಶಾ ಕರ್ವಾಲ್ಲೊ, ಆಯೋಗಗಳ ಸಂಚಾಲಕಿ ಪ್ರೇಮಾ ಡಿಕುನ್ಹಾ ಉಪಸ್ಥಿತರಿದ್ದರು. ಕ್ರೈಸ್ತ ನೀತಿ ಶಿಕ್ಷಣದ ಸಂಯೋಜಕಿ ವೀಣಾ ಡಿಸೋಜಾ ಸ್ವಾಗತಿಸಿದರು. ಸಿಸ್ಟರ್ ತೆರೆಜ್ ಶಾಂತಿ ಪ್ರಸ್ತಾಪನೆ ಗೈದರು. ರೇಶ್ಮಾ ಫೆರ್ನಾಂಡಿಸ್ ನಿರೂಪಿಸಿದರು. ವನಿತಾ ಬರೆಟ್ಟೊ ವಂದಿಸಿದರು.
















