

ಕುಂದಾಪುರ; ಐದು ನದಿಗಳು ಸೇರುವ ಕುಂದಾಪುರದ ಪಂಚ ಗಂಗಾವಳಿ ನದಿ ಬಹಳ ರಮಣೀಯವಾಗಿದ್ದು, ಚಟುವಟಿಕೆಯ ಕೇಂದ್ರವಾಗಿತ್ತು. ಸಾವಿರಾರು ಕುಟುಂಬಗಳ ಜೀವನಕ್ಕೆ ಆಶ್ರಯ ನೀಡುವ ತಾಣವಾಗಿತ್ತು. ವಿಹಾರಕ್ಕೂ ಬಹಳ ಅದ್ಬುತವಾದ ಪ್ರದೇಶವಾಗಿತ್ತು. ಆದರೆ ವರ್ಷದಿಂದ ವರ್ಷಕ್ಕೆ ನದಿಯಲ್ಲಿ ಹೂಳು ತುಂಬುತ್ತಾ ಹೋಗಿ ನದಿ ಸಂಪೂರ್ಣ ಕಳಾಹೀನವಾಗಿದೆ. ಹೂಳು ತುಂಬಿದ ಸ್ಥಳಗಳಲ್ಲೇ ಗಿಡಗಳು ಬೆಳೆದು ಕಾಡಿನಂತಾಗಿದೆ. ಹೊಸ ಹೊಸ ಕುದುರುಗಳು ಹುಟ್ಟಿವೆ. ಮೀನುಗಾರರಿಗೆ, ಚಿಪ್ಪು ಕಾರ್ಮಿಕರಿಗೆ ಜೀವನ ನಡೆಸಲು ಅನುಕೂಲ ಇಲ್ಲದೇ ನೂರಾರು ಕುಟುಂಬಗಳ ಮೇಲೆ ಪರಿಣಾಮ ಉಂಟಾಗಿದೆ. ಪ್ರವಾಸೋದ್ಯಮಕ್ಕೆ ಬಹಳ ಪ್ರಾಶಸ್ತ್ಯವಾಗಿದ್ದ ಈ ಸ್ಥಳ ಸಂಪೂರ್ಣ ನಿರ್ಲಕ್ಷಕ್ಕೆ ಒಳಪಟ್ಟಿದ್ದು, ಜನರು ಭರವಸೆಯನ್ನೇ ಕಳೆದುಕೊಂಡಂತೆ ಆಗಿದೆ. ನದಿ ಇಳಿತದ ಸಂದರ್ಭದಲ್ಲಂತೂ ಮರುಭೂಮಿಯಂತೆ ಕಾಣಿಸುತ್ತಿದೆ. ಕುಂದಾಪುರದ ಈ ಕೇಂದ್ರ ಸ್ಥಳದಲ್ಲಿ ಬಹಳಷ್ಟು ಯೋಜನೆಗಳ ಅನುಷ್ಠಾನ ಈ ಹಿಂದೆ ಬೇಡಿಕೆ ಇಡಲಾಗಿದ್ದರೂ ಯಾವುದು ಕಾರ್ಯಗತವಾಗಿಲ್ಲ. ಎಲ್ಲದಕ್ಕೂ ಮೂಲವಾಗಿರುವ ಹೂಳೆತ್ತುವ ಕಾರ್ಯದ ಬಗ್ಗೆಯೇ ಸರಕಾರ, ಜಿಲ್ಲಾಡಳಿತ ಇನ್ನೂ ಸ್ಪಂದಿಸಿಲ್ಲ.

ಈ ವರ್ಷದ ರಾಜ್ಯದ ವಾರ್ಷಿಕ ಬಜೆಟ್ನಲ್ಲಿ ಕುಂದಾಪುರದ ಪಂಚಗಂಗಾವಳಿ ನದಿ ಹೂಳೆತ್ತುವ ಕಾರ್ಯಕ್ಕೆ ಹಾಗೂ ಈ ಪರಿಸರದ ಅಭಿವೃದ್ಧಿಗೆ ಹಣ ಮೀಸಲಿಡಲು ಶಾಸಕರು, ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿಗಳು, ಅರ್ಥ ಸಚಿವರು ಆಗಿರುವ ಮುಖ್ಯಮಂತ್ರಿಗಳಿಗೆ ಮನವರಿಕೆ ಮಾಡಬೇಕೆಂದು ಮಾಜಿ ಶಾಸಕ ಪಂಚಗಂಗಾವಳಿ ಸಮಿತಿ ಅಧ್ಯಕ್ಷ ಬಿ. ಅಪ್ಪಣ್ಣ ಹೆಗ್ಡೆ ಆಗ್ರಹಿಸಿದ್ದಾರೆ.
ಬಂದರು ಹಾಗೂ ಮೀನುಗಾರಿಕಾ ಸಚಿವ ಮಂಕಾಳ ವೈದ್ಯ ಅವರಿಗೆ ಪತ್ರ ಬರೆದಿರುವ ಅಪ್ಪಣ್ಣ ಹೆಗ್ಡೆಯವರು ಈ ಜ್ವಲಂತ ಸಮಸ್ಯೆಯನ್ನು ಶೀಘ್ರವೇ ಪರಿಹರಿಸಲು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಪತ್ರ ಬರೆದಿದ್ದಾರೆ.