JANANUDI.COM NET WORK
ಕುಂದಾಪುರ,ಅ.7: ಕರ್ನಾಟಕದಲ್ಲಿ ನೂತನವಾಗಿ ರಚಿಸಲ್ಪಟ್ಟ ಬಸವರಾಜ ಬೊಮ್ಮಾಯಿಯವರ ಸಂಪುಟದಲ್ಲಿ ಸಚಿವರಾಗಿ ಪುನರಾಯ್ಕೆಗೊಂಡಿರುವ ಕೋಟ ಶ್ರೀನಿವಾಸ ಪೂಜಾರಿಯವರಿಗೆ ಅಭಿನಂದನೆ ಸಲ್ಲಿಸುವ ಬ್ಯಾನರ್ ಒಂದನ್ನು ಕುಂದಾಪುರ ತಾಲೂಕು ಮಡಾಮಕ್ಕಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಶೇಡಿಮನೆಯ ಪೇಟೆಯಲ್ಲಿ ಅಳವಡಿಸಲಾಗಿತ್ತು.
ಅಷ್ಟೇ ಆಗಿದ್ದರೆ ಅದು ಸುದ್ದಿಯಾಗುತ್ತಿರಲಿಲ್ಲ. ಅದರಲ್ಲಿ ಮೇಲ್ಗಡೆ ಕರ್ನಾಟಕ ಸರ್ಕಾರದ ಲಾಂಛನವನ್ನು ಬಳಸಲಾಗಿದ್ದರೆ ಕೆಳಗಡೆ ಶುಭ ಕೋರುವವರು, ಕಾಂಗ್ರೆಸ್ ಕಾರ್ಯಕರ್ತರು, ಶೇಡಿಮನೆ ವಾರ್ಡ್ ಎಂದು ನಮೂದಿಸಲಾಗಿತ್ತು. ಇದರಿಂದಾಗಿ ಆ ಪೋಟೋ ಸಾಮಾಜಿಕ ಜಾಲತಾಣದಲ್ಲಿ ಮತ್ತು ರಾಜ್ಯದ ಹಾಗೂ ದೇಶದ ವಿವಿಧ ದಿನಪತ್ರಿಕೆಗಳಲ್ಲಿ ಹಾಗೂ ಟಿವಿ ಮಾಧ್ಯಮಗಳಲ್ಲಿ ಸುದ್ದಿ ಆಗಿತ್ತು. ಅದಕ್ಕೆ ಕಾರಣ ಬಿಜೆಪಿ ಸಚಿವರನ್ನು ಅಭಿನಂದಿಸುವ ಬ್ಯಾನರ್ನಲ್ಲಿ ಕಾಂಗ್ರೆಸ್ ಪಕ್ಷದ ಹೆಸರು ಉಲ್ಲೇಖಿಸಲ್ಪಟ್ಟಿರುವುದೇ ಆಗಿತ್ತು.
ಈ ಕುರಿತು ಇಂದು ಇಂದು ಕುಂದಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಾನ್ಮಕ್ಕಿ ಹರಿಪ್ರಸಾದ್ ಶೆಟ್ಟಿಯವರು ಅಮಾಸೆಬೈಲು ಪೋಲಿಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು ಆ ದೂರಿನಲ್ಲಿ ಕರ್ನಾಟಕ ಸರ್ಕಾರದ ಲಾಂಛನ ಬಳಸಿ, ಕಾಂಗ್ರೆಸ್ ಪಕ್ಷದ ಹೆಸರನ್ನು ಅನಧಿಕೃತವಾಗಿ ಮುದ್ರಿಸಿರುವ ಕಿಡಿಗೇಡಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳವಂತೆ ವಿನಂತಿಸಿದ್ದಾರೆ.
ದೂರಿನ ಪೂರ್ಣ ವಿವರಗಳು ಇಂತಿವೆ: ಶೇಡಿಮನೆ ಪೇಟೆಯಲ್ಲಿ ಕರ್ನಾಟಕ ಸರ್ಕಾರದ ನೂತನ ಮಂತ್ರಿಗಳಿಗೆ ಶುಭವನ್ನು ಕೋರುವ ಬ್ಯಾನರನ್ನು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಹೆಸರಿನಲ್ಲಿ ಅನಧಿಕೃತವಾಗಿ ಅಳವಡಿಸಲಾಗಿದೆ. ಅಲ್ಲದೇ ಆ ಬ್ಯಾನರ್ ನಲ್ಲಿ ಕರ್ನಾಟಕ ಸರ್ಕಾರದ ಲಾಂಛನವನ್ನು ಕೂಡ ಮುದ್ರಿಸಲಾಗಿದೆ. ಹಾಗೆಯೇ ಅದರಲ್ಲಿ ಬ್ಯಾನರ್ ಮುದ್ರಿಸಿದವರ, ಪ್ರಕಟಿಸಿದವರ ಹೆಸರನ್ನು ಮುದ್ರಿಸದಿರುವುದು ಮತ್ತು ಬ್ಯಾನರ್ ಅಳವಡಿಕೆಗೆ ಸ್ಥಳೀಯ ಗ್ರಾಮ ಪಂಚಾಯತ್ ನ ಅನುಮತಿ ಪಡೆದಿರುವುದು ಕಾನೂನು ಬಾಹಿರವಾಗಿರುತ್ತದೆ.
ಹಾಗೆಯೇ ಈ ಬ್ಯಾನರ್ ಕುರಿತು ವಿವಿಧ ಪತ್ರಿಕೆಗಳಲ್ಲಿ ಮತ್ತು ಟಿವಿ ಮಾಧ್ಯಮಗಳಲ್ಲಿ ಸುದ್ದಿ ಪ್ರಕಟಗೊಂಡಿರುತ್ತದೆ. ಕಿಡಿಗೇಡಿಗಳ ಈ ಕೃತ್ಯದಿಂದಾಗಿ ರಾಜಕೀಯ ಗೊಂದಲ ಮತ್ತು ಸಂಘರ್ಷ ಏರ್ಪಡುವ ಸಾಧ್ಯತೆ ಇದ್ದು, ಇಂತಹ ಉದ್ದೇಶಕ್ಕಾಗಿಯೇ ಬ್ಯಾನರ್ ಅಳವಡಿಸಿರುವ ಸಾಧ್ಯತೆ ಕಂಡು ಬರುತ್ತದೆ. ಆದುದರಿಂದ ಆ ಬ್ಯಾನರ್ ಅನ್ನು ತತ್ಕ್ಷಣವೇ ಮುಟ್ಟುಗೋಲು ಹಾಕಿಕೊಂಡು, ಬ್ಯಾನರ್ ಅಳವಡಿಸಿದ ಕಿಡಿಗೇಡಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಆಗ್ರಹಿಸಲಾಗಿದೆ. ಎಂದು ಎಚ್.ಹರಿಪ್ರಸಾದ್ ಶೆಟ್ಟಿ ಕಾನ್ಮಕ್ಕಿ, ಕುಂದಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು, ಕೊಟ್ಟ ದೂರನ್ನು ಮಾಧ್ಯಮಕ್ಕೆ ಕಳುಹಿಸಿ ಅಸಲಿ ವಿಷಯವನ್ನು ತಿಳಿಸಿದ್ದಾರೆ.