

ಕುಂದಾಪುರ : ಚತುಷ್ಪದ ರಸ್ತೆಯ ಅವೈಜ್ಞಾನಿಕ ಕಾಮಗಾರಿಯಿಂದಾಗಿ ಕುಂದಾಪುರ ದ ವಡೆರಹೋಬಳಿಯ ಸರ್ವೀಸ್ ರಸ್ತೆಯ ಇಕ್ಕೇಡೆ ಗಳಲ್ಲಿ ಮಳೆ ನೀರು ನೆರೆ ಯಂತೆ ನಿಲ್ಲುವಂತೆ ಮಾಡಿದ ನವಯುಗ್ ಸಂಸ್ಥೆಯು ಇದೀಗ ಅದೇ ಸ್ಥಳದಲ್ಲಿ ಮತ್ತೊಂದು ಅವಾಂತ್ರವನ್ನು ಸ್ರಷ್ಟಿಸಿ ಸಾರ್ವಜನಿಕರ,ವಾಹನ ಸವಾರರ ಪ್ರಾಣದೊಂದಿಗೆ ಚೆಲ್ಲಾಟ ವಾಡುತ್ತಿದೆ.
ಕಳೆದ ಸುಮಾರು ಎರಡು-ಮೂರು ವಾರಗಳ ಹಿಂದೆ ಸುರಿದ ಭಾರಿ ಮಳೆಯು ವಡೆರಹೋಬಳಿಯ ಸರ್ವಿಸ್ ರಸ್ತೆಗಳನ್ನು ಸಂಪೂರ್ಣವಾಗಿ ಮುಳುಗಿಸಿ ಸಂಚಾರವನ್ನು ದುಸ್ತರಗೊಳಿಸಿತ್ತು. ಸಾರ್ವಜನಿಕರ ಭಾರಿ ಆಕ್ರೋಷದಿಂದ ಎಚ್ಚತ್ತು ಕೊಂಡ ನವಯುಗ್ ಸಂಸ್ಥೆಯ ಅಧಿಕಾರಿಗಳು ರಸ್ತೆಗಳನ್ನು ಆವರಿಸಿಕೊಂಡಿದ್ದ ನೀರನ್ನು ಮತ್ತೆ ಅವೈಜ್ಞಾನಿಕ ರೀತಿಯಲ್ಲಿ ಹೊರ ಹಾಕುವ ಕಾಯಕವನ್ನು ಆರಂಭಿಸಿದ್ದರು. ಅದರಂತೆ ಮೂರುಕೈ ಬಳಿಯ ಅನತಿ ದೂರದಿಂದ ಸುಮಾರು 60 ಅಡಿ ದೂರದ ತನಕ ಜೆಸಿಬಿಯನ್ನು ಬಳಸಿ ಸರ್ವಿಸ್ ರಸ್ತೆಯ ಎಡಭಾಗವನ್ನು 4-5ಅಡಿ ಆಳದ ತನಕ ಅಗೆದು ಅದರ ಮೂಲಕ ನೀರು ಹೊರಗೆ ಹರಿದು ಹೋಗುವಂತೆ ಮಾಡಲು ಯತ್ನಿಸಲಾಗಿತ್ತು. ಆದರೆ ಸರ್ವಿಸ್ ರಸ್ತೆಯನ್ನು ಆವರಿಸಿದ ನೀರು ಅಗೆದು ಹಾಕಿದ ಆಳದ ಮೋರಿ ಸೇರಿ ಹಳ್ಳದಂತಾಯಿತೇ ವಿನಹ: ನೀರಂತೂ ಹರಿದು ಹೋಗಲೇ ಇಲ್ಲ , ತಾವೇ ತೋಡಿದ ಹಳ್ಳದ ತುಂಬಾ ಕೆರೆಯಂತೆ ತುಂಬಿ ಹೋದ ನೀರನ್ನು ಪಂಪ್ ಸೆಟ್ ಗಳನ್ನು ಬಳಸಿ ಒಂದಷ್ಟು ಹೊರ ಹಾಕಿದ ನವಯುಗ್ ಅಧಿಕಾರಿಗಳು ಅದರಲ್ಲೂ ಯಶಸ್ಸು ಸಿಗದಾಗ ಅಪಾಯಕ್ಕೆ ಆಹ್ವಾನ ನೀಡುವ ನೀರು ತುಂಬಿರುವ ಮೋರಿಯನ್ನು ಹಾಗೆ ಬಿಟ್ಟು ಸ್ಥಳದಿಂದ ಮೆಲ್ಲಗೆ ಜಾಗ ಖಾಲಿ ಮಾಡಿದ್ದಾರೆ. ಇದೀಗ ಹಲವು ದಿನಗಳು ಉರುಳಿ ಹೋದರೂ ನವಯುಗ್ ಕಂಪೆನಿ ಅಧಿಕಾರಿಗಳ ಪತ್ತೆಯೇ ಇಲ್ಲದಂತಾಗಿದೆ. ರಸ್ತೆಯ ಪಕ್ಕ.ಅವರು ಅಗೆದು ಹಾಕಿ ಹೋಗಿರುವ ಆಳದ ಮೋರಿಯಲ್ಲಿ ಇದೀಗ ನೀರು ತುಂಬಿ ಕೊಂಡಿದ್ದು ಸಣ್ಣ ಚರಂಡಿ ಭಾವಿಸಿ ಪಾದಚಾರಿಗಳು,ವಾಹನ ಸವಾರರು ಎಡ ಭಾಗಕ್ಕೆ ಸರಿದರೆ ಅಪಾಯ ಕಟ್ಟಿಟ್ಟ ಬುತ್ತಿ ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ.. ಸುಖಾಸುಮ್ಮನೆ ಎಂಬಂತೆ ನಗರದ ನಡುವೆಯೇ ಅಪಾಯಕಾರಿ ಹಳ್ಳವನ್ನು ಅಗೆದು, ಸಾರ್ವಜನಿಕರ ಜೀವದೊಂದಿಗೆ ಚೆಲ್ಲಾಟವಾಡುತ್ತಿರುವ ಅಧಿಕಾರಿಗಳ ಬಗ್ಗೆ ಸ್ಥಳೀಯರು ಹಲವು ಬಾರಿ ದೂರಿಕೊಂಡರೂ ಯಾವುದೇ ಪ್ರಯೋಜನವಾಗಿಲ್ಲ. ಸದ್ಯಕ್ಕೆ ನೀರು ತುಂಬಿ ಕೊಂಡಿರುವ ಅಪಾಯಕಾರಿ ಮೋರಿ ಮಾತ್ರ ಪ್ರಾಣ ಬಲಿಗಾಗಿ ಕಾದು ಕುಂತಿದೆ ಎಂದು ಸ್ಥಳೀಯರು ಭೀತಿ ವ್ಯಕ್ತ ಪಡಿಸುತಲಿದ್ದಾರೆ.ಅನಾಹುತ ಸಂಭವಿಸಿದ ನಂತರ ಸಂತಾಪ, ಪರಿಹಾರದ ಬಗ್ಗೆ ಮಾತನಾಡುವ ಅಧಿಕಾರಿಗಳು,ಸಚಿವರು , ಪುಢಾರಿಗಳು ಈ ಬಗ್ಗೆ ಕೂಡಲೇ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.


