ಕೋಟ – ‘ಹೊಳಪು’ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪನವರ ಕೋವಿಡ್ ನಿಯಮಾವಳಿ ಉಲಂಘನೆ

JANANUDI.COM NETWORK


ಕುಂದಾಪುರ: ಕೊರೋನಾ ಸೋಂಕಿತರ ಸಂಖ್ಯೆ ದಿಢೀರ್ ಹೆಚ್ಚಳಗೊಂಡ ಬೆನ್ನಲ್ಲೇ ರಾಜ್ಯದಲ್ಲಿ ಶನಿವಾರದಿಂದ ಸಾರ್ವಜನಿಕ ಕಾರ್ಯಕ್ರಮಗಳಿಗೆ ಬಿಗಿ ನಿರ್ಬಂಧ ಹೇರುವಂತೆ ಮುಖ್ಯಮಂತ್ರಿ ಯಡಿಯೂರಪ್ಪನವರು ಸ್ಪಷ್ಟ ಆದೇಶ ಹೊರಡಿಸಿದರೂ,ಶನಿವಾರ ಕೋಟ ವಿವೇಕ ಪದವಿಪೂರ್ವ ಕಾಲೇಜು ಮೈದಾನದಲ್ಲಿ ನಡೆದ ದ.ಕ, ಉಡುಪಿ ಜಿಲ್ಲೆಯ ಜನಪ್ರತಿನಿಧಿಗಳಿಗೆ ಆಯೋಜಿಸಿದ್ದ ಹೊಳಪು ಕ್ರೀಡಾಕೂಟದಲ್ಲಿ ಸರ್ಕಾರದ ಕೋವಿಡ್ ನಿಯಮಾವಳಿಗಳನ್ನು ಉಲ್ಲಂಘಿಸಿ ಸರ್ಕಾರವನ್ನು ಪ್ರತಿನಿಧಿಸುವ ಜನಪ್ರತಿನಿಧಿಗಳೇ ಈಕಾರ್ಯಕ್ರಮದಲ್ಲಿ ಭಾಗಿಯಾಗಿ ಕೋವಿಡ್ ನಿಯಮಾವಳಿಯನ್ನು ಗಾಳಿಗೆ ತೂರಿದ್ದಾರೆ. ಜಿಲ್ಲೆಯಲ್ಲಿ ಕೊರೋನಾ ಮರೆತ ಜನಪ್ರತಿನಿಧಿಗಳ ವಿರುದ್ದ ಇದೀಗ ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ.
ಹೊಳಪು ಕ್ರೀಡಾಕೂಟದಲ್ಲಿ ಅವಿಭಜಿತ ದ.ಕ ಜಿಲ್ಲೆಯ ಸುಮಾರು ಮೂರುಸಾವಿರಕ್ಕೂ ಅಧಿಕ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಭಾಗಿಯಾಗಿದ್ದಾರೆ. ಪ್ರತೀ ವರ್ಷವೂ ಅತ್ಯಂತ ಶಿಸ್ತು ಹಾಗೂ ಅಚ್ಚುಕಟ್ಟಿನಿಂದ ನಡೆಯುತ್ತಿದ್ದ ಹೊಳಪು ಕಾರ್ಯಕ್ರಮ ಈ ಭಾರಿ ಭಾರೀ ಆಡಂಬರದ ಹೊರತಾಗಿಯೂ ಅಶಿಸ್ತು, ಸಾಮಾಜಿಕ ಅಂತರ ಮರೆತು ನೂಕುನುಗ್ಗಲು, ತಳ್ಳಾಟಗಳು ಅವ್ಯವಸ್ಥೆಯ ಆಗರವಾಗಿ ಮಾರ್ಪಟ್ಟಿದೆ. ಹೊಳಪು ಕ್ರೀಡಾಕೂಟಕ್ಕೆ ಪ್ರವೇಶಿಸುವ ಪ್ರವೇಶ ದ್ವಾರದಲ್ಲಿ ಮಾಸ್ಕ್ ಹಾಗೂ ಸ್ಯಾನಿಟೈಝರ್ಗಳನ್ನು ಇಡದೆ ಸರ್ಕಾರದ ಕೋವಿಡ್ ಮಾರ್ಗಸೂಚಿಯನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ.
ರಾಜ್ಯ ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿಯವರ ಮುಂದಾಳತ್ವದಲ್ಲಿ ನಡೆದ ಹೊಳಪು ಕಾರ್ಯಕ್ರಮಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ, ದ.ಕ ಸಂಸದ ನಳೀನ್ ಕುಮಾರ್ ಕಟೀಲ್ ಸೇರಿದಂತೆ ವಿವಿಧ ತಾಲೂಕು ಪಂಚಾಯತ್, ಗ್ರಾಮಪಂಚಾಯತ್, ಪುರಸಭೆ, ನಗರಸಭೆ, ಜಿಲ್ಲಾ ಪಂಚಾಯತ್ ಪ್ರತಿನಿಧಿಗಳು ಭಾಗಿಯಾಗಿದ್ದಾರೆ
.