ವರದಿ : ಕೆ.ಜಿ.ವೈದ್ಯ,ಕುಂದಾಪುರ
ಕುಂದಾಪುರ : ಕೋಟೇಶ್ವರದ ಶ್ರೀ ಕೋಟಿಲಿಂಗೇಶ್ವರ ದೇವಸ್ಥಾನದಲ್ಲಿ ಮುಂಬರುವ ಫೆಬ್ರವರಿ 10 ರಿಂದ 17 ರವರೆಗೆ ನಡೆಸಲು ಉದ್ದೇಶಿಸಲಾಗಿರುವ ನೂತನ ಧ್ವಜಮರ ಪ್ರತಿಷ್ಠಾಪನೆ, ಬ್ರಹ್ಮಕಲಶೋತ್ಸವ ಮತ್ತು ವಿಶೇಷ ಶ್ರೀಮನ್ಮಹಾರಥೋತ್ಸವದ ತಯಾರಿಗಳಿಗಾಗಿ ಭಾನುವಾರ ಸಂಜೆ ದೇವಳ ವಠಾರದಲ್ಲಿ ವಿವಿಧ ಸಂಘ – ಸಂಸ್ಥೆಗಳವರೊಂದಿಗೆ ಸಮಾಲೋಚನಾ ಸಭೆಯನ್ನು ನಡೆಸಲಾಯಿತು.
ಬ್ರಹ್ಮ ಕಲಶೋತ್ಸವ ಸಮಿತಿಯ ಅಧ್ಯಕ್ಷ ಗೋಪಾಡಿ ಶ್ರೀನಿವಾಸ ರಾವ್ ಸಭೆಯನ್ನುದ್ದೇಶಿಸಿ ಮಾತನಾಡಿ, ಎರಡು ವರ್ಷಗಳ ಹಿಂದೆಯೇ ನಡೆಯಬೇಕಿದ್ದ ಈ ಸಮಾರಂಭ ಕೊರೊನಾ ಕಾರಣದಿಂದ ಇದೀಗ ನಡೆಯುತ್ತಿದೆ. ಕೋಟಿಲಿಂಗೇಶ್ವರನಿಗೆ ಇದೇ ಪ್ರಶಸ್ತ ಕಾಲ ಎಂಬುದು ಇದರರ್ಥ. ನೂತನ ಧ್ವಜ ಸ್ತ0ಭ ಸ್ಥಾಪನೆ ಮತ್ತು ಬ್ರಹ್ಮ ಕಲಶ ನೆರವೇರಿಸಿದರೆ ವಿಶೇಷ ರಥೋತ್ಸವವೂ ಆಗಬೇಕು ಎಂಬುದು ಶಾಸ್ತ್ರ. ಅದರಂತೆ ಈ ಸಮಾರಂಭಗಳನ್ನು ಎಲ್ಲ ಧಾರ್ಮಿಕ ಮತ್ತು ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಸಂಪನ್ನಗೊಳಿಸಲು ಯೋಜಿಸಲಾಗಿದೆ. 70 ವರ್ಷಗಳಿಗೊಮ್ಮೆ ಬರುವ ಈ ಸಮಾರಂಭದಲ್ಲಿ ಈಗಿನ ತಲೆಮಾರುಗಳವರು ಶ್ರದ್ಧೆಯಿಂದ ತೊಡಗಿಸಿಕೊಳ್ಳಲು ಇದೊಂದು ಜೀವಮಾನದ ಸುವರ್ಣಾವಕಾಶ. ಕೋಟೇಶ್ವರ ಮತ್ತು 14 ಗ್ರಾಮಗಳ ಮೂಲದವರು ದೇಶ – ವಿದೇಶಗಳಲ್ಲೂ ಉಚ್ಚ್ರಾಯ ಸ್ಥಿತಿಗೆ ಬರಲು ಕೋಟಿಲಿಂಗೇಶ್ವರನ ಕೃಪೆಯೇ ಕಾರಣ. ಈ ಸುಸಂದರ್ಭದಲ್ಲಿ ನಾವೆಲ್ಲ ಒಂದಾಗಿ ಆತನಿಗೆ ನಮ್ಮ ಸೇವೆಯ ಮೂಲಕ ಕೃತಜ್ಞತೆ ಸಲ್ಲಿಸಲು ಇದೊಂದು ಸದವಕಾಶ. ಆದ್ದರಿಂದ ಈ ಯೋಜಿತ ಉತ್ಸವಗಳು ಸರ್ವಾಂಗ ಸುಂದರವಾಗಿ, ಯಾವ ಲೋಪಗಳೂ ಬಾರದಂತೆ, ಮುಂದಿನ ತಲೆಮಾರಿನವರೂ ಸ್ಮರಿಸಿಕೊಳ್ಳುವಂತೆ ಯಶಸ್ವಿಗೊಳಿಸುವುದು ಭಕ್ತರಾದ ನಮ್ಮೆಲ್ಲರ ಜವಾಬ್ದಾರಿ ಎಂದು ವಿವರಿಸಿ, ಸರ್ವರ ಸಹಕಾರ ಕೋರಿದರು.
ಈಗಾಗಲೇ ಕೆಲಸ ಕಾರ್ಯಗಳ ಸುಗಮ ನಿರ್ವಹಣೆಗಾಗಿ 23 ವಿವಿಧ ಸಮಿತಿಗಳನ್ನು ರಚಿಸಲಾಗಿದೆ. ಕೋಟಿಲಿಂಗೇಶ್ವರಣ ಎಲ್ಲ ಭಕ್ತಾಭಿಮಾನಿಗಳ ಈ ಉತ್ಸವವೆಂಬ ರೈಲು ಬಂಡಿಗೆ ತಾನು ಚಾಲಕ ಮಾತ್ರ. ಇದರ ಸುಗಮ ಮತ್ತು ಸುರಕ್ಷಿತ ಓಟಕ್ಕೆ ನಿಮ್ಮೆಲ್ಲರ ತುಂಬು ಸಹಕಾರ ಅತ್ಯಾವಶ್ಯ ಎಂಬುದನ್ನು ಮನದಟ್ಟು ಮಾಡಿದ ಶ್ರೀನಿವಾಸ ರಾವ್, ಎಲ್ಲ ಸಂಘ – ಸಂಸ್ಥೆಗಳವರ ಸಕ್ರಿಯ ಸಹಭಾಗಿತ್ವಕ್ಕಾಗಿ ಮನವಿ ಮಾಡಿದರು.
ದೇವಳ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎಂ. ಪ್ರಭಾಕರ ಶೆಟ್ಟಿ ಸಭಾಧ್ಯಕ್ಷತೆ ವಹಿಸಿದ್ದರು. ತಂತ್ರಿ ಪ್ರಸನ್ನ ಕುಮಾರ ಐತಾಳ ಧಾರ್ಮಿಕ ವಿಧಿಗಳ ವಿವರ ನೀಡಿದರು.
ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಕೋಣಿ ಕೃಷ್ಣದೇವ ಕಾರಂತ ಜೀರ್ಣೋದ್ಧಾರ ಕಾರ್ಯಗಳ ವಿವರ ನೀಡಿ, ಸರ್ವರ ಸಹಕಾರ ಕೋರಿದರು. ಸಮಿತಿಯ ಮಾಜಿ ಸದಸ್ಯ ಡಾ. ಸುಧಾಕರ ನಂಬಿಯಾರ್, ಶ್ರೀ ಮಹಾಂಕಾಳಿ ದೇವಳದ ಅಧ್ಯಕ್ಷ ಜಯಾನಂದ ಖಾರ್ವಿ, ವಿವಿಧ ಸಂಘ – ಸಂಸ್ಥೆಗಳ ಮುಖ್ಯಸ್ಥರು ಮಾತನಾಡಿ ಸಲಹೆ ನೀಡಿದರು.
ಶಿಲ್ಪಿ ರಾಜಗೋಪಾಲ ಆಚಾರ್ಯ, ಜನಪ್ರತಿನಿಧಿಗಳು, ವ್ಯವಸ್ಥಾಪನಾ ಸಮಿತಿ ಸದಸ್ಯರು, ಅರ್ಚಕ ವೃಂದದವರು, ವಿವಿಧ ದೇವಳ ಸಮಿತಿ ಮುಖ್ಯಸ್ಥರು ಸಭೆಯಲ್ಲಿ ಉಪಸ್ಥಿತರಿದ್ದರು.
ಜೀರ್ಣೋದ್ಧಾರ ಸಮಿತಿ ಕಾರ್ಯದರ್ಶಿ ಪ್ರಭಾಕರ ಗಾಣಿಗ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು. ಬ್ರಹ್ಮ ಕಲಶೋತ್ಸವ ಸಮಿತಿ ಕಾರ್ಯದರ್ಶಿ ಸುರೇಶ್ ಶೇರೆಗಾರ್ ವಂದಿಸಿದರು.