ಭಂಡಾರ್ಕಾರ್ಸ್ ಕಾಲೇಜು ರೇಡಿಯೋ ಕುಂದಾಪ್ರ 89.6 ಎಫ್. ಎಂ. ಹಾಗೂ ‘ಕುಂದಪ್ರಭ’ ಸಂಸ್ಥೆ ಆಶ್ರಯದಲ್ಲಿ ರೇಡಿಯೋ ಕುಂದಾಪ್ರ ಸಮುದಾಯ ಬಾನುಲಿ ಕೇಂದ್ರದಲ್ಲಿ ಏರ್ಪಡಿಸಿದ ಕುಂದಾಪ್ರ ಕನ್ನಡ ಹಾಡುಗಾರಿಕೆ-ಕವನ ವಾಚನ ಸ್ಪರ್ಧೆಯಲ್ಲಿ ಶಾಲಾ, ಕಾಲೇಜು ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗವಹಿಸಿ ಸಂಭ್ರಮ ಪಟ್ಟರು.
ಹೆಣೆ ನೀ ಮಿಡ್ಕುದ್ಯಾಕೆ? ಅಲ್ ಹಾಂಗಾಯ್ತಂಬ್ರ, ಮಳಿಗಾಲ ಬಂತ್ಕಾಣಿ, ನಮ್ ಭಾಷಿ ನಮ್ಗ್ ಬೇಕ್, ಕೇಳ್ಕಣಿ, ತಿಳ್ಕಣಿ, ದಮ್ಮಯ್ಯ ಹೊಡಿಬ್ಯಾಡ, ಹುಟ್ದಾರ್ಬಿ ಕಂಡದ್ದೆ ಗೋಳ್, ಹೊಯ್ ಏಗಳಿಕ್ ಬಂದದ್ದ್?, ಹೇಳುಕೆ ನಮ್ಗೆ ನಾಚ್ಕಿ ಆತ್ತಲೆ?, ಚಂದ್ ಗೋಂಪಿ ಊರ್ ಕುಂದಾಪ್ರ, ನೀ ಎಂತಾ ಚಂದು, ಹೊಸ್ತಿನ್ ಅಡ್ಗಿ ಉಂಬೂಕ್ ಚಂದ, ಊರೆಲ್ಲಾ ಅಡಿ ಮೇಲಾಯ್ತಂಬ್ರ, ಸ್ವರಚಿತ ಕವನಗಳು, ಹಾಡುಗಾರಿಕೆ, ವಾಚನ, ಮೆಚ್ಚುಗೆ ಪಡೆದವು.
ಹಲವು ವಿದ್ಯಾರ್ಥಿಗಳು ರವಿ ಬಸ್ರೂರು ಅವರ ರಚನೆಯ ಹಾಡುಗಳನ್ನು ಹಾಡಿದರು. ಇನ್ನು ಕೆಲವರು ಡಾ| ಸತೀಶ ಪೂಜಾರಿಯವರ “ಎಂತಾ ಚಂದ ನಮ್ಮ್ ಭಾಷಿ” ಹಾಡುಗಳಿಂದ ಅವರನ್ನು ಸ್ಮರಿಸಿದರು.
ಹಿರಿಯ ವಿದ್ಯುತ್ಗುತ್ತಿಗೆದಾರ, ಕುಂದ ಕನ್ನಡ ಭಾಷಿ ಅಭಿಯಾನದ ನೇತಾರ ಕೆ. ಆರ್. ನಾಯ್ಕ ಕಾರ್ಯಕ್ರಮ ಉದ್ಘಾಟಿಸಿ, ವಿದ್ಯಾರ್ಥಿಗಳನ್ನು ಅಭಿನಂದಿಸಿದರು. “ಕುಂದಾಪ್ರ ಕನ್ನಡ ಭಾಷೆ ಉಳಿಸುವ ಹಿರಿಯರ ಆಶಯ ನಾವು ಸಾಕಾರಗೊಳಿಸಬೇಕು.” ಎಂದರು.
‘ಕುಂದಪ್ರಭ’ ಸಂಸ್ಥೆಯ ಯು. ಎಸ್. ಶೆಣೈ ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ತೆಂಕನಿಡಿಯೂರು ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ವಿಶ್ವನಾಥ ಕರಬ, ವಂಡ್ಸೆ ಸರಕಾರಿ ಪ. ಪೂ. ಕಾಲೇಜಿನ ಪ್ರಾಂಶುಪಾಲ ರಾಜೀವ ನಾಯ್ಕ್, ಭಂಡಾರ್ಕಾರ್ಸ್ ಪ. ಪೂ. ಕಾಲೇಜಿನ ಪ್ರಾಂಶುಪಾಲ ಡಾ. ಜಿ. ಎಂ. ಗೊಂಡ, ಭಂಡಾರ್ಕಾರ್ಸ್ ಕಾಲೇಜಿನ ವಾಣಿಜ್ಯ ವಿಭಾಗದ ಮುಖ್ಯಸ್ಥ ಅರುಣ್ ಉಪಸ್ಥಿತರಿದ್ದರು.
ವಿಶ್ವನಾಥ ಕರಬ ಕುಂದಾಪ್ರ ಕನ್ನಡದ ವೈಶಿಷ್ಟ್ಯ ವಿವರಿಸಿ, “ಪುಟ್ಟ ವಾಕ್ಯಗಳ ಕುಂದಾಪ್ರ ಕನ್ನಡ ಉಳಿವಿನ ಹಿಂದೆ ವಿಸ್ತಾರವಾದ ಸಂಸ್ಕøತಿ ಇದೆ.” ಎಂದರು.
ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥರಾದ ಸುಮಲತಾ ಕಾರ್ಯಕ್ರಮ ನಿರ್ವಹಿಸಿದರು. ಧನ್ಯಶ್ರೀ ಜೋಗಿ ಅತಿಥಿಗಳನ್ನು ಪರಿಚಯಿಸಿದರು. ತನ್ಮಯ ಭಂಡಾರಿ ವಂದಿಸಿದರು.