

ಕುಂದಾಪುರ ; ಕುಂದಾಪುರ ರಕ್ತ ನಿಧಿ ಕೇಂದ್ರದ ದಶಮಾನೋತ್ಸವದ ಸಂಭ್ರಮ* ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ಕುಂದಾಪುರ ನಡೆಸುತ್ತಿರುವ ರಕ್ತ ನಿಧಿ ಕೇಂದ್ರ ಪ್ರಾರಂಭವಾಗಿ ಹತ್ತು ವರ್ಷ ಪೂರೈಸಿದ ಸಂದರ್ಭದಲ್ಲಿ ಜ್ಯೋತಿ ಬೆಳಗಿಸಿ ಸಂಭ್ರಮಿಸಲಾಯಿತು. ರೆಡ್ ಕ್ರಾಸನ ಸಭಾಪತಿ ಎಸ್ ಜಯಕರ ಶೆಟ್ಟಿಯವರು ರಕ್ತ ನಿಧಿ ಕೇಂದ್ರದ ಸ್ಥಾಪನೆಯ ಘಟನಾವಳಿಗಳನ್ನು ನೆನಪಿಸಿಕೊಂಡರು. ಈ ಮಹತ್ಕಾರ್ಯಕ್ಕೆ ಸಹಕರಿಸಿದ, ಪ್ರೋತ್ಸಹಿಸಿದ ವ್ಯಕ್ತಿಗಳನ್ನು , ದಾನಿಗಳನ್ನು ಸ್ಮರಿಸಿಕೊಂಡರು. ಉಡುಪಿ ಜಿಲ್ಲೆಯ ಮೂರನೆ ರಕ್ತ ನಿಧಿ ಕೇಂದ್ರವಾದ ಇದು ಕುಂದಾಪುರ ತಾಲೂಕು ಮಾತ್ರವಲ್ಲದೇ ಭಟ್ಕಳ,ಮುರ್ಡೇಶ್ವರದಿಂದ ಶಿರ್ವ,ಕಾರ್ಕಳದ ತನಕದ ಜನರು ಇದರ ಸದುಪಯೋಗ ಪಡೆದುಕೊಳ್ಳುತ್ತಿದ್ದಾರೆ. ಇಲ್ಲಿಯ ತನಕ 500 ಸ್ವಯಂಪ್ರೇರಿತ ರಕ್ತ ದಾನ ಶಿಬಿರ ಏರ್ಪಡಿಸಿ 50000 ಯುನಿಟ್ ರಕ್ತವನ್ನು ಅವಶ್ಯಕತೆ ಇರುವ ರೋಗಿಗಳಿಗೆ ನೀಡಿ ಹಲವು ಜೀವವನ್ನು ಉಳಿಸಿದ ಕಾರ್ಯ ಸಂತೃಪ್ತಿ ತಂದಿದೆ ಎಂದು ಅಭಿಪ್ರಾಯ ಪಟ್ಟರು. ಈ ಹತ್ತು ವರ್ಷದ ಪಯಣದಲ್ಲಿ ಕೈ ಜೋಡಿಸಿದ ರಕ್ತದಾನಿಗಳಿಗೆ, ಸಂಘ ಸಂಸ್ಥೆಗಳಿಗೆ, ವೈದ್ಯರಿಗೆ ಹಾಗೂ ರಕ್ತ ನಿಧಿ ಕೇಂದ್ರದ ಸಿಬ್ಬಂದಿಯವರಿಗೆ ಕೃತಜ್ಞತೆ ತಿಳಿಸಿದರು. ಉಪ ಸಭಾಪತಿ ಡಾಕ್ಟರ್ ಉಮೇಶ್ ಪುತ್ರನ್ ಈ ಯಶಸ್ವಿ ಹತ್ತು ವರ್ಷ ಪೂರೈಸಲು ಸಂಸ್ಥೆಯ ಸಭಾಪತಿ ಎಸ್ ಜಯಕರ್ ಶೆಟ್ಟಿ ಹಾಗೂ ಇತರ ಸದಸ್ಯರ ಸಮರ್ಪಣಾ ಭಾವದ ಕಾರ್ಯ ವೈಖರಿ ಮತ್ತು ರಕ್ತ ನಿಧಿ ಕೇಂದ್ರದ ಸಿಬ್ಬಂದಿಗಳ ಕಾರ್ಯತತ್ಪರತೆ ಕಾರಣ ಎಂದು ವಿಶ್ಲೇಷಿಸಿದರು. ರೆಡ್ ಕ್ರಾಸನ ಆಡಳಿತ ಮಂಡಳಿಯ ಸದಸ್ಯರು ರಕ್ತನಿಧಿ ಕೇಂದ್ರದ ಸಿಬ್ಬಂದಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.