ಕೋಲಾರ : ಪತ್ರಕರ್ತರಿಗೆ ಸ್ವಾಭಿಮಾನವೇ ಸರ್ವಶ್ರೇಷ್ಟವಾಗಿದೆ. ಅದನ್ನು ಪ್ರತಿಯೊಬ್ಬರೂ ತಮ್ಮ ವೃತ್ತಿಯಲ್ಲಿ ಮಾತ್ರವಲ್ಲ ಜೀವನದಲ್ಲೂ ಅಳವಡಿಸಿಕೊಂಡು ಬೆಳೆಸುವಂತಾಗಬೇಕೆಂದು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ವಿ.ಗೋಪಿನಾಥ್ ಕರೆ ನೀಡಿದರು.
ನಗರದ ಪತ್ರಕರ್ತರ ಭವನದಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಪ್ರಥಮವಾಗಿ ಆಯೋಜಿಸಿದ್ದ ಡಿ.ವಿ.ಗುಂಡಪ್ಪನವರು ಮುಂಚೂಣಿಯಲ್ಲಿ ಪ್ರಪ್ರಥಮವಾಗಿ ರಾಜ್ಯದಲ್ಲಿ ಪತ್ರಕರ್ತರ ಸಂಘವನ್ನು ಸಂಘಟಿಸಿ ಸ್ಥಾಪಿಸಿದ 91ನೇ ವರ್ಷದ ಸಂಸ್ಥಾಪನಾ ದಿನಾಚರಣೆಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪತ್ರಕರ್ತರು ತಮ್ಮ ವೃತ್ತಿಯಲ್ಲಿ ಭೌತಿಕ ಗುಣಮಟ್ಟವನ್ನು ಕಾಯ್ದಕೊಂಡಾಗ ಮಾತ್ರ ಪತ್ರಿಕೆಗಳಿಗೊಂದಿಗೆ ತಮಗೂ ಸಮಾಜದಲ್ಲಿ ಗೌರವ ಲಭಿಸುವುದು, ಪತ್ರಿಕಾ ವೃತ್ತಿಯಲ್ಲಿ ವೈವಿಧ್ಯತೆಗಳನ್ನು ಕಾಪಾಡಿಕೊಳ್ಳುವ ಮೂಲಕ ಸಾರ್ಥಕಗೊಳಿಸಬೇಕು. ಪತ್ರಕರ್ತರಿಗೆ ಆತ್ಮ ಸಾಕ್ಷಿಗಿಂತ ಮತ್ತೊಂದು ಪ್ರಶಸ್ತಿಯ ಅಗತ್ಯವಿಲ್ಲ ಎಂದು ಕಿವಿ ಮಾತು ಹೇಳಿದರು.
ಇಂದು ಪತ್ರಿಕಾ ಕ್ಷೇತ್ರದಲ್ಲಿ ಗುಣ ಮಟ್ಟವನ್ನು ಕಾಯ್ದುಕೊಳ್ಳದೆ ಶೂನ್ಯವಾಗಿದ್ದು, ಪತ್ರಿಕಾ ಕ್ಷೇತ್ರವು ಒಂದು ಫ್ಯಾಷನ್ ಅಗಿ ಪರಿವರ್ತನೆಯಾಗುತ್ತಿದೆ. ಸಂಘದಲ್ಲಿನ ಸ್ಥಾನಮಾನಗಳನ್ನು ಅಧಿಕಾರವೆಂದು ಬಾವಿಸದೆ ಜವಾಬ್ದಾರಿ ಎಂದು ಭಾವಿಸಬೇಕು. ಸಂಘ, ಸಂಸ್ಥೆಗಳಲ್ಲಿ ಭಿನ್ನಮತಗಳು ಸಹಜವಾದರೂ ಸಂಘಟನೆಗೆ ಚ್ಯುತಿ ಬಾರದಂತೆ ಜಾಗೃತರಾಗಿ ಕೆಲಸ ನಿರ್ವಹಿಸ ಬೇಕೆಂದು ತಿಳಿಸಿದರು.
ಪತ್ರಿಕೆಗಳು ಸಮಾಜದ ಕಾವಲು ನಾಯಿಗಳಂತೆ ಕಾರ್ಯನಿರ್ವಹಿಸಬೇಕೆಂದು ಪತ್ರಕರ್ತರ ಸಂಘದ ಸಂಸ್ಥಾಪಕ ಡಿ.ವಿ.ಗುಂಡಪ್ಪನವರ ನಾಣ್ಮುಡಿಯನ್ನು ಪ್ರತಿಯೊಬ್ಬ ಪತ್ರಕರ್ತರು ತಮ್ಮ ವೃತ್ತಿಯಲ್ಲಿ ಅಳವಡಿಸಿಕೊಳ್ಳುವ ಮೂಲಕ ಕಾರ್ಯನಿರ್ವಹಿಸುವಂತಾಗಬೇಕಾಗಿದೆ ಎಂದು ಕರೆ ನೀಡಿದರು. ಅದರೆ ಇಂದು ಪತ್ರಕರ್ತರ ವೃತಿಯಲ್ಲಿ ಯಾರ ಕಾವಲು ನಾಯಿಗಳಾಗಿ ಕೆಲಸ ನಿರ್ವಹಿಸಲಾಗುತ್ತಿದೆಯೇ? ಎಂದು ಆತ್ಮವಿಮರ್ಷೆ ಮಾಡಿಕೊಳ್ಳಬೇಕೆಂದು ತಿಳಿಸಿದರು.
ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲಾ ಪತ್ರಕರ್ತರ ಸಹಕಾರ ಸಂಘದ ಅಧ್ಯಕ ಹಾಗೂ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಕಾರ್ಯಕಾರಿಣಿ ಸದಸ್ಯರಾದ ಕೆ.ಎಸ್.ಗಣೇಶ್ ಮಾತನಾಡಿ ಕಳೆದ 1938ರಲ್ಲಿ ಏಕಿಕರಣದ ಮೊದಲು ಮೈಸೂರು ಪತ್ರಕರ್ತರ ಸಂಘವನ್ನು ಅಂದಿನ ಮೈಸೂರಿನ ಮಹಾರಾಜರಾದ ನಾಲ್ವಡಿ ಕೃಷ್ಣರಾಜ ಒಡೆಯರ ಸಲಹೆ ಮೇರೆಗೆ ಪತ್ರಕರ್ತರ ಸಂಘವನ್ನು ಸ್ಥಾಪಿಸಿದರು, ಆಗ ನಮ್ಮ ಜಿಲ್ಲೆಯಲ್ಲಿ 2-3 ಮಂದಿ ಮಾತ್ರ ಇದ್ದರೂ ರಾಜ್ಯಾದಾದ್ಯಂತ ಇಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘವು ಬೀದರ್ನಿಂದ ಕೋಲಾರದ ಉದ್ದಗಲಕ್ಕೂ ಹೆಮ್ಮರವಾಗಿ ಬೆಳೆದು ಸುಮಾರು 5 ಸಾವಿರಕ್ಕೂ ಹೆಚ್ಚು ಮಂದಿ ಅಧಿಕೃತ ಪತ್ರಕರ್ತರು ಸಂಘದ ಸದಸ್ಯರಾಗಿದ್ದಾರೆ ಎಂದರು.
ಸ್ವಾತಂತ್ರ್ಯದ ನಂತರ ರಾಜ್ಯದ ಏಕೀಕರಣ ಸಂದರ್ಭದಲ್ಲಿ ಕರ್ನಾಟಕ ಪತ್ರಕರ್ತರ ಸಂಘ ಎಂದು ಸಂಘದ ಹೆಸರು ಬದಲಾಯಿಸಿತು, ಪತ್ರಕರ್ತರ ಸಂಘದ ಹಿತರಕ್ಷಣೆ ಜೂತೆಗೆ ಪತ್ರಕರ್ತ ಕಲ್ಯಾಣದ ಕಾರ್ಯಕ್ರಮಗಳಿಗೆ ಗಮನ ಹರಿಸಿ ಕಾರ್ಮಿಕ ಕಾಯ್ದೆಗಳನ್ನು ಸಂಘದ ವ್ಯಾಪ್ತಿಗೆ ಒಳಪಡೆಸಲಾಯಿತು ಎಂದ ಅವರು ಕಳೆದ 1982ರಲ್ಲಿ ಜಿ.ಕೆ. ಸತ್ಯ ನೇತೃತ್ವದಲ್ಲಿ ನಡೆದ ಹೋರಾಟದಿಂದಾಗಿ 62 ದಿನಗಳ ಪತ್ರಿಕಾ ಕಛೇರಿಯನ್ನು ಮುಚ್ಚಿಸುವ ಮೂಲಕ ಪಾಠ ಕಲಿಸಿದ ಸಂದರ್ಭವನ್ನು ನೆನಪಿಸಿಕೊಂಡ ಅವರು ಇಂದು ಪತ್ರಕರ್ತರಿಗೆ ದೊಡ್ಡ ಪತ್ರಿಕೆಗಳಲ್ಲಿ, ದೊಡ್ಡ ದೊಡ್ಡ ಹುದ್ದೆಗಳಲ್ಲಿ ಇರುವವರಿಗೆ ಸೇವಾ ಭದ್ರತೆ ಇಲ್ಲದೆ ಇರುವುದು ಸೇರಿದಂತೆ ಇಂದು ಬಿ.ಬಿ.ಸಿ. ಮೇಲೆಯೇ ಐ.ಟಿ. ದಾಳಿ ಮಾಡಿಸಿ ಬೆದರಿಸುವಂತ ಮಟ್ಟಕ್ಕೆ ಇಳಿದಿರುವುದು ಪತ್ರಿಕಾ ಸ್ವಾತಂತ್ರ್ಯಕ್ಕೆ ಧಕ್ಕೆಯುಂಟು ಮಾಡುತ್ತಿರುವುದು ವಿಷಾಧನೀಯ ಸಂಗತಿಯಾಗಿದೆ ಎಂದರು.
ಕನ್ನಡ ಏಕೀಕರಣ ಸಂದರ್ಭದಲ್ಲಿ ಅಂದಿನ ಮೈಸೂರಿನ ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಸಲಹೆ ಮೇರೆಗೆ ಡಿ.ವಿ.ಜಿ. ಅವರು ಕೋಲಾರದಲ್ಲಿ ಪ್ರಪ್ರಥಮವಾಗಿ ಸ್ಥಾಪಿಸಿದ ಪತ್ರಕರ್ತರ ಸಂಘದಿಂದಾಗಿ ರಾಜ್ಯದಲ್ಲಿ ಇಂದು ಕೆ.ಡಬ್ಲೂಜೆ.ಸಿ.ಸ್ಥಾಪಸಿಲು ಕಾರಣವಾಯಿತು. ಕೋಲಾರಕ್ಕೆ ಪ್ರಪ್ರಥಮ ಮುಖ್ಯಮಂತ್ರಿ ನೀಡಿದ್ದು ಹಾಗೂ ಪ್ರಥಮವಾಗಿ ಪತ್ರಕರ್ತರ ಸಂಘ ಸ್ಥಾಪಿಸಿದ್ದು ಕೋಲಾರ ಜಿಲ್ಲೆಯಾಗಿದೆ ಎಂದು ಹೆಮ್ಮೆಯಿಂದ ನುಡಿದರು.
ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಕಾರ್ಯಕಾರಿಣಿ ಸದಸ್ಯರಾದ ವಿ.ಮುನಿರಾಜು ಮಾತನಾಡಿ, ಡಿ.ವಿ.ಜಿ.ಅವರು ಕೋಲಾರದ ಮುಳಬಾಗಿಲು ತಾಲ್ಲೂಕಿನವರು ಆಗಿದ್ದು ಪತ್ರಕರ್ತರ ಸಂಘವನ್ನು ಪ್ರಪ್ರಥಮವಾಗಿ ಸ್ಥಾಪಿಸುವ ಮೂಲಕ ಪತ್ರಿಕಾ ರಂಗಕ್ಕೆ ಶಕ್ತಿ ತುಂಬಿದರು, ಅವರು ಸಂಘ ಸ್ಥಾಪಿಸಿದ ದಿನವನ್ನು ಸಂಸ್ಥಾಪಕರ ದಿನವನ್ನಾಗಿ ನಮ್ಮ ಸಂಘದ ಮೂಲಕ ಪ್ರಥಮವಾಗಿ ಆಚರಿಸುತ್ತಿರುವುದು ತಡವಾದರೂ ಶ್ಲಾಘನೀಯ ಕಾರ್ಯಕ್ರಮವಾಗಿದೆ ಎಂದು ಅಭಿಪ್ರಾಯಪಟ್ಟರು.
ಹಿರಿಯ ಪತ್ರಕರ್ತ ಎಸ್.ಸಚ್ಚಿದಾನಂದ ಮಾತನಾಡಿ, ಡಿ.ವಿ.ಜಿ. ಅವರು ಪತ್ರಕರ್ತರ ಸಂಘವನ್ನು ಸ್ಥಾಪಿಸಿದ ದಿನವನ್ನು ಪತ್ರಿಕಾ ದಿನಾಚರಣೆಯನ್ನು ಆಚರಿಸಿದಂತೆ ಸಂಸ್ಥಾಪನಾ ದಿನವನ್ನು ಆಚರಿಸುವಂತಾದರೆ ಅರ್ಥಪೂರ್ಣವಾಗುವುದು ಎಂದು ಅಭಿಪ್ರಾಯಪಟ್ಟರು.
ಹಿರಿಯ ಪತ್ರಕರ್ತ ಸಾಕ್ಷಿ ಮಂಜುನಾಥ್ ಮಾತನಾಡಿ, ಪತ್ರಕರ್ತರ ಸಂಘವು ಇಂದು ಬೃಹದಾಕಾರವಾಗಿ ಬೆಳೆದಿರುವುದಕ್ಕೆ ಭಗವದ್ಗೀತೆಯಲ್ಲಿ ವಾಮನಮೂರ್ತಿಯ ಮೂರನೇ ಹೆಜ್ಜೆ ಇಡಲು ಬೃಹದಕಾರವಾಗಿ ಬೆಳೆದಂತೆ ಪತ್ರಿಕಾ ಕ್ಷೇತ್ರವಾಗಿ ಬೆಳೆದು ಸಮಾಜದಲ್ಲಿ ಲೋಪ ದೋಷಗಳನ್ನು ಮೆಟ್ಟಿ ನಿಲ್ಲುವಂತಾಗಬೇಕೆಂದು ಆಶಿಸಿದರು.
ಕೆ. ಪ್ರಕಾಶ್(ಮಾಮಿ) ಸ್ವಾಗತಿಸಿ, ಕೆ.ಆಸೀಫ್ಪಾಷ ವಂದಿಸಿದರು. ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತರಾದ ಕೆ.ಬಿ.ಜಗದೀಶ್, ಅಬ್ಬಣಿ ಶಂಕರ್, ಬಿ.ಎಸ್.ಸ್ಕಂದಕುಮಾರ್, ಓಂಕಾರಮೂರ್ತಿ, ಸಿ.ವಿ.ನಾಗರಾಜ್, ಬಂಗಾರಪೇಟೆ ಎಂ.ಸಿ.ಮಂಜುನಾಥ್, ಕೆ.ರಮೇಶ್, ವೆಂಕಟೇಶಪ್ಪ, ಮುಕ್ತಿಯಾರ್ ಅಹಮದ್, ಸೈಯುದ್ ಪರ್ವೀಜ್, ಎ.ಬಾಲನ್, ಎನ್.ಗಂಗಾಧರ್ ಉಪಸ್ಥಿತರಿದ್ದರು.