ಕುಂದಾಪುರ: ಖ್ಯಾತ ವಿದ್ವಾಂಸ, ರಂಗ ನಿರ್ದೇಶಕ, ಸಾಹಿತಿ, ವಾಚಿಕಾಭಿನಯಪಟು ಕೊರ್ಗಿ ಶಂಕರನಾರಾಯಣ ಉಪಾಧ್ಯಾಯರಿಗೆ “ಕುಂದಪ್ರಭ” ಸಂಸ್ಥೆಯ ಆಶ್ರಯದಲ್ಲಿ ನೀಡಲಾಗುವ ಕೋ. ಮ. ಕಾರಂತ ಪ್ರಶಸ್ತಿಯನ್ನು ಆದಿತ್ಯವಾರ ಜ.7 ರಂದು ಪ್ರದಾನ ಮಾಡಲಾಯಿತು.ಕುಂದಾಪುರ ಸರಕಾರಿ ಪದವಿ ಪೂರ್ವ ಕಾಲೇಜಿನ ರೋಟರಿ ಲಕ್ಷ್ಮೀನರಸಿಂಹ ಕಲಾ ಮಂದಿರದಲ್ಲಿ ನಡೆದ ಸಮಾರಂಭವನ್ನು ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದ ವಿಶ್ರಾಂತ ಆಡಳಿತ ಮೊಕ್ತೇಸರರೂ, ಪ. ಪೂ. ಕಾಲೇಜಿನ ನಿವೃತ್ತ ಪ್ರಾಂಶುಪಾಲರೂ ಆದ ಕೆ. ಸೂರ್ಯನಾರಾಯಣ ಉಪಾಧ್ಯಾಯರು ಉದ್ಘಾಟಿಸಿದರು.
ಕರ್ನಾಟಕ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ. ಜಯಪ್ರಕಾಶ ಹೆಗ್ಡೆ ಅಧ್ಯಕ್ಷತೆ ವಹಿಸಿ ಪ್ರಶಸ್ತಿ ಪ್ರದಾನ ಮಾಡಿದರು. “ಯಾವುದೇ ಕ್ಷೇತ್ರದಲ್ಲಾಗಲಿ ಅರ್ಹರಿಗೆ ಅವಕಾಶ, ಗೌರವ ಲಭಿಸಿದರೆ ಸಂತೋಷವಾಗುತ್ತದೆ. ಪ್ರಶಸ್ತಿಗಾಗಿ ಲಾಬಿ ಮಾಡುವವರು, ಅರ್ಹತೆ ಇಲ್ಲದಿದ್ದರೂ ಪ್ರಶಸ್ತಿ ಸ್ವೀಕರಿಸುವವರನ್ನು ನಾವು ಕಾಣುತ್ತಿದ್ದೇವೆ. ಹಲವರು ಅರ್ಹತೆ ಇದ್ದರೂ ಪ್ರಶಸ್ತಿ ಗೌರವಗಳ ಬಗ್ಗೆ ಚಿಂತೆ ಮಾಡುವುದಿಲ್ಲ. ಆದರೆ ಪ್ರಶಸ್ತಿಯೇ ಅವರನ್ನು ಹುಡುಕಿಕೊಂಡು ಬಂದಾಗ ಸಂತೋಷ ಪಡುತ್ತಾರೆ. ಕೊರ್ಗಿ ಶಂಕರನಾರಾಯಣ ಉಪಾಧ್ಯಾಯರು ಪ್ರಶಸ್ತಿಗಾಗಿ ಸಾಧನೆ ಮಾಡಿದವರಲ್ಲ. ಕೋ. ಮ. ಕಾರಂತ ಪ್ರಶಸ್ತಿಗೆ ಇಂತಹ ಸಾಧಕರನ್ನು ಹುಡುಕಿ ಆಯ್ಕೆ ಮಾಡಿರುವುದು ಸಂತೋಷ ಉಂಟು ಮಾಡಿತು.” ಎಂದು ಅಭಿನಂದಿಸಿದರು.
ಪ್ರಶಸ್ತಿ ಸ್ವೀಕರಿಸಿದ ಕೊರ್ಗಿ ಶಂಕರನಾರಾಯಣ ಉಪಾಧ್ಯಾಯ “ನಾನೇನು ಸಾಧಕನಲ್ಲ… ನಾನು ಸಾಹಿತ್ಯಿಕ, ಸಾಂಸ್ಕøತಿಕವಾಗಿ ಕಲಿತದ್ದೆಲ್ಲ ನನ್ನ ಕುಟುಂಬದ ಬಳುವಳಿ ಮತ್ತು ಕಲಿಯಬೇಕೆಂಬ ಆಸಕ್ತಿಯಿಂದ ಆದ ಸಾಧನೆಗಳು. ಹಿರಿಯ ಸಾಧಕರ ಹೆಜ್ಜೆಗಳನ್ನು ಗಮನಿಸಿ ನಾನು ಬೆಳೆದೆ. ಸಾಧನೆಗೆ ಏಕ ದಾರಿ ಎಂಬುವುದಿಲ್ಲ. ಬಂದ ಅವಕಾಶವನ್ನು ಸವಾಲಾಗಿ ಸ್ವೀಕರಿಸಿ ಶ್ರಮಿಸಿದರೆ ಸಾಧನೆಯ ಹಾದಿ ತೆರೆದುಕೊಳ್ಳುತ್ತದೆ. ಬನ್ನಂಜೆ ಗೋವಿಂದ ಆಚಾರ್ಯ, ಕೋ. ಮ. ಕಾರಂತರ ಬರಹಗಳನ್ನು ಉಡುಪಿಯಲ್ಲಿರುವಾಗ ನಾನು ಓದುತ್ತಿದ್ದೆ. ಜೀವನದಲ್ಲಿ ಕೆಲವು ಕಡೆ ನಿನ್ನಿಂದ ಸಾಧ್ಯವೇ ಎಂಬ ಸವಾಲು ಎದುರಾದಾಗ ಸಂಗೀತ, ನೃತ್ಯ, ನಾಟಕ, ಸಾಹಿತ್ಯ ಎಲ್ಲ ಕ್ಷೇತ್ರಗಳಲ್ಲೂ ಪ್ರಾಮಾಣಿಕ ಪ್ರಯತ್ನ ನಡೆಸಿದೆ. ನನ್ನನ್ನು ನನ್ನೂರ ಜನರಿಗೆ ಪರಿಚಯಿಸಿ ಕೋ. ಮ. ಕಾರಂತ ಪ್ರಶಸ್ತಿ ಪ್ರದಾನ ಮಾಡಿದ “ಕುಂದಪ್ರಭ ಬಳಗ”ಕ್ಕೆ ನಾನು ಆಭಾರಿ.” ಎಂದು ಅಭಿನಂದಿಸಿದರು.
ಬೈಂದೂರು ಕ್ಷೇತ್ರದ ಶಾಸಕ ಗುರುರಾಜ ಗಂಟಿಹೊಳೆ ಕುಂದಾಪುರ ತಾಲೂಕಿನ ಗೃಹರಕ್ಷಕರನ್ನು ಗೌರವಿಸಿದರು.
ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ, ಮಾಜಿ ಶಾಸಕ ಬಿ. ಅಪ್ಪಣ್ಣ ಹೆಗ್ಡೆ, ಹಿರಿಯ ಉದ್ಯಮಿ ದತ್ತಾನಂದ ಗಂಗೊಳ್ಳಿ ಶುಭ ಹಾರೈಸಿದರು. ಶ್ರೀಮತಿ ಲಕ್ಷ್ಮೀ ಶಂಕರನಾರಾಯಣ ಉಪಾಧ್ಯಾಯರನ್ನು ಗೌರವಿಸಲಾಯಿತು.
ಸಾಧಕರ ಕಥೆಗಳನ್ನು ಬರೆದ ಪದವಿ, ಪದವಿ ಪೂರ್ವ ಹಾಗೂ ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ ಬಹುಮಾನ ಹಾಗೂ ಅಭಿನಂದನಾ ಪತ್ರ ವಿತರಿಸಲಾಯಿತು.
“ಕುಂದಪ್ರಭ” ಸಂಸ್ಥೆಯ ಅಧ್ಯಕ್ಷ ಯು.ಎಸ್.ಶೆಣೈ ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು.
ಅಂಕಣಗಾರ ಕೋ. ಶಿವಾನಂದ ಕಾರಂತರು ಸಹೋದರ ಕೋ. ಮ. ಕಾರಂತರ ಕುರಿತು ಮಾತನಾಡಿದರು. ತೆಂಕನಿಡಿಯೂರು ಪ. ಪೂ. ಕಾಲೇಜಿನ ಪ್ರಾಂಶುಪಾಲ ವಿಶ್ವನಾಥ ಕರಬ ನಿರೂಪಿಸಿದರು. ಕೋ. ರಮಾನಂದ ಕಾರಂತ, ಹಂದಕುಂದ ಸೋಮಶೇಖರ ಶೆಟ್ಟಿ, ಸುರೇಶ ಕೋಟೆಗಾರ್, ಯು. ಸಂಗೀತಾ ಶೆಣೈ, ಶ್ರೀನಿವಾಸ ಶೇಟ್ ವಿವಿಧ ಕಾರ್ಯಕ್ರಮ ನಿರ್ವಹಿಸಿದರು. ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳು ಕೊರ್ಗಿ ಶಂಕರನಾರಾಯಣ ಉಪಾಧ್ಯಾಯರಿಗೆ ಹಾರ ಅರ್ಪಿಸಿ, ಗೌರವಿಸಿದರು. ಕೊರ್ಗಿ ಶಂಕರನಾರಾಯಣ ಉಪಾಧ್ಯಾಯರ “ಅಪ್ಪಯ್ಯನ ಆಸ್ತಿಕತೆ” ಕೃತಿಗೆ ಬಹಳ ಬೇಡಿಕೆ ಬಂತು.
ಲೇಖಕ ಪಿ. ಜಯವಂತ ಪೈ ವಂದಿಸಿದರು. ವೇಣುಗೋಪಾಲ ಭಟ್ ಕೋಟೇಶ್ವರ ಅವರ ತಂಡದಿಂದ ಲಘು ಸಂಗೀತ ಕಾರ್ಯಕ್ರಮ ಜರುಗಿತು.