ಕೋಲಾರದಲ್ಲಿ ಅದ್ದೂರಿಯಾಗಿ ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್‍ರ 131ನೇ ಜಯಂತಿ ಆಚರಣೆ

ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ

ಕೋಲಾರ,ಏ.14: ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್‍ರ 131ನೇ ಜಯಂತಿಯನ್ನು ಕೋಲಾರದಲ್ಲಿ ಅದ್ದೂರಿಯಾಗಿ ಆಚರಿಸಲಾಯಿತು.
ಅಂಬೇಡ್ಕರ್ ಅವರ ಭಾವಚಿತ್ರಗಳನ್ನೊಳಗೊಂಡ ಜಯಂತಿ ಮೆರವಣಿಗೆಯನ್ನು ಎಂ.ಜಿ ರಸ್ತೆಯಲ್ಲಿ ನಗರದ ಅಂಜುಮನ್-ಎ-ಇಸ್ಲಾಮೀಯ ವತಿಯಿಂದ ಪುಷ್ಪಾರ್ಚನೆ ಮಾಡುವ ಮೂಲಕ ಭಾತೃತ್ವವನ್ನು ಮೆರೆದು ಗಮನ ಸೆಳೆದರು.
ಈ ಸಂದರ್ಭದಲ್ಲಿ ಮಾತನಾಡಿದ ಅಂಜುಮನ್-ಎ-ಇಸ್ಲಾಮೀಯ ಅಧ್ಯಕ್ಷ ಝಮೀರ್ ಅಹಮದ್, ಕ್ಲಾಕ್ ಟವರ್ ಪದೇ ಪದೇ ಚರ್ಚೆಗೆ ಗ್ರಾಸವಾಗುತ್ತಿದೆ. ನಮ್ಮ ಕೋಲಾರದಲ್ಲಿ ಹಿಂದೂ ಮುಸ್ಲಿಂ ಎಂಬ ಭೇದಭಾವ ಇಲ್ಲದೆ ಜೀವಿಸುತಿದ್ದೇವೆ. ರಾಜಕಾರಣಿಗಳು ತಮ್ಮ ಬೇಳೆ ಬೇಯಿಸಿಕೊಳ್ಳಲು ಒಗ್ಗಟ್ಟಿನಿಂದಿರುವ ಹಿಂದೂ ಮುಸ್ಲೀಮ್ ಜನಾಂಗದ ಮಧ್ಯೆ ವಿಷ ಬೀಜ ಬಿತ್ತಲು ಪ್ರಯತ್ನಪಡುತ್ತಿದ್ದಾರೆ. ಆದರೆ ಅದು ಸಾಧ್ಯವಿಲ್ಲವೆಂಬುದನ್ನು ಅವರು ಮನಗಾಣಬೇಕು.ಒಬ್ಬ ಜವಾಬ್ದಾರಿ ಸ್ಥಾನದಲ್ಲಿರುವ ವ್ಯಕ್ತಿ ಮಾತನಾಡುವಾಗ ತಮ್ಮ ಘನತೆಗೆ ತಕ್ಕ ಹಾಗೆ ಮಾತನಾಡಬೇಕೆ ವಿನಹ: ಪ್ರತಿ ಬಾರಿ ಕ್ಲಾಕ್ ಟವರ್ ವಿಷಯವನ್ನು ಪ್ರಾಸ್ತಾಪಿಸಿ ಅಣ್ಣತಮ್ಮಂದಿರಂತಿರುವ ನಮ್ಮುಗಳ ಮಧ್ಯೆ ಕಂದಕವನ್ನು ಸೃಷ್ಟಿಸಲು ಮುಸ್ಲೀಮ್ ಸಮುದಾಯದ ಬಗ್ಗೆ ಅಲ್ಲಸಲ್ಲದ ಆರೋಪ ಮಾಡುವುದನ್ನು ನಿಲ್ಲಿಸಲಿ ಎಂದು ಸಲಹೆ ನೀಡಿದರು.
ಎಲ್ಲಾ ಜನಾಂಗದವರನ್ನು ಪ್ರೀತಿಯಿಂದ ಕಾಣುವಂತಾಗಬೇಕೆ ಹೊರತು ದ್ವೇಷ ಸಾಧನೆಗೆ ಮುಂದಾಗಬಾರದು. ಮೊದಲು ಜಿಲ್ಲೆಯಲ್ಲಿ ಮಾಡಬೇಕಾದ ಅಭಿವೃದ್ಧಿ ಕೆಲಸಗಳನ್ನು ಮಾಡಲಿ. ಆಗ ಜನರೇ ಅವರನ್ನು ಮೆಚ್ಚುತ್ತಾರೆ ಅದನ್ನು ಬಿಟ್ಟು ಇಲ್ಲಸಲ್ಲದ ಆರೋಪಗಳನ್ನು ಮಾಡುವುದು ಬಿಡಬೇಕೆಂದರು.
ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ಅವರ ಜನ್ಮದಿನಾಚರಣೆ ಆಚರಿಸುತ್ತಿರುವುದು ನಮ್ಮಲ್ಲರಿಗೂ ಸಂತೋಷದ ವಿಷಯ. ಹಾಗೆಯೇ ಮುಂದಿನ ದಿನಗಳಲ್ಲಿ ಸಹ ನಾವೆಲ್ಲಾ ಅಣ್ಣತಮ್ಮಂದಿರಂತೆ ಒಗ್ಗಟ್ಟಾಗಿ ಇರುವುದರ ಜೊತೆಗೆ ನಮ್ಮ ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯರಾದ ನಸೀರ್ ಅಹಮದ್, ಎಂ.ಎಲ್ ಅನಿಲ್‍ಕುಮಾರ್, ಅಂಜುಮನ್-ಎ-ಇಸ್ಲಾಮೀಯ ಉಪಾಧ್ಯಕ್ಷ ಮುಸ್ತಫಾ, ಮುಸಾನಿ ಸೈಪ್ ವುಲ್ಲಾ, ನಾಗನಾಳ ಮುನಿಯಪ್ಪ, ಟಿ.ವಿಜಯಕುಮಾರ್, ನಾರಾಯಣಸ್ವಾಮಿ, ಡಿ.ಎಸ್.ಎಸ್ ಬಾಬು, ನಗರಸಭಾ ಸದಸ್ಯ ಅಂಬರೀಶ್, ವಕ್ಕಲೇರಿ ಅಂಜುಮನ್-ಎ-ಇಸ್ಲಾಮಿಯ ಇದ್ದರು
.