JANANUDI.COM NETWORK
ಗ್ರಾಮೀಣ ಭಾಗದ ಜನರಿಂದ ಕುಂದಾಪ್ರ ಭಾಷೆ ಉಳಿದೆ: ಕೃಷ್ಣಮೂರ್ತಿ

ಬೀಜಾಡಿ: ಕುಂದಾಪ್ರ ಕನ್ನಡ ಚೆಂದದ ಸೊಗಡಿನ, ಸೊಗಸಿನ ಭಾಷೆಯಾಗಿದೆ. ಅಲ್ಲದೇ ನಮ್ಮ ಬದುಕಿನ, ಹೃದಯದ ಭಾಷೆಯು ಹೌದು. ಗ್ರಾಮೀಣ ಭಾಗದ ಜನರಿಂದ ಇನ್ನೂ ಈ ಭಾಷೆ ಜೀವಂತವಾಗಿ ಉಳಿದಿದೆ ಎಂದು ನಾವುಂದ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ಶಿಕ್ಷಕ ಕೃಷ್ಣಮೂರ್ತಿ ಪಿ.ಕೆ ಹೇಳಿದರು.
ಅವರು ಭಾನುವಾರ ಬೀಜಾಡಿ ಮಿತ್ರಸೌಧದಲ್ಲಿ ಬೆಳ್ಳಿಹಬ್ಬದ ಸಂಭ್ರಮದಲ್ಲಿರುವ ಬೀಜಾಡಿ ಗೋಪಾಡಿ ಮಿತ್ರ ಸಂಗಮ ಹಾಗೂ ರೋಟರಿ ಸಮುದಾಯ ದಳ ಬೀಜಾಡಿ ಗೋಪಾಡಿ ಇವರ ಆಶ್ರಯದಲ್ಲಿ ನಡೆದ 3ನೇ ವರ್ಷದ ವಿಶ್ವ ಕುಂದಾಪ್ರ ಕನ್ನಡ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮುಖ್ಯ ಅತಿಥಿಯಾಗಿ ಆಗಮಿಸಿದ ಪತ್ರಕರ್ತ ವಸಂತ ಗಿಳಿಯಾರ್ ಮಾತನಾಡಿ, ಕುಂದಾಪ್ರ ಕನ್ನಡ ನಮ್ಮ ಅಬ್ಬಿ ಭಾಷಿ. ಅದು ನಮ್ಮ ಜತೆ ಭಾವನಾತ್ಮಕವಾಗಿ ಬೆಳೆದು ಬಂದಿದೆ ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ಬೀಜಾಡಿ ಗ್ರಾಮ ಪಂಚಾಯಿತಿ ಸದಸ್ಯ ಬಿ.ವಾದಿರಾಜ ಹೆಬ್ಬಾರ್ ವಹಿಸಿದ್ದರು. ಇದೇ ಸಂದರ್ಭದಲ್ಲಿ ಬೀಜಾಡಿಯ ಹಿರಿಯ ಮಹಿಳೆ ಕೊಜೆಗದ್ದೆಮನೆ ಲಕ್ಪ್ಮೀ ಪೂಜಾತ್ತಿ ಅವರನ್ನು ಸನ್ಮಾನಿಸಿ, ಗೌರವಿಸಲಾಯಿತು. ವೇದಿಕೆಯಲ್ಲಿ ಬೀಜಾಡಿ ಗೋಪಾಡಿ ರೋಟರಿ ಸಮುದಾಯ ದಳದ ಅಧ್ಯಕ್ಷ ಗಿರೀಶ್ ಕೆ.ಎಸ್ ಉಪಸ್ಥಿತರಿದ್ದರು.
ಮಿತ್ರ ಸಂಗಮದ ಅಧ್ಯಕ್ಷ ಮಂಜುನಾಥ ಸ್ವಾಗತಿಸಿದರು. ಕಾರ್ಯದರ್ಶಿ ಚಂದ್ರ ಬಿ.ಎನ್ ವಂದಿಸಿದರು. ಪತ್ರಕರ್ತ ಚಂದ್ರಶೇಖರ ಬೀಜಾಡಿ ಕಾರ್ಯಕ್ರಮ ನಿರೂಪಿಸಿದರು.