JANANUDI.COM NEWORK
ಕೊಟೇಶ್ವರ, ಡಿ.15. “ಎಲ್ಲರೂ ಒಟ್ಟಾಗೋಣ, ದೇವರ ಮನೆಗೆ ಸಾಗೋಣ” ಎಂಬ ಧ್ಯೇಯ ವಾಕ್ಯದೊಂದಿಗೆ ಕೊಟೇಶ್ವರ ಸಂತ ಅಂತೋನಿ ಚರ್ಚಿನಲ್ಲಿ ವಾರ್ಷಿಕ ಮಹಾ ಹಬ್ಬವು ಭಕ್ತಿ ಸಡಗರ ಬಲಿದಾನದ ಅರ್ಪಿಸುವ ಮೂಲಕ ಆಚರಿಸಲಾಯಿತು.
“ನಾವು ಒಟ್ಟಾಗಿ ಇದ್ದರೆ ನಮ್ಮ ಪವಿತ್ರ ಸಭೆಯು ಭದ್ರವಾಗಿರುತ್ತದೆ, ಮೇರಿ ಮಾತೆಯ ಪ್ರಕಾರ ದೇವರ ವಾಕ್ಯಗಳಲ್ಲಿ ಅಪಾರ ಶಕ್ತಿಯಿದೆ, ದೇವರ ವಾಕ್ಯ ಯಾರು ಸ್ವೀಕರಿಸುತ್ತಾರೊ ಅವರ ಬಾಳು ಸಾರ್ಥಕತೆಯಾಗುತ್ತೆ” ಎಂದು ಮಂಗಳೂರು ಕಾರ್ಮೆಲ್ ಗುಡ್ಡದ ಬಾಲ ಯೇಸು ಪುಣ್ಯ ಕ್ಷೇತ್ರದಲ್ಲಿ ಸೇವೆ ನೀಡುತ್ತಿರುವ ಧರ್ಮಗುರು ವಂ| ಡಾ. ರುಡೊಲ್ಫ್ ರಾಜ್ ಪಿಂಟೊ’ ಮಹಾ ಹಬ್ಬದ ಬಲಿದಾನ ಅರ್ಪಿಸಿ ಸಂದೇಶ ನೀಡಿದರು. “ಹೊಸ ಒಡಂಬಡಿಕೆಯಲ್ಲಿ ಯೇಸು ಕ್ರಿಸ್ತರ ಆಗಮನದಿಂದ ದೇವರ ವಾಕ್ಯಗಳು ಸಂಪೂರ್ಣಗೊಂಡವು. ದೇವರು ನಮ್ಮ ಪಿತನಾದರೆ, ಪವಿತ್ರ ಸಭೆಯು ನಮ್ಮ ತಾಯಿಯಾಗಿರುವಳು, ನಮ್ಮ ಕುಟುಂಬ, ಮನೆಗಳು, ದೇವರ ವಾಕ್ಯಗಳ, ಭಕ್ತಿಯ, ಸದ್ಗುಣಗಳ ತರಬೇತಿ ಕೇಂದ್ರಗಳಾಗಬೇಕು, ನಮ್ಮಲ್ಲಿ ಕೊಂಚವಾದರೂ ಬದಲಾವಣೆಯಾಗಿ, ಎಲ್ಲರೂ ಒಟ್ಟಾಗೋಣ, ದೇವರ ಮನೆಗೆ ಸಾಗೋಣ” ಅಂದರು.
ಸಂಭ್ರಮದ ಬಲಿದಾನದಲ್ಲಿ ಕುಂದಾಪುರ ವಲಯ ಪ್ರಧಾನರಾದ ಅ|ವಂ| ಸ್ಟ್ಯಾನಿ ತಾವ್ರೊ ಬಲಿದಾನದಲ್ಲಿ ಭಾಗಿಯಾಗಿ ಸಂದೇಶ ನೀಡಿದರು. ಕೊಟೇಶ್ವರ ಚರ್ಚಿನ ಧರ್ಮಗುರು ವಂ|ಸಿರಿಲ್ ಎ. ಮಿನೇಜೆಸ್ ಹಬ್ಬದಲ್ಲಿ ಭಾಗಿಯಾಗಿ ಶುಭಾಶಯಗಳನ್ನು ಕೋರಿದರು. ಕಟ್ಕರೆ ಬಾಲ ಯೇಸುವಿನ ಆಶ್ರಮದ ಮುಖ್ಯಸ್ಥರಾದ ವಂ|ಧರ್ಮಗುರು ಆಲ್ವಿನ್ ಸಿಕ್ವೇರಾ, ಬಲಿದಾನಕ್ಕಾಗಿ ಅವರೆ ರಚಿಸಿದ ಭಕ್ತಿಗೀತೆಗಳಿಗೆ ಗಾಯನ ಪಂಗಡಕ್ಕೆ ನಿರ್ದೇಶನ ನೀಡಿದರು. ಕುಂದಾಪುರ ವಲಯದ ಧರ್ಮಗುರುಗಳು, ಅತಿಥಿ ಧರ್ಮಗುರುಗಳು ಮತ್ತು ಕಟ್ಕರೆ ಬಾಲಾ ಯೇಸುವಿನ ಕಾರ್ಮೆಲ್ ಮೇಳದ ಧರ್ಮಗುರುಗಳು, ಹಾಗೂ ಧರ್ಮಭಗಿನಿಯರು ಬಲಿದಾನದಲ್ಲಿ ಭಾಗಿಯಾಗಿದ್ದರು.