

ಶ್ರೀನಿವಾಸಪುರ: ಕೃಷ್ಣ ಜನ್ಮಾಷ್ಟಮಿ ಭಾರತೀಯ ಸಾಂಸ್ಕøತಿಕ ಪರಂಪರೆಯಲ್ಲಿ ಆಚರಿಸುವ ದೊಡ್ಡ ಹಬ್ಬ. ಪ್ರತಿಯೊಬ್ಬರೂ ಶ್ರದ್ಧಾ ಭಕ್ತಿಯಿಂದ ಕೃಷ್ಣ ನಾಮ ಜಪಿಸಿ, ಶಾಂತಿ ಹಾಗೂ ಸಮೃದ್ಧಿಗಾಗಿ ಪ್ರಾರ್ಥಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಂ.ವಿ.ಶ್ರೀನಿವಾಸ್ ಹೇಳಿದರು.
ಪಟ್ಟಣದಲ್ಲಿ ತಾಲ್ಲೂಕು ಯಾದವರ ಸಂಘದಿಂದ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಬುಧವಾರ ಏರ್ಪಡಿಸಿದ್ದ ಕೃಷ್ಣನ ಭಾವ ಚಿತ್ರ ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿದ ಅವರು, ಆಧ್ಯಾತ್ಮ ಮನಸ್ಸಿಗೆ ನೆಮ್ಮದಿ ನೀಡುತ್ತದೆ. ಆದ್ದರಿಂದಲೇ ತಾಲ್ಲೂಕಿನ ಯಾದವ ಸಮುದಾಯ ಮಳೆ, ಬೆಳೆ ಹಾಗೂ ಸಮೃದ್ಧ ಬದುಕು ಬಯಸಿ ಮೆರವಣಿಗೆ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು.
ತಾಲ್ಲೂಕು ಯಾದವರ ಸಂಘದ ಅಧ್ಯಕ್ಷ ಅಯ್ಯಪ್ಪ, ಪ್ರಧಾನ ಕಾರ್ಯದರ್ಶಿ ಕೆ.ಎನ್.ಗೋವಿಂದಪ್ಪ, ನಾರಾಯಣಸ್ವಾಮಿ, ರಾಧಾಕೃಷ್ಣ, ಕೆ.ಎಸ್.ವೆಂಕಟರಮಣ, ಬಾಲಾಜಿ, ಜಗದೀಶ್, ಹರೀಶ್ ಯಾದವ್, ರಮೇಶ್, ಮಂಜುನಾಥ್, ದೇವರಾಜ್, ಮೋಹನ್ ಕುಮಾರ್, ಆವಲಪ್ಪ, ಆದಿನಾರಾಯಣ, ಎಚ್.ವಿ.ನಾರಾಯಣಸ್ವಾಮಿ ಇದ್ದರು.
ಮೆರವಣಿಗೆ: ಪಟ್ಟಣದ ಮುಳಬಾಗಿಲು ವೃತ್ತದಿಂದ ಎಂ.ಜಿ.ರಸ್ತೆಯಲ್ಲಿ ಕೃಷ್ಣ ಭಾವ ಚಿತ್ರಗಳ ಅಲಂಕೃತ ಪಲ್ಲಕಿ ಮೆರವಣಿಗೆ ಏರ್ಪಡಿಸಲಾಗಿತ್ತು. ತಾಲ್ಲೂಕಿನ ಬೇರೆ ಬೇರೆ ಕಡೆಗಳಿಂದ ಯಾದವ ಸಮುದಾಯದವರು ತಂದಿದ್ದ ಹತ್ತಾರು ಪಲ್ಲಕಿಗಳು ಮೆರವಣಿಗೆಯಲ್ಲಿ ಭಾಗವಹಿಸಿದ್ದವು. ಮೆರವಣಿಗೆ ಉದ್ದಕ್ಕೂ ಡೊಳ್ಳು ಕುಣಿತ ಮತ್ತಿತರ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿತ್ತು. ಸಮುದಾಯದ ಮುಖಂಡರು ಹಾಗೂ ನಾಗರಿಕರು ಮೆರವಣಿಗೆ ಮುಂಚೂಣಿಯಲ್ಲಿ ಕಾಲ್ನಡಿಗೆಯಲ್ಲಿ ಸಾಗಿದ್ದರು.