ನಿಘಂಟು ಬ್ರಹ್ಮ, ಭಾಷಾ ತಜ್ಞ ಕೀರ್ತಿಶೇಷ ಜಿ. ವೆಂಕಟಸುಬ್ಬಯ್ಯ ಅವರ ಸ್ಮರಣಾರ್ಥ, ಅವರ ಹೆಸರಿನಲ್ಲಿ ‘ಕಥೆಕೂಟ’ ಪ್ರಶಸ್ತಿಯೊಂದನ್ನು ಆರಂಭಿಸುತ್ತಿದೆ. ಭಾಷೆಯಲ್ಲಿ ವಿಶಿಷ್ಟ ಪ್ರಯೋಗಗಳನ್ನು ಮಾಡಿದ, ಭಾಷೆಗೆ ಸೃಜನಶೀಲ ಕೊಡುಗೆ ನೀಡಿದ ಮತ್ತು ಭಾಷೆಯ ಸಾಧ್ಯತೆಗಳನ್ನು ವಿಸ್ತರಿಸುವ ಕೆಲಸದಲ್ಲಿ ನಿರತರಾಗಿರುವ ಪ್ರತಿಭಾವಂತರಿಗೆ ಪ್ರತಿವರ್ಷ ಜಿ.ವೆಂಕಟಸುಬ್ಬಯ್ಯ ಭಾಷಾ ಸಮ್ಮಾನ್ ಪುರಸ್ಕಾರ ನೀಡಿ ಗೌರವಿಸಲು ಕಥೆಕೂಟ ನಿರ್ಧರಿಸಿದೆ. ಈ ಪ್ರಶಸ್ತಿಯು ರೂ.10,000 ನಗದು ಮತ್ತು ಫಲಕವನ್ನು ಒಳಗೊಂಡಿರುತ್ತದೆ.
2023ನೇ ಸಾಲಿನ ಜಿ.ವೆಂಕಟಸುಬ್ಬಯ್ಯ ಭಾಷಾ ಸಮ್ಮಾನ್ ಪುರಸ್ಕಾರವನ್ನು `ಕುಂದಾಪ್ರ ಕನ್ನಡ’ ನಿಘಂಟು ಸಂಪಾದಕ ಶ್ರೀ ಪಂಜು ಗಂಗೊಳ್ಳಿ ಅವರಿಗೆ ನೀಡಲು ಭಾಷಾ ಸಮ್ಮಾನ್ ಪುರಸ್ಕಾರ ಸಮಿತಿ ಸಂತೋಷಿಸುತ್ತದೆ. ಸುಮಾರು 20 ವರ್ಷಗಳ ಅವಿರತ ಶ್ರಮ, ಅಧ್ಯಯನ, ಸಂಶೋಧನೆ ಮತ್ತು ಸಂಘಟನೆಯಿಂದ ಸಿದ್ಧವಾಗಿರುವ ಕುಂದಾಪ್ರ ಕನ್ನಡ ನಿಘಂಟು, ಕನ್ನಡ ಭಾಷೆಗೆ ಅತ್ಯುತ್ತಮ ಕೊಡುಗೆ. ಲಂಕೇಶ್ ಪತ್ರಿಕೆಯಲ್ಲಿ ವ್ಯಂಗ್ಯಚಿತ್ರಕಾರರಾಗಿದ್ದ ಪಂಜು ಗಂಗೊಳ್ಳಿ ಪತ್ರಕರ್ತರು ಮತ್ತು ಲೇಖಕರು. ಸದ್ಯಕ್ಕೆ ಅವರು ಮುಂಬಯಿಯಲ್ಲಿ ವಾಸವಾಗಿದ್ದಾರೆ.
ಪ್ರಶಸ್ತಿ ಆಯ್ಕೆ ಸಮಿತಿಯಲ್ಲಿ ಹಿರಿಯ ಕವಿ ಸುಬ್ರಾಯ ಚೊಕ್ಕಾಡಿ, ಗಿರೀಶ್ ರಾವ್ ಹತ್ವಾರ್ (ಜೋಗಿ), ಗೋಪಾಲಕೃಷ್ಣ ಕುಂಟಿನಿ, ಜಿ ವಿ. ಅರುಣ ಇದ್ದರು.
ಈ ಪ್ರಶಸ್ತಿ ಪ್ರದಾನ ಸಮಾರಂಭವು ಜಿ ವಿ ಅವರ 111ನೇ ಹುಟ್ಟುಹಬ್ಬವಾದ 23.08.2023ರಂದು ಸಂಜೆ 6 ಗಂಟೆಗೆ ಪ್ರೊ. ಜಿವಿ ಜನ್ಮಶತಾಬ್ದಿ ಕಲಾ ಭವನ, ಜಯರಾಮ ಸೇವಾ ಮಂಡಳಿ, 492 / ಎ, ಒಂದನೇ ಮುಖ್ಯರಸ್ತೆ, ಎಂಟನೇ ಬ್ಲಾಕ್, ಜಯನಗರ, ಬೆಂಗಳೂರು- 560070- ಇಲ್ಲಿ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.