

ಕೋಟೇಶ್ವರ:ಸಂಘಟನೆ ಕಟ್ಟಿದವರಿಗೆ ಗೊತ್ತು ಅದರ ಕಷ್ಟ. ಆದರೆ ಕಷ್ಟವಿದ್ದರೂ ಸಂಘಟನೆಯ ಉದ್ದೇಶಗಳು ಸಾರ್ಥಕ್ಯಗೊಂಡಾಗ ಮನಸ್ಸಿಗೆ ಖುಷಿಯಾಗುತ್ತದೆ. ಇದರಿಂದ ಉಪಕಾರ ಪಡೆದ ಒಂದಷ್ಟು ಮಂದಿ ಈ ಸಂಘಟನೆಯನ್ನು ಬೆಳೆಸುವಲ್ಲಿ ಸಹಕರಿಸಬೇಕು ಎಂದು ಬ್ರಹ್ಮಾವರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ರಾಮಚಂದ್ರ ಐತಾಳ್ ಗುಂಡ್ಮಿ ಹೇಳಿದರು.
ಅವರು ಗಾಣಿಗ ಯುವ ಸಂಘಟನೆ ಮತ್ತು ಮಹಿಳಾ ಸಂಘಟನೆ ಕೋಟೇಶ್ವರ ಘಟಕದ ಆಶ್ರಯದಲ್ಲಿ ಬೀಜಾಡಿ ಮಿತ್ರಸೌಧದಲ್ಲಿ ನಡೆದ ವಲಯ ಅಧಿವೇಶನ, ವಿದ್ಯಾರ್ಥಿಗಳಿಗೆ ಉಚಿತ ನೋಟ್ಸ್ ಪುಸ್ತಕ,ಕೊಡೆ ವಿತರಣೆ, ಪ್ರತಿಭಾ ಪುರಸ್ಕಾರ, ಸಾಧಕರಿಗೆ ಸನ್ಮಾನ ಸಮಾರಂಭದಲ್ಲಿ ಅತಿಥಿಗಳಾಗಿ ಆಗಮಿಸಿ ಮಾತನಾಡಿದರು.
ಸಮಾರಂಭದ ಅಧ್ಯಕ್ಷತೆಯನ್ನು ಗಾಣಿಗ ಯುವ ಸಂಘಟನೆ ಕೋಟೇಶ್ವರ ಘಟಕ ಅಧ್ಯಕ್ಷ ನಾಗರಾಜ ಬಿ.ಜಿ ವಹಿಸಿದ್ದರು. ಸಾಧಕ ವಿದ್ಯಾರ್ಥಿಗಳಿಗೆ ಕುಂದಾಪುರ ತಾಲೂಕು ಗಾಣಿಗ ಸೇವಾ ಸಂಘದ ಅಧ್ಯಕ್ಷ ಕೆ.ಸತೀಶ್ ಗಾಣಿಗ ಸನ್ಮಾನಿಸಿ ಗೌರವಿಸಿದರು. ಉಡುಪಿ ಜಿಲ್ಲಾ ಸೋಮಕ್ಷತ್ರಿಯ ಗಾಣಿಗ ಸಮಾಜದ ಪ್ರಧಾನ ಕಾರ್ಯದರ್ಶಿ ನಾಗರಾಜ ಗಾಣಿಗ ಸಾಲಿಗ್ರಾಮ ಸಮುದಾಯದ ಸಾಧಕರನ್ನು ಸನ್ಮಾನಿಸಿದರು. ಕುಂದಾಪುರ ಗಾಣಿಗ ಪ್ರಕಾಶನದ ಅಧ್ಯಕ್ಷ ರವಿರಾಜ್ ಕುಂಭಾಶಿ ಅತಿಥಿಗಳಾಗಿ ಆಗಮಿಸಿ ಶುಭ ಹಾರೈಸಿದರು.
ಇದೇ ಸಂದರ್ಭದಲ್ಲಿ ಸಮುದಾಯದ ಸಾಧಕರಾದ ಸಾಗರ ನಗರಸಭೆಯ ಉಪಾಧ್ಯಕ್ಷೆ ಸವಿತಾ ವಾಸು, ಗಂಗೊಳ್ಳಿ ಗ್ರಾಮ ಪಂಚಾಯಿತಿ ಸದಸ್ಯೆ ಮಮತಾ ಗಾಣಿಗ, ಯಕ್ಷಗಾನ ಅಕಾಡೆಮಿ ಪ್ರಶಸ್ತಿ ಪುರಸ್ಕøತ ಯಕ್ಷಗಾನ ಕಲಾವಿದ ವಿಶ್ವನಾಥ ಗಾಣಿಗ ಕೋಡಿ, ಕೋಟೇಶ್ವರ ದೊಡ್ಡೋಣಿ ನೀರೇಶ್ವಾಲ್ಯ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಸದಸ್ಯೆ ನಯನ ಸತೀಶ್, ಮಲ್ಲಿಗೆ ಕೃಷಿ ತರಬೇತಿದಾರರಾದ ಕಲಾವತಿ ಅಚ್ಯುತ ಗಾಣಿಗ, ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಎರಡನೇ ಸ್ಥಾನ ಪಡೆದ ಸುಶ್ಮಿತಾ ಎಸ್ ಗಾಣಿಗ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಎಸ್ಎಸ್ಎಲ್ಸಿ ಮತ್ತು ದ್ವಿತೀಯ ಪಿಯುಸಿಯಲ್ಲಿ ಶೇ.80ಕ್ಕಿಂತ ಅಧಿಕ ಅಂಕ ಪಡೆದ ಕೋಟೇಶ್ವರ, ಕುಂಬ್ರಿ-ಬಡಾಕೆರೆ, ಹೋದ್ರಾಳಿ, ದೊಡ್ಡೋಣಿ, ಮಾರ್ಕೋಡು, ಕಟ್ಕೆರೆ, ಬೀಜಾಡಿ, ಗೋಪಾಡಿ, ಮೂಡುಗೋಪಾಡಿ, ಕುಂಭಾಶಿ ವ್ಯಾಪ್ತಿಯ ಸಮುದಾಯದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.ಒಂದರಿಂದ ಹತ್ತನೇ ತರಗತಿಯಲ್ಲಿ ಓದುವ ಸರಕಾರಿ ಮತ್ತು ಅನುದಾನಿತ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ನೋಟ್ಸ್ ಪುಸ್ತಕ,ಕೊಡೆ ವಿತರಿಸಲಾಯಿತು. ಪಹಲ್ಗಾಮ್ ದಾಳಿಯಲ್ಲಿ ಹುತಾತ್ಮರಾದ ಸೈನಿಕ ಹಾಗೂ ಭಾರತೀಯರಿಗೆ ಮಾಜಿ ಸೈನಿಕ ರಾಮಚಂದ್ರ ಗಾಣಿಗ ನುಡಿನಮನ ಸಲ್ಲಿಸಿದರು. ಮಹಿಳಾ ಸಂಘಟನೆಯ ಅಧ್ಯಕ್ಷೆ ಸವಿತಾ ಗಾಣಿಗ,ಕಾರ್ಯದರ್ಶಿ ವೀಣಾ ರಾವ್, ಯುವ ಸಂಘಟನೆ ಗೌರವಾಧ್ಯಕ್ಷ ಸುಧಾಕರ ಗಾಣಿಗ ಉಪಸ್ಥಿತರಿದ್ದರು.
ಯುವ ಸಂಘಟನೆಯ ಕೋಶಾಧಿಕಾರಿ ಎಸ್.ಎನ್.ಗೋಪಿರಾಜ್ ಸ್ವಾಗತಿಸಿದರು. ಕಾರ್ಯದರ್ಶಿ ಮಹೇಶ್ ಗಾಣಿಗ ಸಾಧಕ ವಿದ್ಯಾರ್ಥಿಗಳ ಪಟ್ಟಿ ವಾಚಿಸಿದರು. ಮಹಿಳಾ ಸಂಘಟನೆಯ ಕೋಶಾಧಿಕಾರಿ ಸೌಮ್ಯನಾರಾಯಣ ವಂದಿಸಿದರು.ಪತ್ರಕರ್ತ ಚಂದ್ರಶೇಖರ ಬೀಜಾಡಿ ಕಾರ್ಯಕ್ರಮ ನಿರೂಪಿಸಿದರು.