ಸರ್ಕಾರ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ನೌಕರರ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಬೇಕು ;ಕೆ.ಆರ್.ರಮೇಶ್ ಕುಮಾರ್

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ

ಶ್ರೀನಿವಾಸಪುರ: ಸರ್ಕಾರ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ನೌಕರರ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಶಾಸಕ ಕೆ.ಆರ್.ರಮೇಶ್ ಕುಮಾರ್ ಆಗ್ರಹಿಸಿದರು.
ಪಟ್ಟಣದ ತಾಲ್ಲೂಕು ಕಚೇರಿ ಆವರಣದಲ್ಲಿ ಸೋಮವಾರ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ನೌಕರರ ಸಮಸ್ಯೆ ಈಡೇರಿಸುವಂತೆ ಸಿಐಟಿಯು ನೇತೃತ್ವದಲ್ಲಿ ತಹಶೀಲ್ದಾರ್‍ಗೆ ಮನವಿ ಪತ್ರ ನೀಡಿದ ಬಳಿಕ ಮಾತನಾಡಿದ ಅವರು, ಸರ್ಕಾರ ನೌಕರರ ವಿರುದ್ಧ ಕೈಗೊಳ್ಳುತ್ತಿರುವ ಶಿಸ್ತು ಕ್ರಮ ಪ್ರಜಾಪ್ರಭುತ್ವ ವಿರೋಧಿ ನಿಲುವಾಗಿದೆ ಎಂದು ಹೇಳಿದರು.
ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಘಟಕದ ಉಪಾಧ್ಯಕ್ಷ ಪಾತಕೋಟ ನವೀನ್ ಕುಮಾರ್ ಮಾತನಾಡಿ, ಸರ್ಕಾರ 6ನೇ ವೇತನ ಆಯೋಗದ ಶಿಫಾರಸುಗಳನ್ನು ರಾಜ್ಯ ರಸ್ತೆ ಸಾರಿಗೆ ನೌಕರರಿಗೆ ವಿಸ್ತರಿಸಬೇಕು. ಮುಷ್ಕರದ ಸಂದರ್ಭದಲ್ಲಿ ನೌಕರರ ಮೇಲೆ ಹೂಡಲಾಗಿರುವ ಮೊಕದ್ದಮೆಗಳನ್ನು ವಾಪಸ್ಸು ಪಡೆಯಬೇಕು. ಅಮಾನತು ಪಡಿಸಲಾಗಿರುವ ನೌಕರರನ್ನು ಮತ್ತೆ ಕೆಲಸಕ್ಕೆ ತೆಗೆದುಕೊಳ್ಳಬೇಕು ಎಂದು ಆಗ್ರಹಹಿಸಿದರು.
ವಿವಿಧ ಸಂಘಟನೆಗಳ ಮುಖಂಡರಾದ ನಾಗಭೂಷಣ್, ಟಿ.ಎಚ್.ಆಂಜಿನಪ್ಪ, ಮಮತ, ರಾಧಮ್ಮ, ವೀರಪ್ಪರೆಡ್ಡಿ, ನಾಗೇಶ್, ಸುಬ್ರಮಣಿ, ಶ್ರೀರಾಮರೆಡ್ಡಿ, ಬೈರೆಡ್ಡಿ, ವಿಶ್ವನಾಥ್ ಇದ್ದರು.
ಮೆರವಣಿಗೆ: ವಿವಿಧ ಕಾರ್ಮಿಕ ಹಾಗೂ ಕನ್ನಡ ಕನ್ನಡ ಪರ ಸಂಘಟನೆಗಳ ಕಾರ್ಯಕರ್ತರು ಹಾಗೂ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ನೌಕರರ ಕುಟುಂಬಗಳ ಸದಸ್ಯರು, ನೌಕರರ ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರವನ್ನು ಆಗ್ರಹಿಸಿ, ಪಟ್ಟಣದ ಹೊರವಲಯದ ರೈಲು ನಿಲ್ದಾಣದಿಂದ, ಎಂಜಿ ರಸ್ತೆಯುದ್ದಕ್ಕೂ ಮೆರವಣಿಗೆ ನಡೆಸಿದರು. ಮೆರವಣಿಗೆಯಲ್ಲಿ ಸರ್ಕಾರದ ನೀತಿಗಳ ವಿರುದ್ಧ ಘೋಷಣೆ ಕೂಗಲಾಯಿತು.