ಭಾರತ ಸೇವಾದಳ ಜಿಲ್ಲಾಧ್ಯಕ್ಷರಾಗಿ ಕೆ.ಎಸ್.ಗಣೇಶ್ ಪುನರಾಯ್ಕೆ
ಸೇವಾದಳ ಭವನಕ್ಕೆ ಶಕ್ತಿ ಮೀರಿ ಶ್ರಮಿಸೋಣ – ಸಿಎಂಆರ್ ಶ್ರೀನಾಥ್

ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ

ಕೋಲಾರ:- ಜಿಲ್ಲಾ ಕೇಂದ್ರದಲ್ಲಿ ಭಾರತ ಸೇವಾದಳ ಭವನ ನಿರ್ಮಾಣಕ್ಕೆ ಶಕ್ತಿ ಮೀರಿ ಶ್ರಮಿಸೋಣ ಎಂದು ಸಮಾಜ ಸೇವಕ ಸಿಎಂಆರ್ ಶ್ರೀನಾಥ್ ಹೇಳಿದರು.
ನಗರದ ರೋಟರಿ ಸೆಂಟ್ರಲ್ ಭವನದಲ್ಲಿ ಶುಕ್ರವಾರ ಭಾರತ ಸೇವಾದಳ ಜಿಲ್ಲಾ ಸಮಿತಿಯ ನೂತನ ಪದಾಧಿಕಾರಿಗಳ ಆಯ್ಕೆ ಸಮಾರಂಭದಲ್ಲಿ ಸೇವಾದಳ ಜಿಲ್ಲಾ ಗೌರವಾಧ್ಯಕ್ಷರಾಗಿ ಆಯ್ಕೆಯಾದ ನಂತರ ಅವರು ಮಾತನಾಡುತ್ತಿದ್ದರು.
ದೇಶದ ಸಾರ್ವಭೌಮತೆಯನ್ನು ಕಾಪಾಡಿಕೊಳ್ಳಲು ಸೇವಾದಳದ ಪಾತ್ರ ಹಿರಿದು ಎಂದು ಹೇಳಿದ ಅವರು, ಸೇವಾದಳದಂತ ಸಂಸ್ಥೆಯಲ್ಲಿ ಲಾಭಾಂಶರಹಿತವಾಗಿ ಸೇವೆಯ ಧ್ಯೇಯದೊಂದಿಗೆ ಸಮಾಜ ಸೇವೆ ಸಲ್ಲಿಸಲು ತಮಗೆ ಅವಕಾಶ ಸಿಗುತ್ತಿರುವುದಕ್ಕೆ ಹೆಮ್ಮೆಯೆನಿಸುತ್ತಿದೆಯೆಂದರು.
ಭಾರತ ಸೇವಾದಳ ಜಿಲ್ಲಾಧ್ಯಕ್ಷರಾಗಿ ಮೂರನೇ ಬಾರಿಗೆ ಸರ್ವಾನುಮತದಿಂದ ಪುನರಾಯ್ಕೆಯಾದ ಕೆ.ಎಸ್.ಗಣೇಶ್ ಮಾತನಾಡಿ, ಸೇವಾದಳದ ಮೂಲಕ ಮಕ್ಕಳಲ್ಲಿ ಶಿಸ್ತು, ದೇಶಪ್ರೇಮ, ರಾಷ್ಟ್ರಗೀತೆ ಗಾಯನ, ರಾಷ್ಟ್ರಧ್ವಜ ಮಾಹಿತಿ ಮೂಡಿಸುವುದರ ಜೊತೆಗೆ, ಹೊಸ ಸಮಿತಿಯ ಸಹಕಾರದೊಂದಿಗೆ ಸೇವಾದಳ ಭವನ ನಿರ್ಮಾಣಕ್ಕೆ ಮೊದಲ ಆದ್ಯತೆ ನೀಡಿ ಪ್ರಯತ್ನಿಸಲಾಗುವುದು ಎಂದು ಪ್ರಕಟಿಸಿದರು.
ರಾಜ್ಯ ಸಮಿತಿ ಸದಸ್ಯರಾಗಿ ಪುನರಾಯ್ಕೆಯಾದ ಬಿ.ಕೆ.ವೆಂಕಟ್‍ನಾರಾಯಣ್ ಮಾತನಾಡಿ, ಸೇವಾದಳ ಜಿಲ್ಲಾ ಭವನ ನಿರ್ಮಾಣಕ್ಕೆ ಕೇಂದ್ರ ಸಮಿತಿಯಿಂದ 25 ಲಕ್ಷ ರೂಪಾಯಿಗಳ ಅನುದಾನ ಠೇವಣಿಯಾಗಿ ಇಡಲಾಗಿದ್ದು, ನಿವೇಶನ ದೊರೆಯುತ್ತಿದ್ದಂತೆಯೇ ಭವನ ನಿರ್ಮಾಣ ಕಾರ್ಯ ನಡೆಸಲಾಗುವುದು ಎಂದರು.
ಜಿಲ್ಲಾ ಕಾರ್ಯದರ್ಶಿಯಾಗಿ ಪುನರಾಯ್ಕೆಯಾದ ಎಸ್.ಸುಧಾಕರ್ ಮಾತನಾಡಿ, ಸೇವೆಗಾಗಿ ಬಾಳು ಧ್ಯೇಯದೊಂದಿಗೆ ಸೇವಾದಳವನ್ನು ಜಿಲ್ಲೆಯಲ್ಲಿ ಸಂಘಟಿಸಲಾಗುತ್ತಿದ್ದು, ಗಾಂ„ೀಜಿ ಮತ್ತು ಹರ್ಡೀಕರ್‍ರ ಸರಳ ತತ್ವಗಳೊಂದಿಗೆ ಸಂಘಟನೆಯನ್ನು ಮುನ್ನಡೆಸಲಾಗುತ್ತಿದೆಯೆಂದರು.
ಇದೇ ಸಂದರ್ಭದಲ್ಲಿ ನೂತನ ಸಮಿತಿ ಸದಸ್ಯರನ್ನು ಸರ್ವಾನುಮತದಿಂದ ಆಯ್ಕೆಮಾಡಲಾಯಿತು.
ಭಾರತ ಸೇವಾದಳ ನೂತನ ಜಿಲ್ಲಾಧ್ಯಕ್ಷರಾಗಿ ಕೆ.ಎಸ್.ಗಣೇಶ್, ಕಾರ್ಯದರ್ಶಿಯಾಗಿ ಎಸ್.ಸುಧಾಕರ್, ರಾಜ್ಯ ಕೇಂದ್ರ ಸಮಿತಿ ಸದಸ್ಯರಾಗಿ ಬಿ.ಕೆ.ವೆಂಕಟ್‍ನಾರಾಯಣ್, ಗೌರವಾಧ್ಯಕ್ಷರಾಗಿ ಸಿಎಂಆರ್ ಶ್ರೀನಾಥ್, ಕಾರ್ಯಾಧ್ಯಕ್ಷರಾಗಿ ಮುಳಬಾಗಿಲಿನ ಜಗನ್ನಾಥ್, ಜಿಲ್ಲಾ ಸಂಚಾಲಕರಾಗಿ ಮಾಲೂರಿನ ಬಹಾದ್ದೂರ್ ಸಾಬ್‍ರನ್ನು ಆಯ್ಕೆಮಾಡಲಾಯಿತು.
ಜಿಲ್ಲಾ ಸಮಿತಿ ಉಪಾಧ್ಯಕ್ಷರಾಗಿ ಜಿ.ಶ್ರೀನಿವಾಸ್, ಕೋಶಾಧ್ಯಕ್ಷರಾಗಿ ಎಂ.ನಾಗರಾಜ್, ಸಂಘಟನಾ ಕಾರ್ಯದರ್ಶಿಯಾಗಿ ಶ್ರೀನಿವಾಸಪುರದ ರವಿಕುಮಾರ್‍ರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ಸಭೆಯಲ್ಲಿ ಇತರೇ ಸದಸ್ಯರಾದ ಕೆ.ಜಯದೇವ್, ಸೋಮಶೇಖರರೆಡ್ಡಿ, ಚಿನ್ನಿ ವೆಂಕಟೇಶ್, ಕಲಾವತಿ, ಶ್ರೀನಿವಾಸಪುರ ತಾಲೂಕು ಅಧ್ಯಕ್ಷ ಬಂಗವಾದಿ ನಾಗರಾಜ್ ಇತರರು ಉಪಸ್ಥಿತರಿದ್ದರು.
ನೂತನ ಸಮಿತಿ ಸದಸ್ಯರನ್ನು ಕೋಲಾರ ರೋಟರಿ ಸೆಂಟ್ರಲ್‍ವತಿಯಿಂದ ಸಿ.ಎಂ.ಆರ್ ಶ್ರೀನಾಥ್ ಸನ್ಮಾನಿಸಿದರು. ಸೇವಾದಳ ಜಿಲ್ಲಾ ಸಂಘಟಕ ದಾನೇಶ್ ಸಭೆಯನ್ನು ನಿರ್ವಹಿಸಿದರು.