ಕುಂದಾಪುರ: ಪೋಲಿಸ್ ರಿಂದ ತಪ್ಪಿಸಿ ಕೊಳ್ಳುವ ಧಾವಂತ ವಿದ್ಯಾರ್ಥಿನಿಗೆ ಡಿಕ್ಕಿ ಹೊಡೆದು ಪರಾರಿಯಾದ ಸ್ಕೂಟರ್ ಸವಾರರು

ವರದಿ : ಮಝರ್, ಕುಂದಾಪುರ

ಕುಂದಾಪುರ:ಹೆಲ್ಮೆಟ್ ಹಾಕಿ ಕೊಳ್ಳದೆ ರಾಂಗ್ ಸೈಡಿನಿಂದ ಬರುತ್ತಿದ್ದ ಸ್ಕೂಟರ್ ಸವಾರರು ಎದುರಿಗೆ ಬಂದ ಟ್ರಾಫಿಕ್ ಇಂಟರ್ ಸೆಪ್ಟರ್ ಪೊಲೀಸ್ ವಾಹನವನ್ನು ಕಂಡು ವಿದ್ಯಾರ್ಥಿನಿಯೋರ್ವಳಿಗೆ ಡಿಕ್ಕಿ ಹೊಡೆದು ಪರಾರಿಯಾದ ಘಟನೆ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದೆ.

ಹೊಸಬಸ್ ನಿಲ್ದಾಣ ಸಮೀಪ ಶನಿವಾರ ಮಧ್ಯಾಹ್ನ 1.15ರ ಆಸುಪಾಸಿಗೆ ಈ ಘಟನೆಯು ಜರಗಿದ್ದು, ಏಕ ಮುಖ ಸಂಚಾರವಾಗಿರುವ ಮುಖ್ಯರಸ್ತೆಯಲ್ಲಿ ವಿರುಧ್ಧ ದಿಕ್ಕಿನಿಂದ ಹೆಲ್ಮೆಟ್ ಧರಿಸದೇ ಬರುತ್ತಿದ್ದ ಸ್ಕೂಟರ್ ಸವಾರರನ್ನು ಕಂಡು ಟ್ರಾಫಿಕ್ ಇಂಟರ್ ಸೆಪ್ಟರ್ ನಲ್ಲಿ ಸಾಗುತ್ತಿದ್ದ ಪೊಲೀಸರು ಸ್ಕೂಟರನ್ನು ನಿಲ್ಲಿಸುವಂತೆ ಸೂಚನೆ ನೀಡಿದ್ದಾರೆ . ಆದರೆ ಪೊಲೀಸರನ್ನು ಕಂಡೊಡನೆ ಸ್ಕೂಟರ್ ವೇಗವನ್ನು ಹೆಚ್ಚಿಸಿದ ಸವಾರ ತಪ್ಪಿಸಿಕೊಳ್ಳುವ ಭರ ದಲ್ಲಿ ಎದುರಿನಿಂದ ಸಾಗುತ್ತಿದ್ದ ವಿದ್ಯಾರ್ಥಿನಿಗೆ ಡಿಕ್ಕಿ ಹೊಡೆದು ರಾಮ ಮಂದಿರ ರಸ್ತೆಯ ಮೂಲಕ ಪರಾರಿಯಾಗುವಲ್ಲಿ ಯಶಸ್ವಿಯಾಗಿದ್ದಾರೆ.

ರಸ್ತೆಗೆ ಉರುಳಿದ ವಿದ್ಯಾರ್ಥಿನಿ ನಡೆದ ಘಟನೆಯಿಂದ ಬೆಚ್ಚಿ ಬಿದ್ದಿದ್ದು ಸುದೈವಶಾತ್ ಸಣ್ಣ ಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾಳೆ. ಟ್ರಾಫಿಕ್ ಪೊಲೀಸರ ಕಟ್ಟು ನಿಟ್ಟಿನ ಕ್ರಮದ ನಡುವೆಯೂ ಟ್ರಾಫಿಕ್ ನಿಯಮಗಳನ್ನು ಉಲ್ಲಂಘಿಸುವ ಪಡ್ಡೆ ಹುಡುಗರ ಸಂಖ್ಯೆ ಹೆಚ್ಚಾಗುತ್ತಿದ್ದು ಸಾರ್ವಜನಿಕರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಪರಾರಿಯಾಗಿರುವ ಸ್ಕೂಟರ್ ಸವಾರರು ಪರಾರಿಯಾಗಲು ಬಳಸಿದ ಮಾರ್ಗದಲ್ಲಿ ಆಳವಡಿಸಲಾಗಿರುವ ಅಷ್ಟೂ ಸಿಸಿ ಕೆಮರಾ ಗಳ ಫೂಟೇಜ್ ಗಳನ್ನು ಪೊಲೀಸರು ಕಲೆ ಹಾಕಿದ್ದು ಸವಾರರ ಗುರ್ತು ಪತ್ತೆಯಲ್ಲಿ ತೊಡಗಿದ್ದಾರೆನ್ನಲಾಗಿದೆ.