ಕಂದಾಪುರದ ಸರಕಾರಿ ಪದವಿ ಪೂರ್ವ ಕಾಲೇಜು ಹಾಗೂ ಕುಂದಪ್ರಭ ಸಂಸ್ಥೆಯ ಆಶ್ರಯದಲ್ಲಿ ಕುಂದಾಪ್ರ ಕನ್ನಡ ಕವಯತ್ರಿ “ಸುಮಿತ್ರಾ ಐತಾಳ” ಅವರ ಸ್ಮರಣೆಯಲ್ಲಿ ಕುಂದಾಪ್ರ ಕನ್ನಡ ಹಬ್ಬ ಹಾಗೂ “ಮೂಕ್ ಹಕ್ಕಿ ಹಾಡ್” ಕಾರ್ಯಕ್ರಮ ನಡೆಸಲಾಯಿತು.
ಕುಂದಾಪುರ ಸರಕಾರಿ ಪದವಿ ಪೂರ್ವ ಕಾಲೇಜಿನ ರೋಟರಿ ಲಕ್ಷ್ಮೀ ನರಸಿಂಹ ಕಲಾ ಮಂದಿರದಲ್ಲಿ ಚಿನ್ಮಯಿ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರೂ, ಕುಂದಾಪುರ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರೂ ಆದ ಡಾ. ಉಮೇಶ್ ಪುತ್ರನ್ ಉದ್ಘಾಟಿಸಿ, ಕುಂದ ಕನ್ನಡ ಭಾಷೆಯ ವೈಶಿಷ್ಟ್ಯ ವಿವರಿಸಿದರು. ಕಾಲೇಜಿನ ಪ್ರಾಂಶುಪಾಲ ರಾಮಕೃಷ್ಣ ಬಿ.ಜಿ. ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಖ್ಯಾತ ಚಲನಚಿತ್ರ ನಿರ್ಮಾಪಕ, ನಿರ್ದೇಶಕ ಶ್ರೀರಾಜ್ ಕೊಠಾರಿ ಮಾತನಾಡಿ, ಕನ್ನಡ ಚಿತ್ರರಂಗದಲ್ಲಿ ಕುಂದ ಕನ್ನಡ ಬಳಕೆ ಮಾಡುವ ಬಗ್ಗೆ ತಾನು ಪಟ್ಟ ಶ್ರಮ ವಿವರಿಸಿದರು. ಕುಂದ ಕನ್ನಡ ಚಲನಚಿತ್ರ “ಹಜ್” ನಿರ್ಮಾಣ ಮಾಡಿ ರಾಜ್ಯ ಸರಕಾರದಿಂದ ಸ್ವರ್ಣ ಕಮಲ ಪ್ರಶಸ್ತಿ ಪಡೆದ ಶ್ರೀರಾಜ್ ಕೊಠಾರಿ ಅವರನ್ನು ಗೌರವಿಸಲಾಯಿತು.
ಕುಂದಪ್ರಭ ಸಂಸ್ಥೆಯ ಅಧ್ಯಕ್ಷ ಯು.ಎಸ್. ಶೆಣೈ, ಕುಂದಾಪ್ರ ಕನ್ನಡ ಉಳಿಸಿ ಬೆಳೆಸುವ ಅಗತ್ಯತೆ ತಿಳಿಸಿ ಕುಂದಾಪ್ರ ಕನ್ನಡದ ಲೇಖಕಿ ದಿ. ಸುಮಿತ್ರಾ ಐತಾಳ ಅವರನ್ನು ಸ್ಮರಿಸಿದರು.
ವಿದ್ಯಾರ್ಥಿಗಳು ಕುಂದ ಕನ್ನಡ ಕವಿತೆಗಳನ್ನು ಓದಿದರು.
ಉಪನ್ಯಾಸಕ ಉದಯಕುಮಾರ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಉಪನ್ಯಾಸಕ ಸುಕೇಶ್ ಚಂದ್ರಶೇಖರ್ ವಂದಿಸಿದರು.
ಸುಮಿತ್ರಾ ಐತಾಳ್ ನೆನಪು
ಕುಂದಾಪ್ರ ಕನ್ನಡ ಲೇಖಕಿ, ಕವಯತ್ರಿ ದಿ.ಸುಮಿತ್ರಾ ಐತಾಳರ ಸ್ಮರಣಾರ್ಥ ನಡೆದ ಕಾರ್ಯಕ್ರಮದಲ್ಲಿ ಅವರು ಕುಂದಾಪ್ರ ಕನ್ನಡಕ್ಕೆ ಕೊಟ್ಟ ಕೊಡುಗೆಯನ್ನು ಡಾ. ಉಮೇಶ್ ಪುತ್ರನ್ ಸ್ಮರಿಸಿದರು. ವಿದ್ಯಾರ್ಥಿಗಳು ಅವರ ಕವನಗಳನ್ನು ಓದಿದರು. ಅವರ ಕುಂದಾಪ್ರ ಕನ್ನಡ ಮಾತುಗಳ ಧ್ವನಿ ಮುದ್ರಿಕೆ ಕೇಳಿಸಲಾಯಿತು. ಯು.ಎಸ್.ಶೆಣೈ ಸುಮಿತ್ರಾ ಐತಾಳರ ಕನಸುಗಳ ವಿವರ ನೀಡಿದರು.